ಬೆಂಗಳೂರು: ಹಿರಿಯ ಅಧಿಕಾರಿಗಳ ಅಮಾನತಿನೊಂದಿಗೆ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಭಾರೀ ಅಕ್ರಮಗಳು ನಡೆದಿರುವುದು ಸಾಬೀತಾಗಿದೆ ಈ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಮರು ಪರಿಷ್ಕರಣೆ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾರರ ಮಾಹಿತಿ ಕಳವು ವಿಚಾರವಾಗಿ ಕಾಂಗ್ರೆಸ್ ನೀಡಿದ ದೂರಿನ ಆಧಾರದ ಮೇಲೆ ಕೇಂದ್ರ ಚುನಾವಣಾ ಆಯೋಗವು ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದ್ದು, ನಾನು ಆಯೋಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು
ಮೇಲಿನವರ ಆದೇಶದ ಮೇರೆಗೆ ನಾವು ಕೆಲಸ ಮಾಡಿದ್ದೇವೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ. ಈ ಆದೇಶ ಕೊಟ್ಟವರು ಯಾರು ಎಂಬುದು ಗೊತ್ತಾಗಬೇಕಿದೆ ಎಂದರು.
ಸಚಿವರು, ಶಾಸಕರಿಲ್ಲದೆ ಈ ಅಕ್ರಮ ನಡೆಯಲು ಸಾಧ್ಯವಿಲ್ಲ. ಎಲ್ಲ 28 ಕ್ಷೇತ್ರಗಳಲ್ಲಿ ಈ ಅಕ್ರಮ ನಡೆದಿದೆ. ಎಲ್ಲ ಕಡೆ ತನಿಖೆ ಆಗಬೇಕು. ಇಲ್ಲೆಲ್ಲ ಮತದಾರರ ಪಟ್ಟಿ ಮರುಪರಿಷ್ಕರಣೆ ಆಗಬೇಕು ಎಂದರು.
ಯಾವುದೇ ಮತದಾರರನ್ನು ಸೇರಿಸುವಾಗ ಅಥವಾ ತೆಗೆಯುವಾಗ ಆಯಾ ವ್ಯಕ್ತಿಯ ಅರ್ಜಿ ಇರಬೇಕು. ಬಿಎಲ್ಒಗಳನ್ನು ಯಾರು ನೇಮಕ ಮಾಡಿದ್ದರು? ಈ ಬಿಎಲ್ಒಗಳನ್ನು ಕೇವಲ 3 ಕ್ಷೇತ್ರದ ಚುನಾವಣಾಧಿಕಾರಿಗಳು ಮಾತ್ರ ಮಾಡಿಲ್ಲ. ಎಲ್ಲ 28 ಕ್ಷೇತ್ರಗಳ ಚುನಾವಣಾಧಿಕಾರಿಗಳೂ ಮಾಡಿದ್ದಾರೆ. ಸುಮಾರು 6-7 ಸಾವಿರ ಮಂದಿಗೆ ಈ ಬಿಎಲ್ಒ ಗುರುತಿನ ಚೀಟಿ ಕೊಟ್ಟಿದ್ದಾರೆ. ಇದರಲ್ಲಿ ಕೆಲವರು ಅಮಾಯಕರಿದ್ದು, ಕೆಲಸಕ್ಕೆ ಎಂದು ಸೇರಿದ್ದಾರೆ ಎಂದು ವಿವರಿಸಿದರು
ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲು, ವ್ಯಕ್ತಿ ಸತ್ತಿದ್ದರೂ ಪ್ರಮಾಣ ಪತ್ರ ನೀಡಿಲ್ಲ ಎಂದರೆ ಅಕ್ಕಪಕ್ಕದ ಮನೆಯವರನ್ನು ವಿಚಾರಿಸಿ ಪರಿಶೀಲಿಸಬೇಕು. ಮನೆ ಬದಲಾವಣೆ ಮಾಡಿದ್ದರೂ ಸ್ಥಳಕ್ಕೆ ಹೋಗಿ ಪರಿಶೀಲಿಸಬೇಕು. ಆದರೆ, ಇವರು ಯಾವುದೋ ಸಂಸ್ಥೆ, ಶಾಸಕರು ಹಾಗೂ ಸಚಿವರ ಕಚೇರಿಯಲ್ಲಿ ಕುಳಿತು ಅವರಿಗೆ ಬೇಕಾದಂತೆ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಸಚಿವರೊಬ್ಬರು ಆರಂಭದಲ್ಲಿ ನನಗೆ ಈ ಸಂಸ್ಥೆ ಗೊತ್ತೇ ಇಲ್ಲ ಎಂದರು. ನಂತರ ಈ ಸಂಸ್ಥೆ ಗೊತ್ತಿದೆ, ಆದರೆ, ದುರ್ಬಳಕೆ ಮಾಡಿಕೊಂಡಿಲ್ಲ ಎಂದರು. ಸಚಿವರು ಹಾಗೂ ಈ ಸಂಸ್ಥೆ ನಿರ್ದೇಶಕರ ಮಧ್ಯೆ ದೂರವಾಣಿ ಮಾತುಕತೆ ಎಲ್ಲವೂ ಇದೆ. ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ವಿಚಾರವಾಗಿ ಸತ್ಯಾಂಶ ಹೊರಬರಲಿ ಎಂದೂ ಒತ್ತಾಯಿಸಿದರು.
ಮತದಾರರ ದತ್ತಾಂಶ ಕಳವು ಪ‍್ರಕರಣದ ಹಿಂದೆ ದೊಡ್ಡ ಸಂಚೇ ಇದೆ. ಹೀಗಾಗಿ ಹಗರಣವನ್ನು ಬಿಬಿಎಂಪಿ ತನಿಖೆ ನಡೆಸಲು ಸಾಧ್ಯವಿಲ್ಲ. ಈ ಬಗ್ಗೆ ಚುನಾವಣಾ ಆಯೋಗ ಅಥವಾ ಹೈಕೋರ್ಟ್ ನ್ಯಾಯಮೂರ್ತಿಯ ನೇತೃತ್ವದಲ್ಲಿ ತನಿಖೆ ಆಗಬೇಕು. ಅವರ ಉಸ್ತುವಾರಿಯಲ್ಲೇ ಚುನಾವಣೆಯನ್ನೂ ಮಾಡಬೇಕು ಎಂದು ಆಗ್ರಹಿಸಿದರು.



