ಭೋಪಾಲ್: ಮಧ್ಯಪ್ರದೇಶ ಬಿಜೆಪಿ ಸರ್ಕಾರದ ವಿರುದ್ಧ ಬಿಜೆಪಿ ಶಾಸಕರೇ ಚುನಾವಣೆಗಳಲ್ಲಿ ಆಡಳಿತ ಯಂತ್ರ ದುರುಪಯೋಗದ ಗಂಭೀರ ಆರೋಪ ಮಾಡಿದ್ದು ಬಿಜೆಪಿಗೆ ಮುಜುಗರ ಎದುರಾಗಿದೆ.
ನಾನು ಬಿಜೆಪಿಯ ವಿರೋಧಿ ಅಲ್ಲ. ಆದರೆ ಏನು ನಡೆಯುತ್ತಿದೆಯೋ ಅದು ನನಗೆ ನಿಜವಾಗಿಯೂ ನೋವುಂಟು ಮಾಡಿದೆ. ಈ ದೇಶದಲ್ಲಿ 2 ನಿಮಿಷದಲ್ಲಿ ಸರಕಾರವನ್ನು ಉರುಳಿಸಬಹುದು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಇದೇ ಆಗುತ್ತಿದೆ ಎಂದು ಸತ್ನಾದ ಮೈಹರ್ ನಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ನಾರಾಯಣ ತ್ರಿಪಾಠಿ ಬಿಜೆಪಿಯ ನಡೆಯನ್ನು ಟೀಕಿಸಿದ್ದಾರೆ.
ನಾನು ಈ ಪ್ರದೇಶದಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಪಟ್ವಾರಿ ಶ್ರೇಣಿಯಿಂದ ಉನ್ನತ ಮಟ್ಟದವರೆಗೆ ಎಲ್ಲ ಅಧಿಕಾರಿಗಳು ನಿರ್ದಿಷ್ಟ ಪಕ್ಷಕ್ಕಾಗಿ ಪ್ರಚಾರ ಮಾಡುತ್ತಿರುವುದು ಕಂಡುಬಂದಿದೆ. ಅಧಿಕಾರಿಗಳು ಬಿಜೆಪಿ ಪರ ಮತ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ನಾನು ಬಿಜೆಪಿ ಶಾಸಕನಾಗಿದ್ದೇನೆ. ಆದರೆ ಇಂತಹ ಘಟನೆಗಳನ್ನು ನೋಡಿದಾಗ ನನಗೆ ಬೇಸರವಾಗುತ್ತದೆ ಎಂದು ಅವರು ಅಲವತ್ತುಕೊಂಡಿದ್ದಾರೆ.
ತ್ರಿಪಾಠಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ಬಿಜೆಪಿಯಲ್ಲಿ ಸತ್ಯವನ್ನು ಮಾತನಾಡುವ ಧೈರ್ಯವಿರುವವರು ಇದ್ದಾರೆ. ಅಭಿನಂದನೆಗಳು ಮತ್ತು ಧನ್ಯವಾದಗಳು ನಾರಾಯಣ ತ್ರಿಪಾಠಿ ಜೀ, ನೀವು ಸಾವಿರಾರು ಸ್ಪರ್ಧಿಗಳ ನೋವನ್ನು ಬಹಿರಂಗಪಡಿಸಿದ್ದೀರಿ. ಅಧಿಕಾರಿಗಳಿಂದ ಪ್ರಜಾಪ್ರಭುತ್ವವನ್ನು ಬಹಿರಂಗವಾಗಿ ತೊಡೆದುಹಾಕಲಾಗಿದೆ’ ಎಂದಿದ್ದಾರೆ.



