ಬೆಂಗಳೂರು: ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ರೈತರ ಮೇಲೆ ಗೋಲಿಬಾರ್ ನಡೆಸಿದ್ದ ಬಿಜೆಪಿ ಸರಕಾರ, ರೈತರ ಬಗ್ಗೆ ಮೃದು ಮಾತಾಡುತ್ತಲೇ ರೈತರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದೆ. ಇದೀಗ ರಸಗೊಬ್ಬರ ದರವನ್ನು ಶೇಕಡ 60ರಷ್ಟು ಹೆಚ್ಚಳ ಮಾಡಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ರಸಗೊಬ್ಬರ ಬೆಲೆ ಏರಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಸದಾನಂದ ಗೌಡರು ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾತನಾಡಿ ರಸಗೊಬ್ಬರಕ್ಕಾಗಿ ನೀಡುತ್ತಿದ್ದ 1.5 ಲಕ್ಷ ಕೋಟಿಯಷ್ಟು ಸಬ್ಸಿಡಿ ಮುಂದುವರೆಸುವಂತೆ ಮನವರಿಕೆ ಮಾಡಿಕೊಡಬೇಕು. ಈಗ ಅದನ್ನು ಶೇ. 50ರಷ್ಟು ಕಡಿತ ಮಾಡಲಾಗಿದೆ ಎಂದು ಒತ್ತಾಯಿಸಿದ್ದಾರೆ.
ಬಾಯಿ ಮಾತಿನಿಂದ ರೈತರ ಬಾಳು ಬೆಳಗಲು ಸಾಧ್ಯವಿಲ್ಲ. ರೈತರ ಮತಗಳ ಮೇಲೆ ಕಣ್ಣಿಟ್ಟು ಎಷ್ಟು ದಿನ ಸುಳ್ಳಿನ ಅರಮನೆ ಕಟ್ಟುತ್ತೀರಿ? ಇನ್ನಾದರೂ ರೈತರಿಗೆ ಸಹನೀಯ ಬದುಕು ಕಟ್ಟಿಕೊಳ್ಳಲು ಅವಕಾಶ ಕೊಡಿ. ರಸಗೊಬ್ಬರದ ಮೇಲಿನ ದರ ಹೆಚ್ಚಳ ವಾಪಸ್ ಪಡೆಯಿರಿ ಎಂದಿದ್ದಾರೆ.




