ಬೆಂಗಳೂರು: ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಜನಪರವಾಗಿ ಕೆಲಸ ಮಾಡುತ್ತಿದೆ. ಹಿಂದಿನ ಯುಪಿಎ ಸರ್ಕಾರಕ್ಕಿಂತ ಹೆಚ್ಚು ಅನುದಾನವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಾಜ್ಯಕ್ಕೆ ನೀಡಿದೆ. ಈಗ ಸಮೃದ್ಧ ಕರ್ನಾಟಕ ನಿರ್ಮಿಸಲು ಜನರ ಅಭಿಪ್ರಾಯದೊಂದಿಗೆ ಬಿಜೆಪಿ ಪ್ರಣಾಳಿಕೆ ತಯಾರಾಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರೊಂದಿಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ, ಪ್ರಣಾಳಿಕೆ ತಯಾರಿ ಕುರಿತು ಮಾಹಿತಿ ಹಂಚಿಕೊಂಡ ಅವರು.ಸ ‘ಮೃದ್ಧ ಕರ್ನಾಟಕಕ್ಕೆ ಬಿಜೆಪಿಯೇ ಭರವಸೆʼ ಎಂಬ ಘೋಷಣೆಯಲ್ಲಿ ಜನರ ಬಳಿ ಹೋಗುತ್ತೇವೆ. ಕನಿಷ್ಠ 50 ಸೆಕ್ಟರ್ ಸಭೆಗಳನ್ನು ಮಾಡಲಿದ್ದೇವೆ. ಕೃಷಿ, ತೋಟಗಾರಿಕೆ, ರೇಷ್ಮೆ ಮೊದಲಾದ ಕ್ಷೇತ್ರಗಳಲ್ಲಿ ರೈತರೊಂದಿಗೆ ಸಭೆ ನಡೆಸಿ ಸಲಹೆ ಪಡೆಯಲಾಗುವುದು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಯಲ್ಲೂ ಸಭೆ ನಡೆಸಿ, ಸಂಘಟನೆಗಳ ಸಲಹೆ ಪಡೆಯಲಾಗುವುದು ಎಂದರು.
ಕೃಷಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವರು ಬಂದು ಭಾಗಿಯಾಗುತ್ತಾರೆ. ವಿದೇಶಾಂಗ ನೀತಿಯ ವಿಷಯ ಬಂದಾಗ, ವಿದೇಶಾಂಗ ಸಚಿವರು, ಕೇಂದ್ರ ಆರ್ಥಿಕ ಸಚಿವರು ಬರುತ್ತಾರೆ ಎಂದರು.
+91 8595158158 ನಂಬರ್ ಪ್ರಕಟಿಸಿ, ಇದಕ್ಕೆ ಜನರು ಸಲಹೆ ಕಳುಹಿಸಬಹುದು ಎಂದು ತಿಳಿಸಿದರು.
ಬಿಜೆಪಿಯ ಪ್ರತಿ ಮಂಡಲದಲ್ಲಿ 8 ಸಾವಿರ ಬಾಕ್ಸ್‌ಗಳನ್ನು ಇಟ್ಟು, ಅದರ ಮೂಲಕ ಸಲಹೆ ಪಡೆಯಲಾಗುವುದು. www.bjp4samruddhakarnataka.in ನಲ್ಲೂ ಸಲಹೆ ನೀಡಬಹುದು. ಕನಿಷ್ಠ ಒಂದು ಕೋಟಿ ಜನರನ್ನು ತಲುಪುವ ಗುರಿ ಇದೆ. ಮಾರ್ಚ್ 25 ರವರೆಗೆ 224 ವಿಧಾನಸಭಾ ಕ್ಷೇತ್ರಗಳಲ್ಲಿ ನಿರಂತರ ಸಭೆ ಮಾಡಲಾಗುವುದು. ಕಲ್ಯಾಣ ಕರ್ನಾಟಕ, ಹಳೆ ಮೈಸೂರು, ಬೆಂಗಳೂರು ನಗರ ಮೊದಲಾದ ವಿಭಾಗಗಳಲ್ಲೂ ಸಲಹೆ ಪಡೆಯಲಾಗುವುದು. ಪ್ರಗತಿ ರಥಗಳಲ್ಲಿ ಸಲಹಾ ಪೆಟ್ಟಿಗೆ ಇಟ್ಟು, ಅಲ್ಲಿಂದಲೂ ಸಲಹೆ ಪಡೆಯಲಾಗುವುದು ಎಂದರು.
ಕಾಂಗ್ರೆಸ್‌ನವರು 173 ಭರವಸೆ ನೀಡಿ, ಶೇ.38 ರಷ್ಟು ಪೂರೈಸಿದ್ದು, ಶೇ.98 ರಷ್ಟು ಪೂರೈಸಿದ್ದೇವೆ ಎಂದು ಸುಳ್ಳು ಹೇಳಿದ್ದಾರೆ. ಅಂತಹ ಕೆಲಸವನ್ನು ಬಿಜೆಪಿ ಮಾಡುವುದಿಲ್ಲ. ಈ ಅವಧಿಯಲ್ಲಿ ಕೋವಿಡ್ ಸಾಂಕ್ರಾಮಿಕವಿತ್ತು. ಅಲ್ಲದೆ, ಮೊದಲ ವರ್ಷ ಅಧಿಕಾರ ಸಿಕ್ಕಿರಲಿಲ್ಲ. ಆದರೂ ಬಿಜೆಪಿ ಉತ್ತಮ ಕೆಲಸ ಮಾಡಿದೆ. ಜನರು ಸ್ಪಷ್ಟ ಬಹುಮತವನ್ನು ಬಿಜೆಪಿಗೆ ನೀಡಿದರೆ, ನೂರಕ್ಕೆ ನೂರು ಭರವಸೆ ಈಡೇರಿಸುತ್ತೇವೆ ಎಂದರು.
ಕೋವಿಡ್ ನಂತರ ದೇಶದಲ್ಲಿ ಆರ್ಥಿಕ ಪ್ರಗತಿ ಶೇ.7 ರಷ್ಟಿರುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕ್ರಿಯಾಶೀಲತೆಗೆ ಸಾಕ್ಷಿ. ರಾಜ್ಯದಲ್ಲಿ ಆರ್ಥಿಕ ಪ್ರಗತಿ ಶೇ.7.9 ರಷ್ಟಿದೆ. ಜೊತೆಗೆ, ಜಿಮ್‌ನಲ್ಲಿ 10 ಲಕ್ಷ ಕೋಟಿ ರೂ. ಹೂಡಿಕೆ ಹರಿದುಬಂದಿದೆ. ಇಡೀ ದೇಶದ ಎಫ್‌ಡಿಐನಲ್ಲಿ ಶೇ.38 ರಷ್ಟು ಪಾಲು ರಾಜ್ಯದ್ದಾಗಿದೆ. ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಆರ್ಥಿಕ ನೀತಿ, ಈಸ್ ಆಫ್ ಡೂಯಿಂಗ್ ಬಿಸಿನೆಸ್ ಕ್ರಮಕ್ಕೆ ಉದಾಹರಣೆ. ಪ್ರಧಾನಿ ನರೇಂದ್ರ ಮೋದಿಯವರು 5 ಟ್ರಿಲಿಯನ್ ಆರ್ಥಿಕತೆ ನೀಡುವ ಗುರಿ ತಿಳಿಸಿದ್ದು, ಕರ್ನಾಟಕವು 1 ಟ್ರಿಲಿಯನ್ ಆರ್ಥಿಕತೆ ನೀಡುವ ಗುರಿ ಹೊಂದಿದೆ ಎಂದರು.
ರೈಲ್ವೆ ಇಲಾಖೆಗೆ ವಿಶೇಷ ಒತ್ತನ್ನು ಡಬಲ್ ಎಂಜಿನ್ ಸರ್ಕಾರ ನೀಡಿದೆ. ಯುಪಿಎ ಅವಧಿಗೆ ಹೋಲಿಸಿದರೆ, ಈ ಬಾರಿ ರೈಲ್ವೆ ಯೋಜನೆಗಳಿಗೆ 9 ಪಟ್ಟು ಹೆಚ್ಚು ಅನುದಾನ ಬಂದಿದೆ. ಉಪನಗರ ರೈಲು ಯೋಜನೆಗೆ ಹಿಂದಿನ ಸರ್ಕಾರ ಒತ್ತು ನೀಡಿರಲಿಲ್ಲ. ಅದನ್ನು ಬಿಜೆಪಿ ಸರ್ಕಾರ ಮಾಡಿದೆ. ಹಲವು ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ಕೂಡ ಡಬಲ್ ಎಂಜಿನ್ ಸರ್ಕಾರದಿಂದ ಸಾಧ್ಯವಾಗಿದೆ. ರೈಲ್ವೆ ಯೋಜನೆಗಳಿಂದ ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ, ರೈತರಿಗೆ ಲಾಭವಾಗಿದ್ದು, ಇವೆಲ್ಲವೂ ದೀರ್ಘಕಾಲದವರೆಗೆ ಅನುಕೂಲ ಕಲ್ಪಿಸುತ್ತವೆ ಎಂದರು.
ಬೆಂಗಳೂರು-ಮೈಸೂರು ದಶಪಥ ಎಕ್ಸ್‌ಪ್ರೆಸ್‌ವೇ ನಿರ್ಮಾಣವಾಗಿದ್ದು, ಜನರಿಗೆ ಬಹಳ ಅನುಕೂಲವಾಗಿದೆ. ಕಾಂಗ್ರೆಸ್ ನಡಿಗೆ ಕೃಷ್ಣಾ ಕಡೆಗೆ ಎಂದು ಹೇಳಿದ್ದರು. ಆದರೆ ಹೆಚ್ಚು ಅನುದಾನವನ್ನೇ ನೀಡಲಿಲ್ಲ. ಪ್ರಧಾನಿಯವರು *ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ನೀಡಿದ್ದು,* ಮಧ್ಯ ಕರ್ನಾಟಕದ ಜನರ ನೀರಾವರಿಗೆ ಅನುಕೂಲ ಕಲ್ಪಿಸಿದ್ದಾರೆ. ಕರ್ನಾಟಕ ಹಾಗೂ ಗೋವಾದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ, ಮಹಾದಾಯಿಯಿಂದ ನೀರು ನೀಡುವ ಪ್ರಸ್ತಾವವೇ ಇಲ್ಲ ಎನ್ನಲಾಗಿತ್ತು. ಆದರೀಗ ಅದೇ ಯೋಜನೆಗೆ 1,000 ಕೋಟಿ ರೂ. ನೀಡಲಾಗಿದೆ ಎಂದರು.
ಉಪನಗರ ರೈಲು ಯೋಜನೆ ಈವರೆಗೆ ಕೇಂದ್ರ ಸರ್ಕಾರ 15,767 ಕೋಟಿ ರೂ. ನೀಡಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 2013-18 ರಲ್ಲಿ 2,080 ಕೋಟಿ ರೂ. ನೀಡಲಾಗಿದೆ. ಒಂದು ವರ್ಷಕ್ಕೆ 5,000 ಸಾವಿರ ಕೋಟಿ ರೂ. ಅನುದಾನವನ್ನು ಇಂದಿನ ಬಿಜೆಪಿ ಸರ್ಕಾರ ಘೋಷಿಸಿದೆ. ಸೆಮಿ ಕಂಡಕ್ಟರ್ ಹೂಡಿಕೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಎಂಟು ವರ್ಷಗಳಲ್ಲಿ 1.6 ಲಕ್ಷ ಕೋಟಿ ರೂ. ಅನುದಾನವನ್ನು ಕೇಂದ್ರ ಸರ್ಕಾರ ಹೆದ್ದಾರಿ, ರಸ್ತೆ ಯೋಜನೆಗಳಿಗೆ ನೀಡಿದೆ. 4,000 ಕಿ.ಮೀ. ಉದ್ದದ ಹೆದ್ದಾರಿ ರಾಜ್ಯದಲ್ಲಿ ನಿರ್ಮಾಣವಾಗಿದೆ. 12 ಕೋಟಿ ಕೋವಿಡ್ ಡೋಸ್ ರಾಜ್ಯದಲ್ಲಿ ನೀಡಲಾಗಿದೆ. ಕೇಂದ್ರ ಬಿಜೆಪಿ ಸರ್ಕಾರವು ರಾಜ್ಯಕ್ಕೆ ನೀಡಿದ ಯೋಜನೆ ಹಾಗೂ ಅನುದಾನವನ್ನು ಕಾಂಗ್ರೆಸ್ ನೋಡಬೇಕು ಎಂದರು.
ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ, ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಕೆಜಿಗೆ 29 ರೂ. ನೀಡುತ್ತಿದ್ದರೆ, ರಾಜ್ಯ ಸರ್ಕಾರ 3 ರೂ. ನೀಡುತ್ತಿತ್ತು. ಅಕ್ಕಿ ಚೀಲಕ್ಕೂ ಮೂರು ರೂ. ಇಲ್ಲ. ಸಿದ್ದರಾಮಯ್ಯನವರು ತವುಡು ಕುಟ್ಟುವ ಬಗ್ಗೆ ಹೇಳಿದ್ದಾರೆ. ಭತ್ತ ಯಾರದ್ದು, ಅಕ್ಕಿ ಯಾರದ್ದು ತವುಡು ಯಾರದು ಎಂದು ಜನರಿಗೆ ಈಗ ಗೊತ್ತಾಗಿದೆ ಎಂದರು.
ಪರಿಶಿಷ್ಟರ ಮೀಸಲಾತಿ ಕುರಿತು ಕಾಂಗ್ರೆಸ್‌ನವರು ಭಾಷಣ ಮಾತ್ರ ಮಾಡುತ್ತಿದ್ದರು. ಆದರೆ ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಿಸಲು ಕ್ರಮ ವಹಿಸಿದೆ. 1500 ಕ್ಕೂ ಅಧಿಕ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲಾಗಿದೆ. ಹಾಗೆಯೇ 50 ಸಾವಿರಕ್ಕೂ ಅಧಿಕ ಹಕ್ಕುಪತ್ರ ನೀಡಲಾಗಿದೆ. ದಾವಣಗೆರೆಯಲ್ಲೂ ಇದೇ ರೀತಿ ಹಕ್ಕುಪತ್ರ ನೀಡಲಾಗುತ್ತದೆ. ರಾಜ್ಯದ 59 ಲಕ್ಷ ರೈತರಿಗೆ ಪ್ರತಿ ವರ್ಷ 10 ಸಾವಿರ ರೂ. ನೀಡಲಾಗುತ್ತಿದೆ. ರೈತರ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಸಿಎಂ ಬಸವರಾಜ ಬೊಮ್ಮಾಯಿ ರೈತ ವಿದ್ಯಾನಿಧಿ ನೀಡಿದ್ದಾರೆ. ಆದರೆ ಇದು ಪ್ರಣಾಳಿಕೆಯಲ್ಲಿ ಇರಲೇ ಇಲ್ಲ. ಈ ಯೋಜನೆಯಡಿ 11 ಲಕ್ಷ ರೈತರ ಮಕ್ಕಳಿಗೆ 460 ಕೋಟಿ ರೂ. ನೀಡಲಾಗಿದೆ ಎಂದರು.
ಬೆಲೆ ಏರಿಕೆ ಇಡೀ ಜಗತ್ತಿನಲ್ಲಾಗಿದ್ದು, ಕೋವಿಡ್ ಕೂಡ ಕಾರಣವಾಗಿದೆ. ಕೆಲ ದೇಶಗಳಲ್ಲಿ ವೇತನ ಕಡಿತ ಮಾಡಿದ್ದರೆ, ನಮ್ಮಲ್ಲಿ ಸರ್ಕಾರ ಎಲ್ಲರಿಗೂ ವೇತನ ನೀಡಿದೆ. ತೈಲ ದರ ಬೇರೆ ದೇಶಗಳಲ್ಲಿ 250-300 ರೂ. ಇದ್ದರೆ, ಭಾರತದಲ್ಲಿ ಆ ಮಟ್ಟಿಗೆ ಏರಿಲ್ಲ. ಇಷ್ಟೇ ಅಲ್ಲದೆ, ತಲಾ ಆದಾಯವನ್ನೂ ಪರಿಗಣಿಸಬೇಕು ಎಂದರು.
ಬಿಜೆಪಿಯಲ್ಲಿ ವಲಸೆ, ಮೂಲ ಎಂಬುದು ಇಲ್ಲ. ಸಮುದ್ರಕ್ಕೆ ಹನಿ ಸೇರಿದ ಬಳಿ ಯಾವ ನದಿಗೆ ಸೇರಿದ್ದು ಎಂದು ಹುಡುಕಲು ಸಾಧ್ಯವಿಲ್ಲ ಎಂದರು.




