ಪ್ರಿಯಾಂಕ್‌ ಖರ್ಗೆ ರಾಜೀನಾಮೆ ನೀಡದ ಹೊರತು ಅಕ್ರಮಗಳಲ್ಲಿ ತಪ್ಪಿತಸ್ಥರಿಗೆ ನ್ಯಾಯ ಸಿಗುವುದು ಮರೀಚಿಕೆ: ಬಿಜೆಪಿ

3 years ago

#Unless #PriyankKharge #resigns #mirage #justice #guilty #irregularities #BJP

ಬೆಂಗಳೂರು: ಶಾಂತಿ, ನೆಮ್ಮದಿ, ಸಮೃದ್ಧಿಗೆ ಹೆಸರಾಗಿದ್ದ ಕರ್ನಾಟಕವನ್ನು ಅಶಾಂತಿ, ಅರಾಜಕತೆ, ಬರದ ನಾಡನ್ನಾಗಿಸಿದ ಸಂಪೂರ್ಣ ಶ್ರೇಯ ಕಾಂಗ್ರೆಸ್ ಸರ್ಕಾರದ್ದು ಎಂದು ಬಿಜೆಪಿ ಆರೋಪಿಸಿದೆ.

ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿರುವ ಬಿಜೆಪಿ, ಅಧಿಕಾರಕ್ಕೆ ಬಂದ ದಿನದಿಂದಲೂ ರಾಜ್ಯವನ್ನು ಬೇಕಾಬಿಟ್ಟಿಯಾಗಿ ಲೂಟಿ ಹೊಡೆಯುತ್ತಿರುವ ಸಿಎಂ ಸಿದ್ದರಾಮಯ್ಯ ಮತ್ತವರ ಸಚಿವರ ಗುಂಪಿನಲ್ಲಿ, ಸಿದ್ದರಾಮಯ್ಯರವರಿಗೆ ಸೆಡ್ಡು ಹೊಡೆದಂತೆ ಕಲೆಕ್ಷನ್ ನಡೆಸುತ್ತಿರುವುದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಎಂದಿದೆ.

ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಡಿಸಿಎಂ ಡಿ. ಕೆ. ಶಿವಕುಮಾರ್‌ ಅವರಿಗಿಂತ ತಮ್ಮ ಪಾಲೇ ಹೆಚ್ಚಿದೆ ಎಂದು ವಂಧಿಮಾಗದರಿಂದ ಬೇಕಾಬಿಟ್ಟಿಯಾಗಿ ಸರಣಿ ಟ್ವೀಟ್‌ಗಳನ್ನು ಮಾಡಿಸಿಕೊಂಡು ಎರೆಡೆರೆಡು ಖಾತೆಗಳನ್ನು ಪಡೆದ ಸಚಿವ ಪ್ರಿಯಾಂಕ್‌ ಖರ್ಗೆ ಅವರು, ಸಚಿವ ಸ್ಥಾನ ವಹಿಸಿಕೊಂಡ ದಿನದಿಂದ ಇಲ್ಲಿಯವರೆಗೂ ಮಾಡಿದ್ದು ಕಲೆಕ್ಷನ್‌, ಕಲೆಕ್ಷನ್‌, ಕಲೆಕ್ಷನ್‌ !! ಎಂದು ಆರೋಪಿಸಿದೆ.

ಅಧಿಕಾರ ಆರಂಭಿಸಿದ ಶುರುವಾತಿನಲ್ಲಿಯೇ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಬರುವ ಕೆ.ಆರ್.ಐ.ಡಿ.ಎಲ್‌. ಸಂಸ್ಥೆಗೆ ಸಿದ್ದರಾಮಯ್ಯರವರು ತಮ್ಮ ಶಿಷ್ಯನನ್ನು ವ್ಯವಸ್ಥಾಪಕ ನಿರ್ದೇಶಕನನ್ನಾಗಿ ಮಾಡಿದ್ದಾರೆಂದು, ಮಿನಿಸ್ಟರ್‌ ಪ್ರಿಯಾಂಕ್‌ ಖರ್ಗೆಯವರು, ಆ ವ್ಯವಸ್ಥಾಪಕ ನಿರ್ದೇಶಕರಿಗೆ ಚಾರ್ಜ್‌ ತೆಗೆದುಕೊಳ್ಳಲು ಎರಡು ತಿಂಗಳು ಕಾಯಿಸಿದ್ದರು ಎಂದಿದೆ.

ಎರಡು ತಿಂಗಳು ಕಾಯಿಸಿದ ಮೇಲೆ ಇದ್ದಕ್ಕಿದ್ದಂತೆ ದಿಢೀರೆಂದು ಚಾರ್ಜ್‌ ತೆಗೆದುಕೊಳ್ಳಲು ಅನುಮತಿ ನೀಡಲಾಯಿತು. ಅದಕ್ಕೆ ಕಾರಣವಾದ ಆ ಸಂಪನ್ಮೂಲ ಯಾವುದು ಮತ್ತು ಎಷ್ಟು ಎಂಬುದನ್ನು ಖುದ್ದು ಸಚಿವ ಪ್ರಿಯಾಂಕ್‌ ಖರ್ಗೆ ಅವರೇ ಹೇಳಬೇಕು ಎಂದು ಪ್ರಶ್ನಿಸಿದೆ.

ಇನ್ನು ಕಲ್ಬುರ್ಗಿ ಉಸ್ತುವಾರಿ ಸಚಿವಗಿರಿ ಸಿಕ್ಕ ಮೇಲಂತೂ ಪ್ರಿಯಾಂಕ್‌ ಖರ್ಗೆಯವರು ಭಾವೈಕ್ಯತೆಗೆ ಹೆಸರಾಗಿದ್ದ ಕಲ್ಬುರ್ಗಿಯನ್ನು ತಮ್ಮ ಪುಂಡ ಪಟಾಲಂಗಳ ಕೈ ಗೆ ಒಪ್ಪಿಸಿ ಪಾಳೆಗಾರಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.

ಕಲ್ಬುರ್ಗಿಯಲ್ಲಿ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ಅಕ್ರಮ ಮರಳು ದಂಧೆಯನ್ನು ತಡೆಯಲು ಹೋದ ಪೊಲೀಸ್‌ ಪೇದೆಯ ಮೇಲೆ ದುರುಳರು ಟ್ರಾಕ್ಟರ್‌ ಹರಿಸಿ ದರ್ಪ ಮೆರೆಯುತ್ತಿದ್ದಾರೆ ಎಂದಿದೆ.

ಸಚಿವ ಪ್ರಿಯಾಂಕ್‌ ಖರ್ಗೆಯವರ ಎಡಗೈ-ಬಲಗೈಗಳಾಗಿರುವವರು ಹಾಡುಹಗಲೇ ಕಲ್ಬುರ್ಗಿಯ ಮಹಾನಗರ ಪಾಲಿಕೆ ಅಧಿಕಾರಿಗಳ ಮೇಲೆ ಹಾಗೂ ಇತರ ಸರ್ಕಾರಿ ಅಧಿಕಾರಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವಂತೆ ಸಚಿವರು ತಮ್ಮ ಪಟಾಲಂಗೆ ಫ್ರೀ ಹ್ಯಾಂಡ್ ನೀಡಿರುವುದು ಕಾನೂನು ಮಾತ್ರವಲ್ಲದೆ ಕಲ್ಬುರ್ಗಿಯ ಜನತೆಗೆ ಕಣ್ಣಿಗೂ ಕಟ್ಟಿದ ಕಪ್ಪುಪಟ್ಟಿ ಎಂದು ಹೇಳಿದೆ.

ಬಸವೇಶ್ವರರ ಭಾವಚಿತ್ರವನ್ನು ಸಚಿವ ಪ್ರಿಯಾಂಕ್‌ ಖರ್ಗೆಯವರ ಮತಕ್ಷೇತ್ರದಲ್ಲಿಯೇ ವಿರೂಪಗೊಳಿಸಿದರೂ, ಸಚಿವರಿಂದ ಒಂದೇ ಒಂದು ಖಂಡನಾರ್ಹ ಹೇಳಿಕೆ ಕೂಡ ಬರಲಿಲ್ಲ. ಇದು ಸಚಿವ ಪ್ರಿಯಾಂಕ್‌ ಖರ್ಗೆಯವರಿಗೆ ಜಗಜ್ಯೋತಿ ಬಸವೇಶ್ವರರ ಬಗೆಗಿರುವ ಅಸಲಿ ಭಕ್ತಿ ಮತ್ತು ಗೌರವ!! ಎಂದಿದೆ.

ತಮ್ಮ ಸರ್ಕಾರದ ಭ್ರಷ್ಟಾಚಾರ ಹಾಗೂ ಅರಾಜಕತೆಯ ದುರಾಡಳಿತವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುವವರನ್ನು ಹುಡುಕಿ ಎಫ್.ಐ.ಆರ್‌. ಹಾಕಿಸುವ, ಫ್ಯಾಕ್ಟ್‌ ಚೆಕ್‌ ಹೆಸರಿನಲ್ಲಿ ವಾಕ್‌ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿರುವ ಪ್ರಿಯಾಂಕ್‌ ಖರ್ಗೆಯವರು, ಕೆ.ಇ.ಎ. ಪರೀಕ್ಷೆಗಳಲ್ಲಿ ಅಕ್ರಮ ನಡೆಯುವ ಸೂಚನೆ ಸಿಕ್ಕರೂ, ಅದನ್ನು ತಡೆಯಲು ವಿನಂತಿಸಿಕೊಂಡರೂ ಸುಮ್ಮನಿದ್ದದ್ದು ಏಕೆ ಎಂಬುದನ್ನು ಲೆಕ್ಕ ಹಾಕಿದರೆ ಕಾಣದ ಕೈಯ ಬೆರಳುಗಳು ನಿಧಾನವಾಗಿ ಗೋಚರಿಸುತ್ತವೆ ಎಂದು ಹೇಳಿದೆ.

ಕಿಯೋನಿಕ್ಸ್‌ನಲ್ಲಿ ಗುತ್ತಿಗೆ ನಡೆಸಿದ ಗುತ್ತಿಗೆದಾರರಿಗೆ ಇದುವರೆಗೂ ಬಿಲ್ಲಿನ ಬಾಕಿ ಬಂದಿಲ್ಲ. ಬಾಕಿ ಕೇಳಲು ಗುತ್ತಿಗೆದಾರರು ವ್ಯವಸ್ಥಾಪಕ ನಿರ್ದೇಶಕರು ಬಳಿ ತೆರಳಿದರೆ “ನಾನೇ ಇಲ್ಲಿಗೆ ಬರಲು 4 ಕೋಟಿ ನೀಡಿದ್ದೇನೆ, ಹಾಗಾಗಿ ಕಮೀಷನ್‌ ಇಲ್ಲದೇ ಬಾಕಿ ಪಾವತಿ ಸಾಧ್ಯವೇ ಇಲ್ಲ” ಎನ್ನುತ್ತಿದ್ದಾರೆ ಎಂದು ಹೇಳಿದೆ.

ಆ ₹4 ಕೋಟಿ ಯಾರಿಗೆ ನೀಡಲಾಗಿದೆ ಎಂಬುದನ್ನು ಖುದ್ದು ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆಯಯವರೇ ಸ್ಪಷ್ಟಪಡಿಸಬೇಕು, ಏಕೆಂದರೆ ಈ ಬಗ್ಗೆ ಅವರಿಗಿರುವಷ್ಟು ಆಳ ಜ್ಞಾನ ಬೇರಾರಿಗೂ ಇರಲು ಸಾಧ್ಯವಿಲ್ಲ ಎಂದಿದೆ.

ನಿರಂತರ ಭ್ರಷ್ಟಾಚಾರದಲ್ಲಿ ನಿರತವಾಗಿರುವ ಸಚಿವ ಪ್ರಿಯಾಂಕ್‌ ಖರ್ಗೆ ರಾಜೀನಾಮೆ ನೀಡದ ಹೊರತು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಆಟವಾಡಿದ ಕೆ.ಇ.ಎ. ಪರೀಕ್ಷಾ ಅಕ್ರಮದ ಹಗರಣ, ಕಿಯೋನಿಕ್ಸ್‌ ಎಂ.ಡಿ ಲಂಚ ಪ್ರಕರಣ ಸೇರಿದಂತೆ ಹಲವಾರು ಅಕ್ರಮಗಳಲ್ಲಿ ತಪ್ಪಿತಸ್ಥರಿಗೆ ನ್ಯಾಯ ಸಿಗುವುದು ಮರೀಚಿಕೆ ಎಂದು ಹೇಳಿದೆ.

Leave a Reply