ಬೆಂಗಳೂರು: ಯಡಿಯೂರಪ್ಪನವರಿಗೆ ಸೆಡ್ಡು ಹೊಡೆಯಲು ನಡೆಸಿದ ಸಭೆಗೆ ಬಿಜೆಪಿಯ ಹಲವು ಶಾಸಕರು, ನಾಯಕರೇ ಗೈರಾಗಿದ್ದರು ಎಂದು ಕೆಪಿಸಿಸಿ ಹೇಳಿದೆ.
ನಿನ್ನೆ ಬಿಜೆಪಿ ಪಕ್ಷದ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಒಂದೇ ದಿನದಲ್ಲಿ ಸರ್ಕಾರ ಬದಲಾಯಿಸಬಹುದು. ಕಾಂಗ್ರೆಸ್ ನ ಶಾಸಕರು ತಮ್ಮ ಸಂಪರ್ಕದಲ್ಲಿ ಇದ್ದಾರೆ ಎಂಬ ಹೇಳಿಕೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ, ಬಿ.ಎಲ್ ಸಂತೋಷ್ ಅವರು ಸ್ವತಃ ಬಿಜೆಪಿ ಶಾಸಕರೊಂದಿಗೇ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ, ಇನ್ನೂ ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ ಎನ್ನುವುದು ಶತಮಾನದ ಜೋಕ್! ಸುಳ್ಳು ಹೇಳಿಕೊಂಡು ತಿರುಗುವ ಮೊದಲು ಸಂತೋಷ್ ಅವರು ತಮ್ಮ ಪಕ್ಷದ ಶಾಸಕರೊಂದಿಗೆ ಸಂಪರ್ಕ ಹಾಗೂ ವಿಶ್ವಾಸವನ್ನು ಹೊಂದಲು ಪ್ರಯತ್ನಿಸಲಿ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದೆ..
ಜೊತೆಗೆ ಸಂತೋಷ ಕೂಟದ ಸಭೆಗೆ ಗೈರಾದವರು, ಎಂದು ಪಟ್ಟಿಯನ್ನು ನೀಡಿರುವ ಕೆಪಿಸಿಸಿ, ಸಿ.ಟಿ ರವಿ, ಬಸವರಾಜ ಬೊಮ್ಮಾಯಿ, ವಿ. ಸೋಮಣ್ಣ, ಎಸ್.ಟಿ ಸೋಮಶೇಖರ್, ಬಿ.ಎಸ್ ಯಡಿಯೂರಪ್ಪ, ಶಂಕರ್ ಪಾಟೀಲ್ ಮುನೇನಕೊಪ್ಪ, ಶಿವರಾಂ ಹೆಬ್ಬಾರ್, ಎಂ.ಪಿ ರೇಣುಕಾಚಾರ್ಯ ಎಂದು ಹೇಳಿದ್ದು, ಪಟ್ಟಿಯಲ್ಲಿ ಇನ್ನೂ ಹಲವರಿದ್ದಾರೆ. ಬಿ.ಎಲ್ ಸಂತೋಷ್ ಅವರೇ, ನಿಮ್ಮವರೇ ನಿಮಗೆ ಸಂಪರ್ಕಕ್ಕೆ ಸಿಗಲಿಲ್ಲವೇ? ಮೊದಲು ನಿಮ್ಮವರನ್ನು ಸಂಪರ್ಕಿಸಲು ಪ್ರಯತ್ನಿಸಿ ಎಂದು ಹೇಳಿದ್ದು, #BJPvsBJP ಹ್ಯಾಷ್ ಟ್ಯಾಗ್ ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ತಿರುಗೇಟು ನೀಡಿದೆ.




