ಬೆಂಗಳೂರು: ವಿಧಾನಸಭೆ ಚುನಾವಣೆಯ ಸೋಲಿನಿಂದ ರಾಜ್ಯ ಬಿಜೆಪಿ ಮೇಲೆ ಆವರಿಸಿದ್ದ ಆಂತರಿಕ ಕಲಹ ನಾಯಕತ್ವ ಕುರಿತಾದ ಬಿಕ್ಕಟ್ಟಿನ ಕಾರ್ಮೋಡ ಇದೀಗ ಕೊಂಚ ಕೊಂಚವೇ ಸರಿಯುವ ಲಕ್ಷಣಗಳು ಗೋಚರಿಸುತ್ತಿವೆ.
- ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮಾರ್ಪಡಿಸಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿಜಿ ರಾಮ್ ಜಿ ಯೋಜನೆ ವಿರುದ್ಧ ಕಾಂಗ್ರೆಸ್ ದೊಡ್ಡಮಟ್ಟದಲ್ಲಿ ಸಮರ ಘೋಷಣೆ ಮಾಡಿರುವ ಬೆನ್ನಲ್ಲೇ ಹೈಕಮಾಂಡ್ ಇದಕ್ಕೆ ತಿರುಗೇಟು ನೀಡುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಸೂಚನೆ ನೀಡಿದೆ.
ಅಲ್ಲದೆ ಇದರ ಬೆನ್ನಿಗೆ ಬರುವ ನಗರ ಸ್ಥಳೀಯ ಸಂಸ್ಥೆಗಳು ಚುನಾವಣೆಗಳು ಮತ್ತು ಜಿಲ್ಲಾ ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಪಕ್ಷವನ್ನು ಸಜ್ಜುಗೊಳಿಸಲು ಸಲಹೆ ನೀಡಿದೆ. ವರಿಷ್ಠರ ಸಲಹೆ ಮೇರೆಗೆ ನಾಯಕತ್ವದ ಕುರಿತ ಬಿಕ್ಕಟ್ಟನ್ನು ತಾತ್ಕಾಲಿಕವಾಗಿ ಪಕ್ಕಕ್ಕಿರಿಸಿರುವ ಬಿಜೆಪಿ ನಾಯಕರು ಇದೀಗ ಸಂಘಟಿತವಾಗಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟಗಳನ್ನು ಕೈಗೊಳ್ಳುವ ಮೂಲಕ ಮುಂಬರುವ ಚುನಾವಣೆಗಳಿಗೆ ಪಕ್ಷವನ್ನು ಸಜ್ಜುಗೊಳಿಸಲು ಸನ್ನದ್ಧರಾಗಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ಎಂಬ ಏಕೈಕ ಕಾರಣಕ್ಕೆ ಬಿ ವೈ ವಿಜಯೇಂದ್ರ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಅಲ್ಲದೆ ವಯಸ್ಸಿನಲ್ಲಿ ಅತ್ಯಂತ ಕಿರಿಯರಾದ ಇವರು ಯಾವುದೇ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಆಡಳಿತ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಸಾಗುತ್ತಿದ್ದಾರೆ. ಹೀಗಾಗಿ ಇವರನ್ನು ಬದಲಾಯಿಸಬೇಕು ಎಂದು ಪಟ್ಟು ಹಿಡಿದಿದ್ದ ಭಿನ್ನಮತೀಯರೂ ಕೂಡ ಇದೀಗ ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ.
ವಿಜಯೇಂದ್ರ ಅವರ ಜೊತೆಗೆ ಅಷ್ಟಕ್ಕಷ್ಟೇ ಎಂಬಂತೆ ಇರುವ ವಿಧಾನಸಭೆಯ ವಿಪಕ್ಷ ನಾಯಕ ಆರ್ ಅಶೋಕ್ ಕಳೆದ ವಾರವಷ್ಟೇ ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕಾರ್ಯಾಧ್ಯಕ್ಷ ನಿತಿನ್ ನಬೀನ್ ಮತ್ತು ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರ ಜೊತೆ ಸುದೀರ್ಘ ಮಾತುಕತೆ ನಡೆಸಿದ್ದಾರೆ.
ಈ ವೇಳೆ ವರಿಷ್ಠ ನಾಯಕರು ರಾಜ್ಯದ ನಾಯಕತ್ವದ ಕುರಿತು ಹಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ವಿಜಯೇಂದ್ರ ಅವರನ್ನು ಸದ್ಯದ ಪರಿಸ್ಥಿತಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಎಂದು ಮತ್ತೊಮ್ಮೆ ಘೋಷಣೆ ಮಾಡುವ ಸಾಧ್ಯತೆಗಳು ಇಲ್ಲ. ಅವರು ಅಧ್ಯಕ್ಷರಾಗಿಯೇ ಮುಂದುವರೆಯಲಿದ್ದಾರೆ. ಒಂದು ವೇಳೆ ಮತ್ತೊಂದು ಅವರಿಗೆ ಅವರನ್ನು ಅಧ್ಯಕ್ಷರನ್ನಾಗಿ ಘೋಷಣೆ ಮಾಡಿದರು ಅಚ್ಚರಿಯಿಲ್ಲ. ಆದರೆ ನೀವು ಕೇವಲ ಅಧ್ಯಕ್ಷ ಸ್ಥಾನ ಬದಲಾವಣೆ ಎಂದು ಪಟ್ಟು ಹಿಡಿದು ಸಂಘಟನೆ ಕಡೆ ಗಮನ ಹರಿಸದೆ ಹೋದರೆ ಪಕ್ಷ ಕರ್ನಾಟಕದಲ್ಲಿ ದಯನಿಯ ಸ್ಥಿತಿ ತಲುಪುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.
ಕೋಗಿಲು ಬಡಾವಣೆ ವಿವಾದ, ಬಳ್ಳಾರಿಯ ಗಲಭೆ, ಹುಬ್ಬಳ್ಳಿ ಘಟನೆ, ಮೆಕ್ಕೆಜೋಳ ಖರೀದಿ ಗೊಂದಲ ಸೇರಿದಂತೆ ಹಲವು ವಿಚಾರಗಳು ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶಕ್ಕೆ ಕಾರಣವಾಗಿವೆ. ಇದನ್ನು ಎಲ್ಲರೂ ಒಟ್ಟಾಗಿ ಬಿಜೆಪಿಯ ಬೆಳವಣಿಗೆಗೆ ಬಳಸಿಕೊಳ್ಳಬೇಕು ಎಂದು ನಿತಿನ್ ನಬಿನ್ ಹಾಗೂ ಬಿ ಎಲ್ ಸಂತೋಷ್ ಅವರು ಸೂಚನೆ ನೀಡಿದ್ದಾರೆ.
ಅಷ್ಟೇ ಅಲ್ಲ ಅಲ್ಲಿಂದಲೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಕರೆ ಮಾಡಿ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಬೇಕು. ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕರ್ತರ ಜೊತೆ ಸಭೆ ನಡೆಸಬೇಕು. ಕಾರ್ಯಕರ್ತರ ಬೆಂಬಲದೊಂದಿಗೆ ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಜನಾಂದೋಲನ ನಡೆಸುವ ಮೂಲಕ ಕಾಂಗ್ರೆಸ್ಸಿನ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಪರವಾದ ಹೋರಾಟ ವಿಫಲವಾಗುವಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿರುವುದಾಗಿ ಗೊತ್ತಾಗಿದೆ.
ಇದರ ಪರಿಣಾಮವಾಗಿ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜನ್ಮ ಜಯಂತಿ ಆಚರಣೆ ನೆಪದಲ್ಲಿ ಆರ್ ಅಶೋಕ್ ಮತ್ತು ರಾಜ್ಯಾಧ್ಯಕ್ಷ ವಿಜಯೇಂದ್ರ ಸುದೀರ್ಘ ಅವಧಿಯ ನಂತರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆನಂತರ ಇಬ್ಬರು ನಾಯಕರು ಒಟ್ಟಾಗಿ ಕೋಗಿಲು ಬಡಾವಣೆ, ಸಂತ್ರಸ್ಥರ ಪುನರ್ವಸತಿ ಯೋಜನೆ ಕುರಿತಂತೆ ಹಿರಿಯ ನಾಯಕ ಎಸ್ಆರ್ ವಿಶ್ವನಾಥ್ ನೇತೃತ್ವದಲ್ಲಿ ನಡೆದ ಸತ್ಯಶೋಧನಾ ಸಮಿತಿಯ ವರದಿ ಸ್ವೀಕರಿಸಿದ್ದಾರೆ. ಬಳಿಕ ಎಲ್ಲ ಪ್ರಮುಖ ನಾಯಕರೊಂದಿಗೆ ಪಕ್ಷ ಸಂಘಟನೆಯ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.
ಈ ಮೊದಲು ಪಕ್ಷದ ನಾಯಕತ್ವದಲ್ಲಿನ ಬಿಕ್ಕಟ್ಟಿನಿಂದಾಗಿ ಬೆಂಗಳೂರಿನಿಂದ ಮೈಸೂರಿನವರೆಗೆ ನಡೆದ ಮುಡಾ ಪಾದಯಾತ್ರೆ ಸೇರಿದಂತೆ ಹಲವು ಹೋರಾಟಗಳು ಜನರ ಗಮನ ಸೆಳೆಯಲು ಸಾಧ್ಯವಾಗಿಲ್ಲ. ವಿಧಾನಸಭೆ ಚುನಾವಣೆಗೆ ಇನ್ನೂ ಎರಡುವರೆ ವರ್ಷಗಳ ಅವಧಿ ಇದೆ. ಹೀಗಾಗಿ ಈ ಸಮಯದಲ್ಲಿ ಪಾದಯಾತ್ರೆ ಅಂತಹ ಹೋರಾಟಗಳು ಪಕ್ಷದ ಕಾರ್ಯಕರ್ತರನ್ನು ಸಕ್ರಿಯವಾಗಿಡಲು ಸಾಧ್ಯವಿಲ್ಲ. ಹೀಗಾಗಿ ಪಾದಯಾತ್ರೆ ಅಂತಹ ಹೋರಾಟಗಳ ಬದಲಿಗೆ ಜಿಲ್ಲಾಮಟ್ಟದಲ್ಲಿ ವಿವಿಧ ಹೋರಾಟಗಳನ್ನು ಹಮ್ಮಿಕೊಳ್ಳುವ ಮೂಲಕ ಪಕ್ಷದ ಕಾರ್ಯಕರ್ತರನ್ನು ಸದಾ ಚಟುವಟಿಕೆಯಿಂದ ಇರುವಂತೆ ಮಾಡಬೇಕು. ಮೊದಲ ಹಂತದಲ್ಲಿ ವಿಭಾಗ ಮಟ್ಟದಲ್ಲಿ ಸರ್ಕಾರದ ವಿರುದ್ಧ ದೊಡ್ಡ ಹೋರಾಟಗಳನ್ನು ಹಮ್ಮಿಕೊಳ್ಳಬೇಕು. ಇದರಲ್ಲಿ ಕನಿಷ್ಠ 25,000 ಮಂದಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು ಎಂಬ ತೀರ್ಮಾನ ಕೈಗೊಂಡಿದ್ದಾರೆ.
ಇದರ ಮೊದಲ ಹಂತವಾಗಿ ಜನವರಿ 17ರಂದು ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ. ವಾಲ್ಮೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮದ ಬ್ಯಾನರ್ ಹಾಕುವ ವಿಚಾರದಲ್ಲಿ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಬೆಂಬಲಿಗರು ನಡೆಸಿದ ಹೋರಾಟವನ್ನು ಖಂಡಿಸುವ ಮೂಲಕ ಮಾಜಿ ಮಂತ್ರಿ ಜನಾರ್ಧನ ರೆಡ್ಡಿ ಅವರ ಪರವಾಗಿ ಬಿಜೆಪಿ ನಿಲ್ಲಬೇಕು. ಇದರಿಂದ ಕಾರ್ಯಕರ್ತರಿಗೆ ದೊಡ್ಡ ಸಂದೇಶ ರವಾನೆ ಆಗಲಿದೆ. ಈ ಘಟನೆಯನ್ನು ಬಳಸಿಕೊಂಡು ಬಳ್ಳಾರಿ ಪ್ರದೇಶದಲ್ಲಿ ಕುಂದಿರುವ ಪಕ್ಷದ ವರ್ಚಸ್ಸನ್ನು ಮರಳಿ ತರಬೇಕು ಎನ್ನುವ ನಿರ್ಧಾರ ಕೈಗೊಳ್ಳಲಾಗಿದೆ.
ಹೀಗಾಗಿ ಜನವರಿ 17ರಂದು ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ನಡೆಸುತ್ತಿದ್ದು, ಅದರಲ್ಲಿ ಪಾಲ್ಗೊಳ್ಳಲು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಅಗರವಾಲ್ ಸೇರಿದಂತೆ ಹಲವು ಪ್ರಮುಖ ನಾಯಕರು ಆಗಮಿಸುತ್ತಿದ್ದಾರೆ.
ಇದಾದ ಬಳಿಕ ಜನವರಿ 31ರಂದು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಬೇಕು. ಸಾಂಸ್ಕೃತಿಕ ರಾಜಧಾನಿಯಲ್ಲಿ ಮೊದಲ ಬಾರಿಗೆ ದೊಡ್ಡ ಮಟ್ಟದ ಡ್ರಗ್ಸ್ ತಯಾರಿಕೆ ಘಟಕ ಪತ್ತೆಯಾಗಿದೆ. ಇದರ ವಿರುದ್ಧ ಸಂಘಟಿತ ರೀತಿಯಲ್ಲಿ ಹೋರಾಟ ಮಾಡಬೇಕು ಎಂದು ತೀರ್ಮಾನ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.




