2016-2020ರ ಅವಧಿಯಲ್ಲಿ ಆಪರೇಷನ್ ಮಲ ವಶೀಕರಣಕ್ಕೆ ಒಳಗಾದವರೆಷ್ಟು?

5 years ago

ಮಾಧ್ಯಮಗಳಲ್ಲಿ “ಆಪರೇಷನ್ ಕಮಲ” ಎಂಬ ಪದ ಹಳೆಯದಾಗಿದೆ. ಆದರೆ, ಅದನ್ನು ಆಪರೇಷನ್ ಕಮಲ ಬದಲಿಗೆ “ಆಪರೇಷನ್ ಮಲ” ಎಂದು ಕರೆಯಬೇಕಿದೆ.

ಏಕೆಂದರೆ, ಚುನಾವಣೆಯಲ್ಲಿ ಐದು ವರ್ಷಕ್ಕೆ ಜನಾದೇಶ ಪಡೆದು ಆಯ್ಕೆಯಾದ ಜನಪ್ರತಿನಿಧಿಗಳು ಅಧಿಕಾರ ಮತ್ತು ಇತರ ಕಾರಣಕ್ಕೆ ರಾಜೀನಾಮೆ ಕೊಟ್ಟು, ಪಕ್ಷ, ಸಿದ್ಧಾಂತ ಮತ್ತು ಜನರ ನಂಬಿಕೆಯನ್ನು ಗಾಳಿಗೆ ತೂರಿ ಪಕ್ಷಾಂತರ ಮಾಡುತ್ತಿದ್ದಾರೆ. ವಿಶೇಷವೆಂದರೆ, ಮತಾಂತರದ ವಿರುದ್ಧ ಭಾರೀ ದೊಡ್ಡದಾಗಿ ಸದ್ದು ಮಾಡುವ ಬಿಜೆಪಿ ಪಕ್ಷಾಂತರವನ್ನು ನೀರೆರೆದು ಪೋಷಿಸುತ್ತಿದೆ.

ಇತ್ತೀಚೆಗೆ ಎಡಿಆರ್ (ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಂಸ್ಥೆ) ನಡೆಸಿರುವ ಅಧ್ಯಯನದ ಪ್ರಕಾರ, 2016-2020ರ ಅವಧಿಯಲ್ಲಿ170 ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಇದೇ ಅವಧಿಯಲ್ಲಿ 18 ಬಿಜೆಪಿ ಶಾಸಕರು ಬಿಜೆಪಿ ತೊರೆದಿದ್ದಾರೆ.

ಎಡಿಆರ್ ಸಮೀಕ್ಷೆಯ ಪ್ರಕಾರ 2016-2020ರವರೆಗೆ 405 ಕ್ಷೇತ್ರಗಳ ಮರುಚುನಾವಣೆಯ ಪೈಕಿ 182ರಲ್ಲಿ ಶಾಸಕರು ಪಕ್ಷಾಂತರ ಮಾಡಿ ಚುನಾವಣೆ ಎದುರಿಸಿದ್ದಾರೆ. ಇವರಲ್ಲಿ ಬಹುತೇಕರು ಬಿಜೆಪಿ ಸೇರಿಕೊಂಡು ಚುನಾವಣೆಯಲ್ಲಿ ಗೆದ್ದಿದ್ದಾರೆ.

2019ರ ಲೋಕಸಭೆ ಚುನಾವಣೆಯಲ್ಲಿ 5 ಬಿಜೆಪಿ ಸಂಸದರು ಪಕ್ಷ ತೊರೆದು ಅನ್ಯ ಪಕ್ಷಗಳನ್ನು ಸೇರಿದರೆ, 2016-2020ರ ಅವಧಿಯಲ್ಲಿ ಕಾಂಗ್ರೆಸ್ ನಿಂದ ಚುನಾಯಿತರಾಗಿದ್ದ 7 ರಾಜ್ಯಸಭೆ ಸದಸ್ಯರು ಪಕ್ಷ ತೊರೆದು, ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಸೇರಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು 17 ಶಾಸಕರು ರಾಜೀನಾಮೆ ನೀಡಿ ಕೆಡವಿ, ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮಧ್ಯಪ್ರದೇಶದಲ್ಲಿ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಕೊರೊನಾ ಅವಧಿಯಲ್ಲಿ ಕೆಡವಿ, ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರವನ್ನು ರಚಿಸಲಾಗಿದೆ. ಇವೆರೆಡೂ ಆಪರೇಷನ್ ಮಲದ ಸ್ಪಷ್ಟ ಉದಾಹರಣೆಗಳಾಗಿವೆ. ಜೊತೆಗೆ, ಮಣಿಪುರ, ಗೋವಾ, ಅರುಣಾಚಲಪ್ರದೇಶಗಳಲ್ಲಿ ಕೂಡ ಇಂತಹದೇ ಕುಕೃತ್ಯದ ಮೂಲಕ ಸರ್ಕಾರಗಳನ್ನು ಕೆಡವುವ ಮತ್ತು ರಚಿಸುವ ಕೆಲಸ ನಡೆದಿವೆ.

2016-2020ರ ನಡುವೆ 10 ರಾಜ್ಯಸಭೆ ಸದಸ್ಯರು ಬಿಜೆಪಿ ಸೇರಿಕೊಂಡು ಸದಸ್ಯತ್ವ ಪಡೆದಿದ್ದಾರೆ. 2019ರ ಲೋಕಸಭೆ ಚುನಾವಣೆ ವೇಳೆ 5 ಲೋಕಸಭೆ ಸದಸ್ಯರು ಕಾಂಗ್ರೆಸ್ ಸೇರಿದ್ದಾರೆ. ಮೇಲಿನ ಅಂಕಿಅಂಶಗಳನ್ನು 433 ಲೋಕಸಭೆ ಸದಸ್ಯರು ಮತ್ತು ಶಾಸಕರು ನೀಡಿರುವ ಪ್ರಮಾಣಪತ್ರಗಳನ್ನು ಅಧ್ಯಯನ ನಡೆಸಿ, ವರದಿಯನ್ನು ಸಿದ್ಧಪಡಿಸಲಾಗಿದೆ.

ಇನ್ನೊಂದು ವಿಶೇಷ ಸಂಗತಿ ಎಂದರೆ, ಬಿಜೆಪಿ ಕಾಂಗ್ರೆಸ್ ಮುಕ್ತ್ ಭಾರತ್ ಮಾಡುತ್ತೇವೆ ಎಂದು ಹೇಳುತ್ತದೆ. ಆದರೆ, ಕಾಂಗ್ರೆಸ್ ಸೇರಿದಂತೆ ಇನ್ನಿತರ ಪ್ರಭಾವಿ, ಜನಪ್ರಿಯ, ಯುವ ರಾಜಕಾರಣಿಗಳನ್ನು ಅಧಿಕಾರ,  ಹುದ್ದೆಗಳ ಆಮಿಷ ಒಡ್ಡಿ ಪಕ್ಷಕ್ಕೆ ಸೇರಿಸಿಕೊಂಡಿದೆ. ಕರ್ನಾಟಕದಲ್ಲಿ ರಾಜೀನಾಮೆ ನೀಡಿ ಪಕ್ಷಾಂತರ ಮಾಡಿದ ಬಹುತೇಕರಿಗೆ ಟಿಕೆಟ್ ನೀಡಿ, ಗೆಲ್ಲಿಸಿ, ಮಂತ್ರಿ ಸ್ಥಾನವನ್ನು ನೀಡಲಾಗಿದೆ. ಹಾಗಾದರೆ, ಇವರ ಪ್ರಕಾರ ಕಾಂಗ್ರೆಸ್ ಮುಕ್ತ್ ಭಾರತ್ ಎಂದರೆ ಕಾಂಗ್ರೆಸ್ ನಾಯಕರನ್ನು ಸೇರಿಸಿಕೊಂಡು ಸರ್ಕಾರ ಬೀಳಿಸಿ, ಬಿಜೆಪಿ ಸರ್ಕಾರ ರಚಿಸುವುದೇ? ಎಂಬ ಪ್ರಶ್ನೆ ಎದುರಾಗಿದೆ.

Leave a Reply