ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣವನ್ನು ಹೋರಾಟದ ಅಸ್ತ್ರವಾಗಿಸಲು ಬಿಜೆಪಿ ತೀರ್ಮಾನ

2 years ago

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರದ ವಿರುದ್ಧ ಹೋರಾಟದ ಅಸ್ತ್ರವಾಗಿ ಬಳಸಲು ಬಿಜೆಪಿ ತೀರ್ಮಾನ ಮಾಡಿದೆ.

ಈ ಪ್ರಕರಣವನ್ನು ಇಟ್ಟುಕೊಂಡು ಸಚಿವ ಬಿ.ನಾಗೇಂದ್ರ ತಲೆದಂಡಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಹೋರಾಟಕ್ಕೆ ಸಜ್ಜಾಗುತ್ತಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಹಾಗೂ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಲು ತಂತ್ರ ರೂಪಿಸಿದೆ.

ಅಧಿಕಾರಿ ಚಂದ್ರಶೇಖರನ್ ಆತಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿದ್ದಾರೆ ಎನ್ನಲಾದ ಡೆತ್ನೋಟ್ನಲ್ಲಿ ನನಗೆ ಸಾಕಷ್ಟು ಒತ್ತಡ ಮತ್ತು ಬೆದರಿಕೆ ಇತ್ತು ಎಂದು ಉಲ್ಲೇಖ ಮಾಡಿರುವುದನ್ನು ಅಸ್ತ್ರ ಮಾಡಿಕೊಂಡಿರುವ ಬಿಜೆಪಿ ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಹೋರಾಟ ಆರಂಭಿಸಿದೆ.

ಈಗಾಗಲೇ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಹಲವು ಕಡೆ ಪ್ರತಿಭಟನೆ ಮಾಡಿರುವ ಬಿಜೆಪಿ ಕಾರ್ಯಕರ್ತರು ಸಚಿವರಿಗೆ ಬಿಸಿ ಮುಟ್ಟಿಸಿದ್ದಾರೆ. ಇದೇ ಮಾದರಿಯಲ್ಲಿ ಇದೀಗ ಜಿಲ್ಲಾ, ತಾಲ್ಲೂಕು ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದವರೆಗೂ ಹೋರಾಟವನ್ನು ಹಂತಹಂತವಾಗಿ ನಡೆಸಬೇಕೆಂದು ಘಟಕಗಳಿಗೆ ಸೂಚನೆ ನೀಡಲಾಗಿದೆ.

ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಅಶ್ವತ್ಥ ನಾರಾಯಣ, ನಿಗಮದ ನಿರ್ದೇಶಕ ಚಂದ್ರಶೇಖರನ್ ಪಿ. ಆತ್ಮಹತ್ಯೆ ಪ್ರಕರಣದಲ್ಲಿ ಹಲವು ಅನುಮಾನಗಳು ವ್ಯಕ್ತವಾಗುತ್ತಿದ್ದು, ಅಧಿಕಾರಿಗಳ ದೂರವಾಣಿ ಕರೆಗಳ ವಿವರವನ್ನು ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಚಂದ್ರಶೇಖರನ್ ಬರೆದಿರುವ ಡೆತ್ನೋಟ್ನಲ್ಲಿ ಕೆಲವು ಆಘಾತಕಾರಿ ಅಂಶಗಳು ಹೊರಬಿದ್ದಿವೆ. ನಿಗಮದ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೂ ಬಾರದೆ 87 ಕೋಟಿ ಹಣವನ್ನು ವರ್ಗಾವಣೆ ಮಾಡಲಾಗಿತ್ತೆಂಬ ಆರೋಪ ಕೇಳಿಬಂದಿದೆ. ಅಧಿಕಾರಿಗಳ ಪಾತ್ರದ ಬಗ್ಗೆ ಅವರ ದೂರವಾಣಿ ಕರೆಗಳ ವಿವರಗಳನ್ನು ತನಿಖೆ ನಡೆಸಿದಾಗ ಮಾತ್ರ ಸತ್ಯಾಂಶ ಹೊರಬರುತ್ತದೆ ಎಂದರು.

ಪ್ರಕರಣ ಕುರಿತು ಸರ್ಕಾರ ಈವರೆಗೂ ಯಾರ ವಿರುದ್ಧವೂ ಎಫ್ಐಆರ್ ಅನ್ನೇ ದಾಖಲಿಸಿಲ್ಲ. ಅದಕ್ಕೂ ಮೊದಲೇ ಸಿಐಡಿ ತನಿಖೆಗೆ ಆದೇಶಿಸಿದೆ. ಇದು ಸರ್ಕಾರದ ಮೂಗಿನಡಿಯೇ ನಡೆಯುವುದರಿಂದ ನಿಷ್ಪಕ್ಷಪಾತ ತನಿಖೆ ನಡೆಯಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಯಾವುದೇ ಒಂದು ಖಾತೆಯನ್ನು ತೆರೆಯಬೇಕಾದರೆ ಹಣಕಾಸು ಇಲಾಖೆಯ ಅನುಮತಿ ಇರಬೇಕು. ಇಲ್ಲಿ ಅವಕಾಶವನ್ನೇ ಕೊಡದಿದ್ದಾಗ ಹೇಗೆ ಖಾತೆಯನ್ನು ತೆರೆಯಲಾಯಿತು? ಅಷ್ಟು ದೊಡ್ಡ ಮೊತ್ತದ ಹಣ ಎಂಡಿಯವರಿಗೆ ಗೊತ್ತಿಲ್ಲದಂತೆ ವರ್ಗಾವಣೆಯಾಗಿದೆ ಎಂದರೆ ಸಚಿವ ನಾಗೇಂದ್ರ ಅವರ ಗಮನಕ್ಕೆ ಹೋಗಿಲ್ಲವೇ? ಇಲಾಖೆಯಲ್ಲಿ ನಡೆಯುವ ವ್ಯವಹಾರಗಳು ಅವರಿಗೆ ಗೊತ್ತಿಲ್ಲವೆಂದರೆ ಇನ್ನು ಹೇಗೆ ನಿರ್ವಹಣೆ ಮಾಡುತ್ತಾರೆ? ಎಂದರು.

ಖಾತೆಯನ್ನು ಹೇಗೆ ತೆರೆದರು ಎಂಬುದನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೇಳಬೇಕು. ಇಲ್ಲಿ ನೇರವಾಗಿ ಅವರ ಮೇಲೆಯೇ ಆರೋಪ ಇರುವುದರಿಂದ ತಕ್ಷಣವೇ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

Leave a Reply