ಪ್ರಾಥಮಿಕ ಶಿಕ್ಷಕರ 13,500 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ:  ಮಧು ಬಂಗಾರಪ್ಪ

3 years ago

#posts #primary #teachers #created #MadhuBangarappa

ಬೆಂಗಳೂರು: ಪ್ರಾಥಮಿಕ ಶಿಕ್ಷಕರ ನೇಮಕಾತಿ ಕುರಿತಂತೆ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಕೆಯಾಗಿದೆ. ಇದನ್ನು ‌ಆದಷ್ಟು ಇದನ್ನು ಇತ್ಯರ್ಥಗೊಳಿಸಲು ಪ್ರಯತ್ನ ನಡೆಸಲಾಗುತ್ತಿದೆ. ಇದರ ನಂತರ ಖಾಲಿ ಇರುವ 13,500 ಹುದ್ದೆಗಳನ್ನು ಮಾಡಿಕೊಳ್ಳಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿಧಾನಪರಿಷತ್‍ನಲ್ಲಿ ತಿಳಿಸಿದ್ದಾರೆ.

ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ನ ಮಂಜುನಾಥ್ ಭಂಡಾರಿ ಪ್ರಶ್ನೆಗೆ ಉತ್ತರಿಸಿದ ಅವರು, ವಯೋಮಿತಿ ಸಡಿಲ ಸೇರಿ ಹಲವು ವಿಷಯಗಳನ್ನು ಪ್ರಶ್ನಿಸಿ ಕೆಲವರು ಕೋರ್ಟ್ ‌ಮೆಟ್ಟಿಲೇರಿದ್ದಾರೆ. ಇದು ವಿಚಾರಣಾ ಹಂತದಲ್ಲಿದೆ ಎಂದು ಹೇಳಿದರು.

ಕೋರ್ಟ್ ನಲ್ಲಿರುವ ಪ್ರಕರಣ ‌ಇತ್ಯರ್ಥಗೊಳಿಸಲು ಅಡ್ವಕೇಟ್ ಜನರಲ್ ಹಾಗೂ ಇಲಾಖೆಯ ಅಧಿಕಾರಿಗಳು ಮಾತುಕತೆ ನಡೆಸಿದ್ದು, ನ್ಯಾಯಾಲಯದಿಂದ ಇತ್ಯರ್ಥವಾದ ನಂತರ ನೇಮಕಾತಿ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ತಿಳಿಸಿದರು

.

ಸರ್ಕಾರಿ ಶಾಲೆಗಳಿಗೆ ಈಗಾಗಲೇ ಶೇ.85ರಷ್ಟು ಸಮವಸ್ತ್ರಗಳು, ಶೂ, ಸಾಕ್ಸ್ ಪೂರೈಕೆ ಮಾಡಿದ್ದೇವೆ. 1 ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಸರ್ಕಾರ ಶಾಲಾ ಮಕ್ಕಳಿಗೆ ವಿದ್ಯಾ ವಿಕಾಸ ಯೋಜನೆಯಡಿ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ಉಚಿತವಾಗಿ ನೀಡಲಾಗುತ್ತದೆ. ಎಸ್‍ಎಟಿಎಸ್ ಮಕ್ಕಳ ಸಂಖ್ಯೆಗನುಗುಣವಾಗಿ ಶೂ ಮತ್ತು ಸಾಕ್ಸ್ ಖರೀದಿ ಮಾಡುವಂತೆ ಎಸ್‍ಡಿಎಂಸಿಗಳಿಗೆ ಒಟ್ಟು 125 ಕೋಟಿ ರೂ. ಅನುದಾನ ಮಾಡಿದ್ದೇವೆ ಎಂದು ಹೇಳಿದರು.

ಒಂದರಿಂದ ರಿಂದ 10ನೇ ತರಗತಿಯ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶೇ.83ರಷ್ಟು ಮಕ್ಕಳಿಗೆ ಸಮವಸ್ತ್ರಗಳು ಈಗಾಗಲೇ ತಲುಪಿದೆ. ಇನ್ನು ಶೇ.17ರಷ್ಟು ಮಾತ್ರ ಬಾಕಿ ಇದ್ದು ಈ ತಿಂಗಳ ಅಂತ್ಯದೊಳಗೆ ಸರಬರಾಜಾಗಲಿದೆ ಎಂದರು.

ವಿದ್ಯಾವಿಕಾಸ ಯೋಜನೆಯಡಿ ಪ್ರಸಕ್ತ ಸಾಲಿನ 1ರಿಂದ 10ನೇ ತರಗತಿಯವರಿಗೆ ಪಠ್ಯಪುಸ್ತಕವನ್ನು ಮುದ್ರಿಸಿ ಶಾಲೆಗಳಿಗೆ ಸರಬರಾಜು ಮಾಡಲಾಗುತತ್ತದೆ. ವಿದ್ಯಾರ್ಥಿಗಳ ಬೋಧನೆ, ಪಠ್ಯಕ್ರಮಗಳಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದರು.

ಒತ್ತುವರಿ ತೆರವು: ರಾಜ್ಯದಲ್ಲಿ ಯಾರಾದರೂ ಕಾನೂನು ಬಾಹಿರವಾಗಿ  ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದರೆ ನಿರ್ದಾಕ್ಷಿಣ್ಯವಾಗಿ ತೆರವು ಕಾರ್ಯ ಮಾಡಲಿದ್ದೇವೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ  ಹೇಳಿದರು. ಮುನಿರಾಜುಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯಾದ್ಯಂತ ಅರಣ್ಯಭೂಮಿಯನ್ನು ಹಲವು ಪ್ರಭಾವಿಗಳು ಕಾನೂನು ಬಾಹಿರವಾಗಿ ವಶಪಡಿಸಿಕೊಂಡಿರುವುದು ನಮ್ಮ ಗಮನಕ್ಕೆ ಬಂದಿದೆ. ಯಾರು ಎಷ್ಟೇ ಪ್ರಭಾವಿಗಳಿರಲಿ ತೆರವು ಕಾರ್ಯ ಮಾಡಿಯೇ ತೀರುತ್ತೇವೆ. ಸರ್ಕಾರ ಕೈಕಟ್ಟಿ ಕೂರುವುದಿಲ್ಲ ಎಂದು ಎಚ್ಚರಿಸಿದರು.

704 ಪ್ರಕರಣಗಳಲ್ಲಿ 2184 ಅರಣ್ಯ ಭೂಮಿಯನ್ನು ತೆರವುಗೊಳಿಸಲಾಗಿದೆ. 2013 ಪ್ರಕರಣಗಳು ಸುಪ್ರೀಂಕೋರ್ಟ್‍ನಲ್ಲಿವೆ. 1051 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದ್ದು, 399 ಪ್ರಕರಣಗಳಿಗೆ ತಡೆಯಾಜ್ಞೆ ನೀಡಲಾಗಿದೆ. ತಡೆಯಾಜ್ಞೆಯನ್ನು ತೆರವುಗೊಳಿಸಲು ಇಲಾಖಾ ಮಟ್ಟದಲ್ಲಿ ವಿಶೇಷ ಕಾನೂನು ಘಟಕವನ್ನು ತೆರೆಯಲಾಗುತ್ತಿದೆ ಎಂದು ತಿಳಿಸಿದರು.

5‌ ಕೋಟಿ ಗಿಡ: ಬಿಜೆಪಿಯ ಶಾಂತಾರಾಮ ಸಿದ್ದಿ ಅವರ ಪ್ರಶ್ನೆಗೆ ಉತ್ತರಿಸಿದ ಖಂಡ್ರೆ, ಅರಣ್ಯವನ್ನು ಯಥೇಚ್ಛವಾಗಿ ಬಳಸುವ ಸದುದ್ದೇಶದಿಂದ ಪ್ರಸಕ್ತ ವರ್ಷ 5 ಕೋಟಿ ಗಿಡಗಳನ್ನು ನೆಡುವ ಗುರಿ ಇದೆ ಎಂದು ತಿಳಿಸಿದರು.

ಉತ್ತರಕನ್ನಡ ಜಿಲ್ಲೆಯಲ್ಲಿ ಈ ಬಾರಿ ಒಟ್ಟು 1 ಕೋಟಿ 22 ಲಕ್ಷ ಗಿಡಗಳನ್ನು ನೆಡುವ ಗುರಿಯೊಂದಿಗೆ ಗಿಡ ನೆಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. 2-7-2023ರವರೆಗೆ ಒಟ್ಟು 17.62 ಗಿಡಗಳನ್ನು ನೆಡಲಾಗಿದೆ. ನೆಟ್ಟಿರುವ ಎಲ್ಲಾ ಗಿಡಗಳು ಉತ್ತಮ ಸ್ಥಿತಿಯಲ್ಲಿದ್ದು, ಯಾವುದೇ ಗಿಡಗಳು ನಶಿಸಿಲ್ಲ ಎಂದು ಸ್ಪಷ್ಟಪಡಿಸಿದರು

ನ್ಯಾಯಬೆಲೆ ಅಂಗಡಿ: ರಾಜ್ಯದಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಪರವಾಗಿ ನೀಡುತ್ತಿಲ್ಲ. ಆದರೆ, ಹೊಸ ನ್ಯಾಯಬೆಲೆ ಅಂಗಡಿಗೆ ಅರ್ಜಿ ಸಲ್ಲಿಸಲು ಕರ್ನಾಟಕ ಅಗತ್ಯ ವಸ್ತುಗಳ ನಿಯಂತ್ರಣ ತಿದ್ದುಪಡಿ ನಿಯಮದಲ್ಲಿ ಅವಕಾಶವಿದೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಜೆಡಿಎಸ್ ನ ಸೂರಜ್ ರೇವಣ್ಣ ಅವರ ‌ಪ್ರಶ್ನೆಗೆ ಉತ್ತರಿಸಿದರು.

ಈ‌ ನಿಯಮಗಳ ಅನ್ವಯ ಸರ್ಕಾರದ ನಿಗಮಗಳು, ಗ್ರಾ.ಪಂ., ಸ್ಥಳೀಯ ನಗರ ಸಂಸ್ಥೆಗಳು ಸಹಕಾರ ಸಂಘಗಳು ಟಿಎಟಿಸಿಎಂಎಸ್, ಕೋ ಆಪರೇಟಿವ್, ಮಾರ್ಕೆಟಿಂಗ್ ಸೊಸೈಟಿ, ಹಾಪ್‍ಕಾಮ್ಸ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಸೇರಿದಂತೆ ಮತ್ತಿತರ ಸಂಘ ಸಂಸ್ಥೆಗಳ ಮೂಲಕ ಅರ್ಜಿ ಸಲ್ಲಿಸಿದರೆ ಅಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು

Leave a Reply