ಬೆಂಗಳೂರು: ಪಂಚಮಸಾಲಿ ಮೀಸಲಾತಿ ಬೇಡಿಕೆ ಕುರಿತು ಆದಷ್ಟು ಬೇಗ ವರದಿ ನೀಡುವಂತೆ ಹಿಂದುಳಿದ ವರ್ಗಗಳ ಆಯೋಗಕ್ಕೆ ಕೇಳುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ನಡೆಯಲಿರುವ ವಿಧಾನ ಮಂಡಲ ಅಧಿವೇಶನ ವೇಳೆ ಆಯೋಗದಿಂದ ವರದಿ ಪಡೆಯಬೇಕೆಂಬ ಪಂಚಮಸಾಲಿ ಮಠಾಧೀಶರ ಆಗ್ರಹ ಕುರಿತು ಪ್ರತಿಕ್ರಿಯಿಸಿರುವ ಅವರು ಆಯೋಗ ಒಂದು ಸಾಂವಿಧಾನಿಕ ಸಂಸ್ಥೆ. ಇದಕ್ಕೆ ಇಂತಿಷ್ಟು ಸಮಯದಲ್ಲಿ ವರದಿ ನೀಡುವಂತೆ ಗಡುವು ನೀಡಲು ಸಾಧ್ಯವಿಲ್ಲ ಎಂದರು.
ನಾಗರಿಕ ಸಂಹಿತೆ: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವುದು ಬಿಜೆಪಿಯು ರಾಷ್ಟ್ರ ಮಟ್ಟದಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆ. ಅದನ್ನು ಈಡೇರಿಸಲು ರಾಜ್ಯ ಸರ್ಕಾರವೂ ಬಯಸಿದೆ. ಪಕ್ಷದ ಪ್ರಣಾಳಿಕೆಯಲ್ಲಿನ ಭರವಸೆಗಳ ಅನುಷ್ಠಾನಕ್ಕೆ ಸಮಿತಿ ರಚಿಸಲಾಗಿದೆ. ಅದರ ಶಿಫಾರಸಿನಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಮತದಾರರ ಮಾಹಿತಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ಕೈಗೊಂಡಿರುವ ಕ್ರಮಗಳನ್ನು ರಾಜ್ಯ ಸರ್ಕಾರ ಸ್ವಾಗತಿಸುತ್ತದೆ. ಮೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಹೆಸರುಗಳ ಕುರಿತು ಮತ್ತೊಮ್ಮೆ ಪರಿಶೀಲನೆ ನಡೆಸುವಂತೆ ಆಯೋಗ ಆದೇಶಿಸಿದೆ. ಮತದಾರರ ಪಟ್ಟಿ ಪರಿಷ್ಕರಣೆ ಅವಧಿಯನ್ನೂ ವಿಸ್ತರಿಸಿದೆ. ಈ ಕ್ರಮಗಳು ಸ್ವಾಗತಾರ್ಹ ಎಂದರು.
ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಮುಕ್ತ ತನಿಖೆಗೆ ಅವಕಾಶ ಕಲ್ಪಿಸಿದೆ. ಹಲವು ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಅಧಿಕಾರಿಗಳ ವಿಚಾರಣೆಯೂ ನಡೆಯುತ್ತಿದೆ. ಯಾವುದೇ ಅಧಿಕಾರಿ ಮತ್ತು ವ್ಯಕ್ತಿ ತಪ್ಪು ಮಾಡಿದ್ದರೂ ಅಂತಹವರನ್ನು ಪತ್ತೆಹಚ್ಟಿ, ಶಿಕ್ಷೆಗೆ ಗುರಿಪಡಿಸಬೇಕು ಎಂಬ ಉದ್ದೇಶದಿಂದ ತನಿಖೆಗೆ ಆದೇಶಿಸಲಾಗಿತ್ತು ಎಂದರು.




