ಬೆಳಗಾವಿ: ವಿಪಕ್ಷಗಳು ಯಾವುದೇ ವಿಚಾರ ಎತ್ತಿದರೂ ಕೂಡ ವಿಧಾನಮಂಡಲ ಅಧಿವೇಶನದಲ್ಲಿ ಉತ್ತರ ಕೊಡಲು ಸರ್ಕಾರ ಸಿದ್ಧವಿದ್ದು, ಯಾವುದನ್ನೂ ವಿಳಂಬ ಅಥವಾ ಕಾಲಹರಣ ಮಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸುವರ್ಣ ಸೌಧದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದುವರೆಗೆ ಬರಗಾಲದ ಚರ್ಚೆಯಾಯಿತು. ಇಂದು ಅದಕ್ಕೆ ಉತ್ತರ ನೀಡುತ್ತೇವೆ. ಈಗಾಗಲೇ ಪ್ರಸ್ತಾಪವಾಗಿರುವ ಬಗ್ಗೆ ಉತ್ತರ ನೀಡುತ್ತೇವೆ ಎಂದರು.
ಬಿಜೆಪಿ ನಾಯಕರ ಮಧ್ಯೆ ಸಮನ್ವಯದ ಕೊರತೆಯಿಂದ ಕಲಾಪದ ಸಮಯ ವ್ಯರ್ಥವಾಗುತ್ತಿದೆ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯೊಳಗೆ ಎಂದಿಗೂ ಸಮನ್ವಯ ಇಲ್ಲವೇ ಇಲ್ಲ. ಅವರು ಆಪರೇಷನ್ ಕಮಲದ ಮುಖಾಂತರ ಅಧಿಕಾರಕ್ಕೆ ಬಂದಿದ್ದಾರೆ. ನಂತರ ಜನ ಅವರನ್ನು ತಿರಸ್ಕರಿಸಿದ್ದಾರೆ. ನಂತರ ಸಮನ್ವಯ ಬರಲು ಸಾಧ್ಯವೇ ಇಲ್ಲ. ಅವರಲ್ಲಿ ಎರಡು ಗುಂಪುಗಳಿವೆ ಎಂದರು.
ಬೆಳಗಾವಿಯಲ್ಲಿ ಯುವಕನೊಬ್ಬ ಹುಡುಗಿ ಜತೆ ಓಡಿ ಹೋಗಿದ್ದಾನೆ ಎಂಬ ರೋಷಕ್ಕೆ ಆತನ ತಾಯಿಯ ಮೇಲೆ ದೌರ್ಜನ್ಯವೆಸಗಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದ ಅವರು, ಯಾರು ತಪ್ಪಿತಸ್ಥರೋ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಪಂಚಮಸಾಲಿ ನಾಯಕರ ಮನವಿಗೆ ಸ್ಪಂದಿಸಿಲ್ಲ ಎಂಬ ಸ್ವಾಮೀಜಿಗಳ ಮಾತಿಗೆ ಪ್ರತಿಕ್ರಿಯಿಸಿದ ಅವರು, ಡಿಸೆಂಬರ್ 13ರಂದು ವಿಧಾನಸಭೆ ಅಧಿವೇಶನ ಮುಗಿದ ನಂತರ ಅವರೊಂದಿಗೆ ಚರ್ಚೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ಬೆಳಗಾವಿಯಲ್ಲೇ ಪಂಚಮಸಾಲಿ ನಾಯಕರು ಹಾಗೂ ಸ್ವಾಮೀಜಿ ಜತೆ ಚರ್ಚಿಸುತ್ತೇನೆ ಎಂದರು.
ಸುವರ್ಣ ಸೌಧದಲ್ಲಿರುವ ಸಾವರ್ಕರ್ ಫೋಟೊ ತೆಗೆಯುವ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇದು ವಿಧಾನಸಭಾಧ್ಯಕ್ಷರಿಗೆ ಸಂಬಂಧಿಸಿದ ಸಂಗತಿ. ಅವರು ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸ್ವತಂತ್ರರಿದ್ದಾರೆ ಎಂದರು.
ಸರ್ಕಾರ ಪತನವಾಗಲಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿ ಮತ್ತು ಜೆಡಿಎಸ್ ನೀರಿನಿಂದ ತೆಗೆದ ಮೀನಿನಂತೆ ವಿಲಿವಿಲಿ ಎಂದು ಒದ್ದಾಡುತ್ತಿದ್ದು, ಭ್ರಮಾಲೋಕದಲ್ಲಿದ್ದಾರೆ ಎಂದರು.



