ಬೆಂಗಳೂರು: ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಕಣಕ್ಕೆ ಭರ್ಜರಿ ರಂಗು ಬಂದಿದೆ. ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಸಿ ಪಿ ಯೋಗೇಶ್ವರ್ ವಿರುದ್ಧ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಕಳೆದ ಒಂದು ವಾರದಿಂದ ಈ ಕ್ಷೇತ್ರದಿಂದ ಎನ್ ಡಿ ಎ ಅಭ್ಯರ್ಥಿಯಾಗಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಕುತೂಹಲಕ್ಕೆ ಇದರೊಂದಿಗೆ ತೆರೆಬಿದ್ದಂತಾಗಿದೆ. ಜೊತೆಗೆ ನಿಖಿಲ್ ಕುಮಾರಸ್ವಾಮಿ ಚುನಾವಣಾ ರಾಜಕಾರಣದಲ್ಲಿ ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಬಿಜೆಪಿ ರಾಷ್ಟ್ರೀಯ ನಾಯಕರ ಜೊತೆ ಹಲವು ಸುತ್ತಿನ ಸಂಧಾನ ಮಾತುಕತೆ ನಡೆಸಿ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡುವಂತೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾದ ಎಚ್ ಡಿ ಕುಮಾರಸ್ವಾಮಿ, ಈ ಕ್ಷೇತ್ರದಿಂದ ಯಾರನ್ನು ಕಣಕ್ಕಿಳಿಸಬೇಕೆಂಬ ಬಗ್ಗೆ ಸಾಕಷ್ಟು ಚರ್ಚೆ ಹಾಗೂ ಹಲವು ಸಮೀಕ್ಷೆಗಳನ್ನು ಮಾಡಿಸಿದ್ದರು.
ಯೋಗೇಶ್ವರ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಪಟ್ಟು ಹಿಡಿದಿದ್ದ ಕಾರಣ ಅಭ್ಯರ್ಥಿ ಘೋಷಣೆ ವಿಳಂಬವಾಗಿತ್ತು. ಯೋಗೇಶ್ವರ್ ಒಂದು ವೇಳೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ತಮ್ಮ ಪುತ್ರನಿಗೆ ಸಂಕಷ್ಟ ಉಂಟಾಗಲಿದೆ ಎಂದು ಭಾವಿಸಿದ್ದ ಕುಮಾರಸ್ವಾಮಿ ಕೊನೆಯ ಹಂತದವರೆಗೆ ಕಾದು ನೋಡಿದರು.
ಬಿಜೆಪಿ ತಮಗೆ ಟಿಕೆಟ್ ನೀಡುವುದಿಲ್ಲ ಎಂಬುದು ಖಾತ್ರಿಯಾದ ನಂತರ ಯೋಗೇಶ್ವರ್ ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ನಂತರ ಕುಮಾರಸ್ವಾಮಿ ತಮ್ಮ ನಿರ್ಧಾರ ಪ್ರಕಟಿಸಿದ್ದು, ಇದೀಗ ತಮ್ಮ ಪುತ್ರನನ್ನು ಅಧಿಕೃತವಾಗಿ ಕಣಕ್ಕೆ ಇಳಿಸುವುದಾಗಿ ಘೋಷಿಸಿದ್ದಾರೆ.
ಅಭ್ಯರ್ಥಿ ಘೋಷಣೆಗೂ ಮುನ್ನ ಮಾಜಿ ಸಿಎಂ ಯಡಿಯೂರಪ್ಪ ನಿವಾಸದಲ್ಲಿ ಉಭಯ ಪಕ್ಷಗಳ ಮುಖಂಡರು ಸುದೀರ್ಘ ಮಾತುಕತೆ ನಡೆಸಿದರು. ಇದರ ನಡುವೆಯೇ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮೊಮ್ಮಗನ ಸ್ಪರ್ಧೆ ಘೋಷಿಸಿದರು.
ಅಷ್ಟೇ ಅಲ್ಲ ಇದು ತಮ್ಮದೇ ಚುನಾವಣೆ ಎಂದು ಕೆಲಸ ಮಾಡುತ್ತೇನೆ. ಚುನಾವಣೆ ಮುಗಿಯುವವರೆಗೆ ಚನ್ನಪಟ್ಟಣ ಬಿಟ್ಟು ಕದಲುವುದಿಲ್ಲ. ತಮಗೆ ದ್ರೋಹ ಮಾಡಿದವರಿಗೆ ಈ ಚುನಾವಣೆ ಮೂಲಕ ತಕ್ಕ ಉತ್ತರ ನೀಡುತ್ತೇನೆ ಎಂದು ಗುಡುಗಿದರು.




