ದಾಖಲೆಯ 3,08,182 ಕೋಟಿ ರೂಪಾಯಿಗಳ ಬಜೆಟ್ ಮಂಡಿಸಿದ ಬೊಮ್ಮಾಯಿ

3 years ago

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರ ಹಿಡಿಯಲೇಬೇಕು ಎಂಬ ಪಣ ತೊಟ್ಟಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಸಕ್ತ ಸರ್ಕಾರದ ಕೊನೆಯ ಬಜೆಟ್‌ ಮಂಡಿಸಿದ್ದು, ಇದರಲ್ಲಿ ಎಲ್ಲಾ ವರ್ಗ, ಪ್ರದೇಶ ಹಾಗೂ ಸಮುದಾಯದ ಮತದಾರರನ್ನು ಸೆಳೆಯುವತ್ತ ಗಮನ ಹರಿಸಿದ್ದಾರೆ.

ದಾಖಲೆಯ ‌ಒಟ್ಟು 3 ಲಕ್ಷದ 9 ಸಾವಿರದ 182 ಕೋಟಿ ರೂಪಾಯಿಗಳ ಬಜೆಟ್ ಮಂಡಿಸಿದ್ದು, ಶಿಕ್ಷಣ ಇಲಾಖೆಗೆ ಅತಿಹೆಚ್ಚಿನ‌ ಅಂದರೆ 37,960 ಕೋಟಿ ರೂಪಾಯಿ ತೆಗೆದಿರಿಸಿದ್ದಾರೆ.

ಜಲಸಂಪನ್ಮೂಲ ಇಲಾಖೆಗೆ 22,854 ಕೋಟಿ ರೂ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 20,494 ಕೋಟಿ ರೂ.,

ನಗರಾಭಿವೃದ್ಧಿ ಇಲಾಖೆಗೆ ‌17,938 ಕೋಟಿ ರೂ.

ಕಂದಾಯ ಇಲಾಖೆಗೆ 15,943 ಕೋಟಿ ರೂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ15,151 ಕೋಟಿ,

ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ 14,509 ಕೋಟಿ,

ಇಂಧನ ಇಲಾಖೆಗೆ 13,803 ಕೋಟಿ,

ವಸತಿಗೆ 3787.01 ಕೋಟಿ,

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ 4,608 ಕೋಟಿ,

ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ 5,676 ಕೋಟಿ

ಕೃಷಿ ಮತ್ತು ತೋಟಗಾರಿಕೆಗೆ 9,456 ಕೋಟಿ

ಲೋಕೋಪಯೋಗಿ ಇಲಾಖೆ ಗೆ 10,741 ಕೋಟಿ

ಸಮಾಜಕಲ್ಯಾಣ ಇಲಾಖೆಗೆ11,163 ಕೋಟಿ ರೂಪಾಯಿ ಅನುದಾನ ನಿಗದಿ ಪಡಿಸಿದ್ದಾರೆ.

ಹೋಗುತಿದೆ ಹಳೆ ಕಾಲ, ಹೊಸ ಕಾಲ ಬರುತಲಿದೆ. ಬರುತಲಿದೆ ಹೊಸ ದೃಷ್ಟಿ, ಹಳೆಯ ಬಾಳು ಹೋಗುತಲಿದೆ, ಹೊಸ ಬಾಳು ಬರುತಿದೆ ಎಂಬ ಕುವೆಂಪು ಅವರದ ಕವನದ ಸಾಲು ಓದುತ್ತಾ ಬಜೆಟ್ ಭಾಷಣ ಆರಂಭಿಸಿದ ಅವರು, ಹೊಸ ದೃಷ್ಟಿಕೋನದೊಂದಿಗೆ ಈ ಬಜೆಟ್ ಮಂಡಿಸುತ್ತಿದ್ದೇನೆ ಎಂದು ಹೇಳಿದರು.

ಕೋವಿಡ್ ನಂತರದ ದಿನಗಳಲ್ಲಿ ಭಾರತ ಆರ್ಥಿಕವಾಗಿ ಪುಟಿದೆದ್ದಿದ್ದು, ಕರ್ನಾಟಕವೂ ಅದೇ ಹಾದಿಯಲ್ಲಿ ಸಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಭಿವೃದ್ಧಿಪಥದಲ್ಲಿ ಸಾಗುತ್ತಿದ್ದೇವೆ. ಕೋವಿಡ್ ನಂತರದ ದಿನಗಳಲ್ಲಿ ಭಾರತ ಆರ್ಥಿಕವಾಗಿ ಪುಟಿದೆದ್ದಿದ್ದು, ಕರ್ನಾಟಕವೂ ಅದೇ ಹಾದಿಯಲ್ಲಿ ಸಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಭಿವೃದ್ಧಿಪಥದಲ್ಲಿ ಸಾಗುತ್ತಿದ್ದೇವೆ ಎಂದರು.

ಕೃಷಿಕನ ಓಲೈಕೆ: ಕೃಷಿ ಕ್ಷೇತ್ರಕ್ಕೆ ‌ಹೆಚ್ಚಿನ ಒತ್ತು ನೀಡಿರುವ ಅವರು, ನೂತನ ಕೃಷಿ ನೀತಿಯನ್ನು ಪ್ರಕಟಿಸಿದ್ದಾರೆ. ಇದರನ್ವಯ,ರೈತರಿಗೆ ನೀಡಲಾಗುತ್ತಿದ್ದ 3 ಲಕ್ಷ ರೂಪಾಯಿವರೆಗಿನ ಬಡ್ಡಿ ರಹಿತ ಸಾಲದ ಪ್ರಮಾಣವನ್ನು 5 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಿದ್ದಾರೆ.

ಈ ವರ್ಷ 30 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ ₹ 25,000 ಕೋಟಿಗಳಷ್ಟು ಸಾಲ ವಿತರಿಸಲಾಗುವುದು ಎಂದು ಬೊಮ್ಮಾಯಿ ಬಜೆಟ್‌ನಲ್ಲಿ ಘೋಷಣೆ ಮಾಡಿದರು.

ಕಿಸಾನ್ ಕಾರ್ಡ್ ಹೊಂದಿರುವ ರೈತರಿಗೆ ಭೂಸಿರಿ ಎಂಬ ಯೋಜನೆ ಪ್ರಕಟಿಸಿದ್ದು,ಇದರನ್ವಯ ತುರ್ತು ಸಂದರ್ಭದಲ್ಲಿ ರೈತರಿಗೆ ಬೀಜ, ಗೊಬ್ಬರ ವಿತರಣೆಗೆ ಸಾಧ್ಯವಾಗುತ್ತದೆ. ಇದಕ್ಕಾಗಿ 10 ಸಾವಿರ ಕೋಟಿ ರೂಪಾಯಿ ಅನುದಾನ ಒದಗಿಸಿದ್ದಾರೆ.

ಸಣ್ಣ ಮತ್ತು ಅತಿ ಸಣ್ಣ ರೈತರಿಗಾಗಿ 180 ಕೋಟಿ ವೆಚ್ಚದಲ್ಲಿ ಜೀವನ್ ಜ್ಯೋತಿ ಕಿಸಾನ್ ಎಂಬ ಯೋಜನೆ ಘೋಷಿಸಿದ್ದು, ಕೃಷಿ ಮತ್ತು ತೋಟಗಾರಿಕೆಯಲ್ಲಿ ಹನಿ ನೀರಾವರಿಗಾಗಿ ₹ 2,900 ಕೋಟಿಗೆ ಮಾರುಕಟ್ಟೆ ನೆರವು ನೀಡಲಾಗಿದೆ.

ತೋಟಗಾರಿಕೆ ಹಾಗೂ ರೇಷ್ಮೆ ಕೃಷಿಗೆ ಪ್ರೋತ್ಸಾಹ ನೀಡುವ ಉದ್ದೇಶಕ್ಕಾಗಿ ₹ 5,245 ಕೋಟಿ ವೆಚ್ಚ ಮಾಡಲಾಗಿದೆ.

ವಸತಿ ರಹಿತ ಮೀನುಗಾರರಿಗೆ ವಿಶೇಷ ಸೌಲಭ್ಯ, ದೋಣಿಗಳಿಗೆ ಮೋಟಾರ್ ಇಂಜಿನ್ ಅಳವಡಿಕೆ. ಮಹಿಳಾ ಕಾರ್ಮಿಕರಿಗೆ 500 ರೂ. ಸಹಾಯಧನ ನೀಡಲಾಗುವುದು, ಶಾಲಾ, ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.
ಆರ್ಥಿಕವಾಗಿ ಹಿಂದುಳಿದವರಿಗೆ ನೆಲೆ ಎಂಬ ವಸತಿ ಯೋಜನೆ ಘೋಷಿಸಲಾಗಿದ್ದು, ಈ ಯೋಜನೆಯಡಿ 10 ಸಾವಿರ ಸೈಟ್ ವಿತರಣೆ ಮಾಡಲಾಗುವುದು. ಪ್ರತಿ ಗ್ರಾ.ಪಂಗೆ10 ಲಕ್ಷ ರೂ. ಬೆಂಗಳೂರು ಅಭಿವೃದ್ಧಿಗೆ 10 ಸಾವಿರ ಕೋಟಿ ರೂ. ನೇಕಾರ ಸಮ್ಮಾನ್ ಯೋಜನೆಯಡಿ ಸಹಾಯಧನ ಮೊತ್ತವನ್ನು 3 ಸಾವಿರ ರೂ.ನಿಂದ 5 ಸಾವಿರ ರೂ.ಗೆ ಹೆಚ್ಚಳ ಮಾಡಲಾಗಿದೆ ಎಂದು ಹೇಳಿದ್ದಾರೆ.

ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ. ಮೀನುಗಾರರು, ಟ್ಯಾಕ್ಸಿ–ಆಟೋ ಚಾಲಕರ ಮಕ್ಕಳಿಗೂ ಯೋಜನೆ ವಿಸ್ತಣೆ.ಇದಕ್ಕಾಗಿ ಸದ್ಯ ನೀಡಲಾಗುತ್ತಿರುವ ₹ 725 ಕೋಟಿ ಜೊತೆಗೆಹೆಚ್ಚುವರಿಯಾಗಿ ₹ 141 ಕೋಟಿ ಅನುದಾನ ನೀಡಲಾಗುವುದು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ವಿಭಜಿಸಿ, ಮಕ್ಕಳಪೌಷ್ಟಿಕತೆ ಹಾಗೂ ಮಹಿಳೆಯರ ಸಬಲೀಕರಣಕ್ಕೆ ಪ್ರತ್ಯೇಕ ಇಲಾಖೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದ ಎಲ್ಲ ಮಹಿಳಾ ಕಾರ್ಮಿಕರಿಗೆ ತಲಾ 500 ರೂ. ಸಹಾಯಧನ ನೀಡಲಾಗುವುದು. ರಾಜ್ಯದಲ್ಲಿ ಕೆಲಸ ಮಾಡುವ ಎಲ್ಲ 30 ಲಕ್ಷ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲಾಗುವುದು. ಮತ್ತೊಂದೆಡೆ ಎಲ್ಲ ಶಾಲಾ- ಕಾಲೇಜು ವಿದ್ಯಾರ್ಥಿನಿಯರಿಗೂ ಉಚಿತ ಬಸ್ ಪಾಸ್ ನೀಡಲಾಗುವುದು ಎಂದು ಹೇಳಿದ್ದಾರೆ.

ಮಹಾನಗರದ ಆರೋಗ್ಯ ಆಡಳಿತ ವ್ಯವಸ್ಥೆ ಸುಧಾರಿಸುವ ಉದ್ದೇಶದಿಂದ ಬೆಂಗಳೂರು ಹೆಲ್ತ್ ಸಿಸ್ಟಮ್ ಎಂಬ ವಿನೂತನ ಯೋಜನೆ ಜಾರಿಗೆ ಈ ಬಾರಿ ಬಜೆಟ್‍ನಲ್ಲಿ ಮುನ್ನುಡಿ ಬರೆಯಲಾಗಿದೆ.
ನಗರದ ನಾಗರಿಕರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ದೊರಕಿಸಿಕೊಡಬೇಕು ಎನ್ನುವುದು ನಮ್ಮ ಸರ್ಕಾರದ ಆಧ್ಯತೆಯಾಗಿದ್ದು, ಹೀಗಾಗಿ ಎಲ್ಲ ಆಸ್ಪತ್ರೆಗಳ ನಡುವೆ ಸಮನ್ವಯ ಸಾಸಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ಬೆಂಗಳೂರು ಹೆಲ್ತ್ ಸಿಸ್ಟಮ್ ಯೋಜನೆ ಜಾರಿಗೊಳಿಸಲು ತೀರ್ಮಾನಿಸಲಾಗಿದ ಎಂದು ಅವರು ಮಾಹಿತಿ ನೀಡಿದ್ದಾರೆ.

ವಾಹನಗಳ ಚಲನವನಗಳ ಮೇಲೆ ನಿಗಾ ಇಡಲು ಮತ್ತು ಟೋಲ್‍ಗಳಲ್ಲಿ ಸುಲಭವಾಗಿ ಗ್ರಹಿಸಲು ಸಾಧ್ಯವಾಗುವಂತೆ ರಾಜ್ಯದಲ್ಲೂ ವೆಹಿಕಲ್ ಲೋಕೆಷನ್ ಟ್ರಾಕಿಂಗ್ ಸಿಸ್ಟಂ (ವಿಎಲ್‍ಟಿಎಸ್) ಅನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು

ವಾಣಿಜ್ಯ ವಾಹನಗಳ ಚಾಲಕರಿಗೆ ಮುಖ್ಯಮಂತ್ರಿ ವಿಮಾ ಯೋಜನೆಯನ್ನು ಹೊಸದಾಗಿ ಪ್ರಸ್ತಾಪಿಸಲಾಗಿದೆ. ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಲು ಮರಣದ ಸಂದರ್ಭದಲ್ಲಿ 2 ಲಕ್ಷ ರೂಪಾಯಿ, ಅಪಘಾತದಲ್ಲಿ ಮೃತಪಟ್ಟರೆ 2 ಲಕ್ಷ ಸೇರಿ ಒಟ್ಟು ನಾಲ್ಕು ಲಕ್ಷ ರೂಪಾಯಿಗಳ ವಿಮಾ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಲಾರಿ ಚಾಲಕರು ಹಾಗೂ ಇ-ಕಾಮರ್ಸ್‍ನಡಿ ಡೆಲಿವರಿ ಸೇವೆ ಒದಗಿಸುವ 16.50 ಲಕ್ಷ ಜನರ ಅವಲಂಬಿತರಿಗೆ ಈ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದ್ದಾರೆ.

ತುಮಕೂರು, ಹಾವೇರಿ, ಯಲಹಂಕ, ಕಸ್ತೂರಿನಗರ, ಸಕಲೇಶಪುರ, ಕೆಜಿಎಫ್, ಚಿಂತಾಮಣಿ, ಸಾಗರ, ಗೋಕಾಕ್, ರಾಣೆಬೆನ್ನೂರು, ಡಾಂಡೇಲಿ, ಶಿರಸಿ, ಬಾಲ್ಕಿ ನಗರಗಳ್ಲಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥಗಳನ್ನು 85 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುವುದಾಗಿ ಘೋಷಿಸಿದ್ದಾರೆ.

Leave a Reply