ಎರಡೂ ರಾಜ್ಯಗಳ ನಡುವೆ ಸಂಬಂಧ ಹದಗೆಡಬಾರದು: ಬಸವರಾಜ ಬೊಮ್ಮಾಯಿ

3 years ago

ಬೆಂಗಳೂರು/ದಾವಣಗೆರೆ: ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದದ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದೆ. ಬಸ್ ಸೇರಿದಂತೆ ರಾಜ್ಯದ ವಾಹನಗಳ ಮೇಲೆ ಕಲ್ಲು ತೂರಾಟದಂತಹ ಪ್ರಕರಣಗಳು ನಡೆದಿದ್ದು ಇದರ ಬಗ್ಗೆ ಸರ್ಕಾರ ತೀವ್ರ ನಿಗಾ ವಹಿಸಿದೆ.

ಅಲ್ಲದೆ ನೆರೆ ರಾಜ್ಯದಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆದ  ಪ್ರಕರಣಗಳು ವರದಿಯಾಗಿವೆ ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ಯಾವುದೇ ರೀತಿಯ ದೌರ್ಜನ್ಯ ನಡೆಯದಂತೆ ಕ್ರಮ ಕೈಗೊಳ್ಳಲು ಅಲ್ಲಿನ ಗೃಹ ಇಲಾಖೆ ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸುವಂತೆ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ.

ಮಹಾರಾಷ್ಟ್ರ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿರುವಂತೆ ನಮ್ಮ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ. ಶೀಘ್ರದಲ್ಲಿ ಅವರು ಅಲ್ಲಿನ ಅಧಿಕಾರಿಗಳನ್ನು ಸಂಪರ್ಕಿಸಿ ಚರ್ಚೆ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎರಡೂ ರಾಜ್ಯಗಳ ನಡುವೆ ಸಂಬಂಧ ಹದಗೆಡಬಾರದು. ಮಹಾರಾಷ್ಟ್ರದಲ್ಲಿರುವ ಕನ್ನಡಿಗರು ಹಾಗೂ ಅಲ್ಲಿಗೆ ಸಂಚರಿಸುವ ಕರ್ನಾಟಕದ ವಾಹನಗಳಿಗೆ ಸಂಪೂರ್ಣ ರಕ್ಷಣೆ ನೀಡುವಂತೆ ಮನವಿ ಮಾಡಲಾಗಿದೆ ಈ ಸಂಬಂಧ ಮಹಾರಾಷ್ಟ್ರದ ಗೃಹ ಇಲಾಖೆ ಅಧಿಕಾರಿಗಳಿಗೆ ರಾಜ್ಯದ ಅಧಿಕಾರಿಗಳು ಮಾತುಕತೆ ನಡೆಸುತ್ತಾರೆ ಎಂದರು.

ಭಾರತ ರಾಜ್ಯಗಳ ಒಕ್ಕೂಟ. ಪ್ರತಿ ರಾಜ್ಯಕ್ಕೂ ತನ್ನದೇ ಆದ ಹಕ್ಕುಗಳಿವೆ. ನೆಲ, ಜಲ, ಗಡಿ ಸಮಸ್ಯೆಗಳು ಎದುರಾ ದಾಗ ಕಾನೂನಿನ ಅನ್ವಯ ನಡೆದುಕೊಳ್ಳಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವುದು ಆಯಾ ರಾಜ್ಯಗಳ ಕರ್ತವ್ಯ. ನೆರೆಯ ರಾಜ್ಯಗಳು ಶಾಂತಿ ಕಾಯ್ದುಕೊಳ್ಳಬೇಕು ಎಂದು ಹೇಳಿದರು.

ಕಾನೂನು ಹೋರಾಟ: ರಾಜ್ಯ ಪುನರ್ವಿಂಗಡಣಾ ಕಾಯ್ದೆ ಮತ್ತು ಸಂವಿಧಾನ 3ನೇ ವಿಧಿ ಅನುಸಾರ ಮಹಾರಾಷ್ಟ್ರ ಗಡಿ ವಿವಾದ ಹಿನ್ನಲೆಯಲ್ಲಿ 2004 ರಲ್ಲಿ ಹೂಡಿದ ದಾವೆಗೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಈ ವಾದಕ್ಕೆ ಹೆಚ್ಚಿನ ಒತ್ತು ನೀಡಿ ರಾಜ್ಯ ಸರ್ಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಸಮರ್ಥವಾದ ಕಾನೂನು ಹೋರಾಟಕ್ಕೆ ಸಿದ್ದತೆ ಮಾಡಿಕೊಂಡಿದೆ ಎಂದು ದಾವಣಗೆರೆಯಲ್ಲಿ ತಿಳಿಸಿದರು.

ಶಾಸಕ ಎಸ್.ವಿ.ರವಿಂದ್ರನಾಥ್ ಹುಟ್ಟು ಹಬ್ಬದ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಹಿರಿಯ ನ್ಯಾಯವಾದಿಗಳಾದ ಮುಕುಲ್ ರೊಹಟಗಿ, ಉದಯ ಹೊಳ್ಳ ನೇತೃತ್ವದಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲಿ ಗಂಭೀರವಾಗಿ ವಾದ ಮಂಡಿಸಲಿದ್ದೇವೆ ಎಂದರು.

ಕಾನೂನು ಹೋರಾಟಕ್ಕೆ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರನ್ನು ಸಹ ಸರ್ಕಾರ ನೇಮಿಸಿದೆ. ನಾವು ಸಂವಿಧಾನ ಹಾಗೂ ಕಾನೂನು ಬದ್ದವಾಗಿ ಇದ್ದೇವೆ. ಕರ್ನಾಟಕದ ರಾಜ್ಯದ ಭೂ ಪ್ರದೇಶದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ ಬೇಡಿಕೆ ಹಾಗೂ ನಿಲುವುಗಳನ್ನು ವಿಚಾರಣೆ ಸಂದರ್ಭದಲ್ಲಿ ಮಂಡಿಸಲಾಗುವುದು. ಈ ಸಂಬಂಧವಾಗಿ ಮುಂದಿನ ವಾರ ಸರ್ವಪಕ್ಷ ಹಾಗೂ ಕಾನೂನು ತಜ್ಞರ ಸಭೆ ಕರೆದಿದ್ದೇನೆ. ಯಾವ ವಿಚಾರವನ್ನು ಮಂಡಿಸಬೇಕು ಎಂಬುದರ ಕುರಿತು ಕೂಲಂಕುಷವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಾಗುವುದು ಎಂದರು.

ಮಹಾರಾಷ್ಟ್ರ ಹಿರಿಯ ರಾಜಕಾರಣಿ ಶರದ್ ಪವಾರ್ ಬೆಳಗಾವಿ ಗಡಿ ವಿವಾದ ಇಟ್ಟುಕೊಂಡು ಇದುವರೆಗೂ ರಾಜಕೀಯ ಮಾಡಿದ್ದಾರೆ. ಬೆಳಗಾವಿ ಬಗೆಗಿನ ಅವರ ಕನಸ ನನಸಾಗಿಲ್ಲ, ಮುಂದೆಯೂ ನನಸಾಗುವುದಿಲ್ಲ. ಮಹಾರಾಷ್ಟ್ರದ ಜತ್ತ ಭಾಗದ ಜನರು ಕರ್ನಾಟಕದಲ್ಲಿ ವಿಲೀನವಾಗಲು ಬಹುದಿನಗಳಿಂದ ಬೇಡಿಕೆ ಇಟ್ಟಿದ್ದಾರೆ ಎಂದರು

Leave a Reply