ಬೆಂಗಳೂರು: ಅಯೋಧ್ಯಯೆಯಲ್ಲಿ ಶ್ರೀರಾಮಮಂದಿರಲ್ಲಿ ಮೂರ್ತಿ ಪ್ರಾಣಪ್ರತಿಷ್ಠಾಪನೆ ಅಂಗವಾಗಿ ದೇಶಾದ್ಯಂತ ದೇವಾಲಗಳ ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆಗೆ ಓಗೊಟ್ಟ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಹಲವು ನಾಯಕರು ವಿವಿಧ ದೇವಾಲಯಗಳಲ್ಲಿ ಸ್ವಚ್ಚತಾ ಕಾರ್ಯ ನಡೆಸಿದರು.
ವಿಜಯೇಂದ್ರ ಅವರು ಶಿಕಾರಿಪುರದ ಶ್ರೀ ಹುಚ್ಚುರಾಯ ಸ್ವಾಮಿ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಿದರು. ವಿಪಕ್ಷ ನಾಯಕ ಆರ್.ಅಶೋಕ್ ಜಯನಗರದ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ, ಮಾಜಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಮಲ್ಲೆಶ್ವರಂನ ಕೋದಂಡರಾಮ ದೇವಸ್ಥಾನದಲ್ಲಿ, ಮೈಸೂರಿನ ಪ್ರತಾಪ್ ಸಿಂಹ ಕೋದಂಡರಾಮ ದೇವಸ್ಥಾನದಲ್ಲಿ, ಮಾಜಿ ಸಚಿವ ಗೋಪಾಲಯ್ಯ ದೊಡ್ಡಮ್ಮ ದೇವಿ ದೇವಾಲಯ ಸ್ವಚ್ಛಗೊಳಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ರಾಮಮಂದಿರ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರ ನಿಲುವನ್ನು ಖಂಡಿಸುತ್ತೇವೆ. ಅವರು ತೀವ್ರವಾಗಿ ದಾಳಿ ನಡೆಸಿ ಮಾತಾಡುತ್ತಿದ್ದಾರೆ. ಅಲ್ಲಿಗೇ ಏಕೆ ಹೋಗಬೇಕು ಎಂದು ಪ್ರಶ್ನೆ ಮಾಡುತ್ತಾರೆ. ತಿರುಪತಿಗೇ ಏಕೆ ಹೋಗಬೇಕು, ಧರ್ಮಸ್ಥಳಕ್ಕೇ ಏಕೆ ಹೋಗಬೇಕು, ಯಲ್ಲಮ್ಮ ದೇವಸ್ಥಾನಕ್ಕೆ ಏಕೆ ಹೋಗಬೇಕು ಎಂದು ಪ್ರಶ್ನೆ ಮಾಡಬಾರದು. ಇವೆಲ್ಲ ಸಿದ್ದರಾಮಯ್ಯನವರ ಸಂತೆ ಭಾಷಣ. ಮಸೀದಿಗೆ ಏಕೆ ಹೋಗಬೇಕು, ಟೋಪಿ ಏಕೆ ಹಾಕಬೇಕು, ಮನೆಯಲ್ಲೇ ಪೂಜೆ ಮಾಡಬಹುದು ಎಂದು ಕೂಡ ಪ್ರಶ್ನೆ ಮಾಡಬಾರದು ಎಂದರು.
ಸಿದ್ದರಾಮಯ್ಯ ತಾವು ಕೂಡ ಹಿಂದೂ ಎನ್ನುವುದೇ ಢೋಂಗಿತನ. ರೈತರು ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಪ್ರಜ್ಞೆಯೇ ಇಲ್ಲ. ಆದರೆ ಮುಸ್ಲಿಮರಿಗೆ ಅನುದಾನ ಕೊಡುತ್ತಿದ್ದಾರೆ. ಬೆಣ್ಣೆ ಹೆಚ್ಚುವ ರಾಜಕಾರಣ ಬಿಡದಿದ್ದರೆ ಬಹುಸಂಖ್ಯಾತ ಹಿಂದೂಗಳು ಸರಿಯಾದ ಸುಣ್ಣ ಹಚ್ಚುತ್ತಾರೆ ಎಂದು ಕಿಡಿಕಾರಿದರು.
ರಾಜ್ಯದ ಎಲ್ಲಾ ಭಾಗಗಳಲ್ಲಿ ದೇವಾಲಯಗಳಲ್ಲಿ ಶುದ್ಧೀಕರಣ ಕಾರ್ಯ ನಡೆಯುತ್ತಿದೆ. ಜನವರಿ 22ರಂದು ವಿಶೇಷ ಪೂಜೆ ನಡೆಯಲಿದೆ. ಪದ್ಮನಾಭನಗರ ಶಾಸಕರ ಕಚೇರಿಯ ಬಳಿ ದೇವಸ್ಥಾನ ನಿರ್ಮಿಸುತ್ತಿದ್ದು, ಅಲ್ಲಿಯೇ ಶ್ರೀರಾಮ ಸೀತೆಗೆ ಪೂಜೆ ಸಲ್ಲಿಸಲಾಗುವುದು ಎಂದರು.




