ಬೆಂಗಳೂರು: ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಕೆ ಗೋಪಾಲಯ್ಯ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ. ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಪದ್ಮರಾಜು ಅವರು ತಮಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಗೋಪಾಲಯ್ಯ ಕಾಮಾಕ್ಷಿಪಾಳ್ಯ ಠಾಣೆಗೆ ದೂರು ನೀಡಿದ್ದಾರೆ.
ಇದರ ಆಧಾರದಲ್ಲಿ ಎಫ್ಐಆರ್ ದಾಖಲಿಸಿರುವ ಪೊಲೀಸರು ಮಾಜಿ ಕಾರ್ಪೊರೇಟರ್ ಪದ್ಮರಾಜ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪದ್ಮರಾಜ್ ಬಳಿಯಿದ್ದ ಮೊಬೈಲ್ ಅನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ
ಕಳೆದ ರಾತ್ರಿ 11 ಗಂಟೆಗೆ ನನಗೆ ಕರೆ ಮಾಡಿದ್ದ ಪದ್ಮರಾಜು, ಅವರು ನನ್ನನ್ನು ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾಗಿ ಪೊಲೀಸ್ ಠಾಣೆಗೆ ಕೆ.ಗೋಪಾಲಯ್ಯ ದೂರು ನೀಡಿದ್ದಾರೆ. ಪದ್ಮರಾಜು ಇದಕ್ಕೂ ಮೊದಲು ಬೇರೆ ಶಾಸಕರಿಗೆ ಕೂಡ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿರುವ ಗೋಪಾಲಯ್ಯ, ತಮಗೆ ಪದ್ಮರಾಜು ಬೆದರಿಕೆ ಹಾಕಿದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ, ಗೃಹಸಚಿವ ಪರಮೇಶ್ವರ ಮತ್ತು ವಿಧಾನಸಭಾದ್ಯಕ್ಷ ಯು.ಟಿ.ಖಾದರ್ ಅವರಿಗೆ ಮಾಹಿತಿ ನೀಡಿದ್ದಾರೆ.
ತಮಗೆ ಕೊಲೆ ಬೆದರಿಕೆ ಹಾಕಿರುವ ವಿಷಯವನ್ನು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ಗೋಪಾಲಯ್ಯ, ಕಳೆದ ರಾತ್ರಿ ದೂರವಾಣಿ ಕರೆ ಮಾಡಿದ ಪದ್ಮರಾಜ್ ಅವಾಚ್ಯ ಶಬ್ದಗಳಿಂದ ತನ್ನನ್ನು ನಿಂದಿಸಿದರು. ಅಷ್ಟೇ ಅಲ್ಲ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದರು ಎಂದರು.
ಆತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯ. ಬಸವೇಶ್ವರ ನಗರದಲ್ಲಿ ಅನಧಿಕೃತವಾಗಿ ಕ್ಲಬ್ ನಡೆಸುತ್ತಿದ್ದಾನೆ. ಆದರೂ ಆತನಿಗೆ ನಾನು ಸಾಕಷ್ಟು ಸಹಾಯ ಮಾಡಿದ್ದೇನೆ. ಅದನ್ನೆಲ್ಲ ಮರೆತು ಈಗ ನನ್ನ ಹಾಗೂ ನನ್ನ ಕುಟುಂಬ ಸದಸ್ಯರನ್ನು ಕೊಲೆ ಮಾಡುವುದಾಗಿ ಹೇಳುತ್ತಿದ್ದಾನೆ. ನನಗಷ್ಟೇ ಅಲ್ಲ ಬೆಂಗಳೂರಿನ ಇತರೆ ಶಾಸಕರಿಗೂ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಆತನ ವಿರುದ್ಧ ಕಠಿಣ ಕ್ರಮ ಕೈಗೊಂಡು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ದನಿಗೂಡಿಸಿದ ಬಿಜೆಪಿಯ ಸುರೇಶ್ ಕುಮಾರ್, ಆತ ನನಗೂ ಮತ್ತು ಪ್ರತಿಪಕ್ಷ ನಾಯಕ ಅಶೋಕ್ ಅವರಿಗೂ ಬೆದರಿಕೆ ಹಾಕಿದ್ದಾನೆ. ಬೆಂಗಳೂರಿನ ಹಲವಡೆ ಅಕ್ರಮವಾಗಿ ಕ್ಲಬ್ ನಡೆಸುತ್ತಾ ಕಾನೂನುಬಾಹಿರ ಚಟುವಟಿಕೆಯಲ್ಲಿ ನಿರತನಾಗಿದ್ದಾನೆ. ಈತನ ವಿರುದ್ಧ ಪೊಲೀಸರು ಕ್ರಮ ಜರುಗಿಸಬೇಕು ಎಂದರು.
ಇದಕ್ಕೆ ಉತ್ತರಿಸಿದ ಗೃಹ ಸಚಿವ ಪರಮೇಶ್ವರ್, ಕೊಲೆ ಬೆದರಿಕೆ ದೂರಿನ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಈಗಾಗಲೇ ಆತನನ್ನು ವಶಕ್ಕೆ ಪಡೆದಿದ್ದು, ಕಾನೂನು ರೀತಿಯಲ್ಲಿ ಕ್ರಮ ಜರುಗಿಸುತ್ತಿದ್ದಾರೆ. ಕೊಲೆ ಬೆದರಿಕೆ ಹಾಕುವ ಅಕ್ರಮ ಚಟುವಟಿಕೆ ನಡೆಸುವ ವ್ಯಕ್ತಿಗಳನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ ಎಂದರು.




