ಗ್ರಾಮೀಣ ಪ್ರದೇಶದ ಜನ ಗ್ರಂಥಾಲಯಗಳಲ್ಲಿ ಸಂವಿಧಾನ ಓದಲು ಅವಕಾಶ ಕಲ್ಪಿಸಲಾಗುವುದು: ಬೊಮ್ಮಾಯಿ

3 years ago

ಬೆಂಗಳೂರು: ರಾಜ್ಯದ  ಎಲ್ಲಾ ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳಿಗೆ ಸಂವಿಧಾನದ ‌ಪ್ರತಿ ಹಾಗೂ ಗ್ರಾಮ ಪಂಚಾಯಿತಿಯ 73 ಮತ್ತು 74 ನೇ ತಿದ್ದುಪಡಿ, ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಗಳ ಪ್ರತಿಗಳನ್ನು ದೊಡ್ಡ ಪ್ರಮಾಣದಲ್ಲಿ ಕಳುಹಿಸಿ ಅಲ್ಲಿಯೂ ಸಂವಿಧಾನಬದ್ಧ ಆಡಳಿತ ನಡೆಸುವುದು ನಮ್ಮ ಆಶಯವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸಂವಿಧಾನ ದಿನದ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನರು ಅಲ್ಲಿನ ಗ್ರಂಥಾಲಯಗಳಲ್ಲಿ ಸಂವಿಧಾನ ಓದಲು ಅವಕಾಶ ಕಲ್ಪಿಸಲಾಗುವುದು ಎಂದರು.

ಸಂವಿಧಾನದ ಪ್ರತಿಗಳ ಜತೆಯಲ್ಲೇ ಸ್ಥಳೀಯ ಸಂಸ್ಥೆಗಳ ರಚನೆಯ ಮೂಲಕ ಆಡಳಿತ ವಿಕೇಂದ್ರೀಕರಣಕ್ಕೆ ಅವಕಾಶ ಕಲ್ಪಿಸಿದ ಸಂವಿಧಾನದ 73 ಮತ್ತು 74ನೇ‌ತಿದ್ದುಪಡಿಗಳಿಗೆ ಸಂಬಂಧಿಸಿದ ಗ್ರಂಥಗಳನ್ನೂ ಗ್ರಾಮೀಣ ಪ್ರದೇಶಗಳ ಗ್ರಂಥಾಲಯಗಳಿಗೆ ಒದಗಿಸಲಾಗುವುದು ಎಂದರು.

ಭಾರತದ ಸಂವಿಧಾನ ದಿನಾಚರಣೆಯನ್ನು ಎಲ್ಲೆಡೆ ಆಚರಿಸಲಾಗುತ್ತಿದೆ. ಸಂವಿಧಾನ ರಚನೆಯಾಗಿ ಭಾರತ ಸರ್ವ ಸ್ವತಂತ್ರ ಒಕ್ಕೂಟ ರಾಷ್ಟ್ರವಾಗಿ, ಸಂವಿಧಾನಬದ್ಧವಾದ ಗಣತಂತ್ರವಾಗಿ ಕೆಲಸ ಮಾಡಲು ಪ್ರಾರಂಭಿಸಿತು. ಈ ದಿನದಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅತ್ಯಂತ ಆದರ ಗೌರವ ಗಳಿಂದ ನೆನಪು ಮಾಡಿಕೊಳ್ಳುತ್ತೇವೆ ಎಂದು ಸ್ಮರಿಸಿದರು.

ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ರಚನೆಯಾದ ಸಂವಿಧಾನ ರಚನಾ ಸಮಿತಿ, ಪ್ರಜಾಪ್ರಭುತ್ವಕ್ಕೆ ಶಾಶ್ವತ ಕೊಡುಗೆಯಾಗಿ ಸಂವಿಧಾನವನ್ನು ನೀಡಿದ್ದು, ಹಲವಾರು ದೇಶಗಳ ಸಂವಿಧಾನಗಳನ್ನು ಅಭ್ಯಾಸ ಮಾಡಿ ಭಾರತಕ್ಕೆ ಲಿಖಿತ ರೂಪದ ಸಂವಿಧಾನವನ್ನು ಕೊಟ್ಟಿದ್ದಾರೆ ಎಂದರು.

ಬ್ರಿಟನ್ ನಲ್ಲಿ ಇಂದಿಗೂ ಅಲಿಖಿತ ಸಂವಿಧಾನ ಇದೆ. ಇದರಲ್ಲಿ ಭಾರತದ ಏಕತೆ, ಸಮಾನತೆ, ವ್ಯಕ್ತಿ ಸ್ವಾತಂತ್ರ್ಯ ಎಲ್ಲವೂ ಕೂಡ ಎಲ್ಲಾ ಆಯಾಮಗಳಲ್ಲಿ ನೋಡಿ ರಚನೆಯಾಗಿದ್ದರಿಂದ 75 ವರ್ಷ ಯಶಸ್ವಿ ಪ್ರಜಾಪ್ರಭುತ್ವ ವನ್ನು ಸಂವಿಧಾನಬದ್ಧವಾಗಿ ನಡೆಸಲು ಸಾಧ್ಯವಾಗಿದೆ ಎಂದರು.

ದೇಶಕ್ಕೆ ಶಾಶ್ವತವಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನೀಡಿರುವುದು ಸಂವಿಧಾನ ರಚನಾ ಸಮಿತಿಯ ದೊಡ್ಡ ಕೊಡುಗೆ. ಅದರಿಂದಾಗಿಯೇ ದೇಶದಲ್ಲಿ ಕಾನೂನಿನ ಆಡಳಿತ ಭದ್ರವಾಗಿದೆ ಎಂದರು.

ನಂತರ ವಿಧಾನಸೌಧದ ಸಮ್ಮೇಳನ‌ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆಯ ವಾಚನ ಹಾಗೂ ಸಂವಿಧಾನದ ಆಶಯದಂತೆ ನಡೆದುಕೊಳ್ಳುವ ಪ್ರಮಾಣ ಸ್ವೀಕರಿಸಲಾಯಿತು.

ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ , ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.‌ಮಣಿವಣ್ಣನ್ ಉಪಸ್ಥಿತರಿದ್ದರು.

Leave a Reply