ನಾಯಕತ್ವವೇ ಇಲ್ಲದ ಈ ಸರ್ಕಾರವನ್ನು ಬಿಜೆಪಿ ಹೇಗೆ ಸಹಿಸಿಕೊಂಡಿದೆ: ಎಚ್.ಡಿ.ಕುಮಾರಸ್ವಾಮಿ

5 years ago

ಬೆಂಗಳೂರು: ಕರ್ನಾಟಕದ ಸರ್ಕಾರವನ್ನು ನಡೆಸುತ್ತಿರುವ ಬಿಜೆಪಿಗೆ ಸರಿಯಾಗಿ ಹೊಂದುವ ಬಸವಣ್ಣನವರ ವಚನವಿದು.

ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ

ಹೊಸ್ತಿಲಲ್ಲಿ ಹುಲ್ಲು ಹುಟ್ಟಿ

ಮನೆಯೊಳಗೆ ರಜ ತುಂಬಿ

ಮನೆಯೊಳಗೆ ಮನೆಯೊಡೆಯನಿದ್ದಾನೊ

ಇಲ್ಲವೊ

– ಕೂಡಲ ಸಂಗಮದೇವ

ಬಿಜೆಪಿಯಲ್ಲಿ ನಾಯಕತ್ವ ಇದೆಯೋ ಇಲ್ಲವೋ ಎಂಬುದರ ಬಗ್ಗೆ ಅನುಮಾನಗಳು ಮೂಡುತ್ತಿವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಬಿಜೆಪಿಯಲ್ಲಿ ಸಿಎಂ ಬದಲಾವಣೆ ವಿಷಯ ಬಹಳ ದಿನಗಳಿಂದ ಚರ್ಚೆಯಲ್ಲಿದ್ದು, ಸಚಿವ ಸಿ.ಪಿ.ಯೋಗೇಶ್ವರ್, ಬಸನಗೌಡ ಪಾಟೀಲ ಯತ್ನಾಳ್ ಮತ್ತು ಅರವಿಂದ ಬೆಲ್ಲದ್ ಭಿನ್ನಮತದ ಮುನ್ನೆಲೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಭೆ ನಡೆಸುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, “ಸರ್ಕಾರದಲ್ಲಿ ನಾಯಕತ್ವ ಬಿಕ್ಕಟ್ಟು ಎದುರಾಗಿದೆಯಂತೆ, ನಾಯಕತ್ವ ಬದಲಿಸಲು ಸೂಕ್ತ ನಾಯಕನ ಹುಡುಕಾಟ ನಡೆದಿದೆಯಂತೆ, ಆದರೆ ಯಾವ ನಾಯಕರೂ ಸಿಗುತ್ತಿಲ್ಲವಂತೆ, ಬಿಜೆಪಿಯಲ್ಲಿ‌ ಸಿಎಂ ಆಗಬಲ್ಲ‌ ನಾಯಕನೇ ಇಲ್ಲವಂತೆ…” ಇವೆಲ್ಲವೂ ಬಿಜೆಪಿಯೊಳಗಿನ ಚರ್ಚೆಗಳ ಮಾಧ್ಯಮಗಳ ವರದಿ. ನಾಯಕತ್ವವೇ ಇಲ್ಲದ ಈ ಸರ್ಕಾರ ಇದ್ದೇನು ಉಪಯೋಗ. ವಿಸರ್ಜಿಸಿ ಮೊದಲು ಎಂದು ಅವರು ಹೇಳಿದ್ದಾರೆ.

ನಾವಿಕನಿಲ್ಲದ ನಾವೆ, ಯಜಮಾನನಿಲ್ಲದ ಮನೆ, ನಾಯಕನಿಲ್ಲದ ಸರ್ಕಾರ ಇದು ಅಪಾಯಕಾರಿ. ಅದೂ ಸಾಂಕ್ರಾಮಿಕ ಕಾಲದಲ್ಲಿ ಮತ್ತಷ್ಟು ಅಪಾಯಕಾರಿ. ಈಗಿನ ಸರ್ಕಾರದ ನಾಯಕತ್ವ ಸರಿ ಇಲ್ಲ ಎಂದು ಬಿಜೆಪಿ ಶಾಸಕರೇ ಬಂಡೆದಿದ್ದಾರಂತೆ. ಇರುವವರನ್ನು ಬದಲಿಸಲು ನಾಯಕರ್ಯಾರೂ ಇಲ್ಲವಂತೆ. ಹಾಗಾಗಿ ಈ ಸರ್ಕಾರ ಜನರ ಪಾಲಿಗೆ ಅಪಾಯಕಾರಿಯಾಗಿದೆ ಎಂದರ್ಥ ಎಂದಿದ್ದಾರೆ.

ದೇಶದ ಅಭಿವೃದ್ಧಿಗಾಗಿ ಸಮರ್ಥ ನಾಯಕತ್ವ ಪ್ರತಿಪಾದಿಸುವ ಬಿಜೆಪಿ, ನಾಯಕತ್ವವೇ ಇಲ್ಲದ ಈ ಸರ್ಕಾರವನ್ನು ಅದು ಹೇಗೆ ಸಹಿಸಿಕೊಂಡಿದೆ. ನಾಯಕತ್ವ ಸರಿ ಇಲ್ಲ ಎಂದು ಶಾಸಕರೇ ಹೇಳುತ್ತಿರುವಾಗ ನಾಯಕತ್ವ ಬದಲಿಸಲು ಏಕೆ ಇಷ್ಟು ತಿಣುಕಾಡುತ್ತಿದೆ. ಹಾಗೊಂದು ನಾಯಕತ್ವವೇ ಇಲ್ಲದ ಮೇಲೆ ಬಿಜೆಪಿ ಸರ್ಕಾರ ವಿಸರ್ಜಿಸಿ, ಅಧಿಕಾರದಿಂದ ದೂರ ಉಳಿಯಬಾರದೇಕೆ? ಎಂದು ಪ್ರಶ್ನಿಸಿದ್ದಾರೆ.

ಹಿಂದೆ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ‘ರಾಕ್ಷಸ ಸರ್ಕಾರ‘ವನ್ನು ಜನರ ಹಿತಕ್ಕಾಗಿ, ಅಭಿವೃದ್ಧಿಗಾಗಿ ಕೆಡವಿದ “ಸಮಾಜ ಸುಧಾರಕರು” ಇರುವ ಪಕ್ಷ ಬಿಜೆಪಿ. ಈಗ ನಾಯಕತ್ವವಿಲ್ಲದ ‘ಅಪಾಯಕಾರಿ ಸರ್ಕಾರ‘ದ ಬಗ್ಗೆ ಆ ಸಮಾಜ ಸುಧಾರಕರು ಸುಮ್ಮನಿರುವುದಾದರೂ ಹೇಗೆ. ಈ ಸಮಾಜ ಸುಧಾರಕರ ದಿವ್ಯ ಮೌನ ನನಗೆ ಆಶ್ಚರ್ಯ ತರಿಸುತ್ತಿದೆ. ಆತಂಕ ಉಂಟು ಮಾಡಿದೆ ಎಂದು ಕಿಡಿಕಾರಿದ್ದಾರೆ.

ಕೋವಿಡ್‌, ಲಾಕ್‌ಡೌನ್‌ಗಳಿಂದ ತತ್ತರಿಸಿರುವ ಕ್ಷೋಭೆಯ ಕಾಲವಿದು. ಆಳುವವರು ಅಂದುಕೊಂಡಷ್ಟು ನೆಮ್ಮದಿಯಿಂದ ಜನ ಬದುಕುತ್ತಿಲ್ಲ. ಅವರ ಬದುಕು ಕಷ್ಟದಲ್ಲಿದೆ. ಈ ಸಂದರ್ಭದಲ್ಲಿ ಆಡಳಿತಾರೂಢ  ಬಿಜೆಪಿಯಲ್ಲಿ ನಡೆಯುತ್ತಿರುವ ಈ ಅಧಿಕಾರ ದಾಹದ ವರ್ತನೆ ಜನರನ್ನು ಗೇಲಿ ಮಾಡುತ್ತಿದೆ. ಇದರ ಕಿಂಚಿತ್ತು ಪಾಪಪ್ರಜ್ಞೆಯಾದರೂ ಬಿಜೆಪಿಗೆ ಇರಬೇಕಿತ್ತು ಎಂದಿದ್ದಾರೆ.

ಇನ್ನೊಂದೆಡೆ, ಬಿಜೆಪಿಯ ದುರಾಡಳಿತ ಕಂಡು ಜನರಿಗೆ ವೈರಾಗ್ಯ ಬಂದಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ‌. ಈ ದುರಾಡಳಿತ ಬರಲು, ಅದರಿಂದ ಜನರಿಗೆ ವೈರಾಗ್ಯ ಮೂಡಲು ಕಾರಣರಾರು? ಇದೇ ಕಾಂಗ್ರೆಸ್ ಅಲ್ಲವೇ? ಮೈತ್ರಿಕೂಟದಲ್ಲಿದ್ದೂ ಮಿತ್ರ ಪಕ್ಷದ ಮೇಲಿನ ದ್ವೇಷ, ಅಸೂಯೆಯಿಂದ ಶಾಸಕರನ್ನು ಓಡಿಹೋಗುವಂತೆ ಮಾಡಿದ್ದರ ಫಲವಿದು ಎಂದಿದ್ದಾರೆ.

ಬಿಜೆಪಿ ಆಡಳಿತದಿಂದ ಈಗ ಜನರಿಗೆ ವೈರಾಗ್ಯ ಬಂದಿದೆ. ಈ ವೈರಾಗ್ಯದ ಹಿಂದಿನ ಶಕ್ತಿಯಾಗಿರುವ ಕಾಂಗ್ರೆಸ್ ಈಗ ಆತ್ಮಾವಲೋಕನ ಮಾಡಿಕೊಳ್ಳಲಿದೆಯೇ? ತಾನು ಮಾಡಿದ ತಪ್ಪಿನಿಂದ ಉಂಟಾದ ಅನಾಹುತದ ಬಗ್ಗೆ ಕಾಂಗ್ರೆಸ್ ಗೆ ಈಗ ಪಶ್ಚಾತ್ತಾಪ ಮೂಡಿದಂತಿದೆ. ಆದರೆ ಈ ಅನಾಹುತ ಹೊಣೆಗಾರ ಕಾಂಗ್ರೆಸ್ ಎಂಬುದನ್ನು  ಮಾತ್ರ ಅದರ ನಾಯಕರು ಎಂದಿಗೂ ಮರೆಯಬಾರದು ಎಂದಿದ್ದಾರೆ.

Leave a Reply