ಬೆಂಗಳೂರು: ರಾಜ್ಯ ವಿಧಾನಸಭೆಯ ಮೂರು ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು ಮೂರೂ ಕ್ಷೇತ್ರಗಳಲ್ಲಿ ಭರಾಟೆಯ ರೋಡ್ ಶೋ ಹಾಗೂ ಶಕ್ತಿಪ್ರದರ್ಶನದ ಮೂಲಕ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಆಡಳಿತಾರೂಢ ಕಾಂಗ್ರೆಸ್ ಶಿಗ್ಗಾವಿಯಲ್ಲಿ ಬಂಡಾಯದ ಬಿಸಿಗೆ ಸಿಲುಕಿ ತತ್ತರಿಸಿದರೆ, ಅಸಮಾಧಾನ ಶಮನಗೊಳಿಸಲು ಆಗಮಿಸಿದ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಕಾರಿಗೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಗುರುವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದ ಭರತ್ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರ ಜೊತೆ ಶುಕ್ರವಾರ ಶಿಗ್ಗಾವಿಯಲ್ಲಿ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಿದರು.
ಈ ವೇಳೆ ಯಡಿಯೂರಪ್ಪ ಮಾತನಾಡಿ, ಕ್ಷೇತ್ರದ ಜನ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಕೇಂದ್ರಕ್ಕೆ ಬಂದು ಬಿಜೆಪಿಗೆ ಮತ ಚಲಾಯಿಸಬೇಕು. ಬಸವರಾಜ ಬೊಮ್ಮಾಯಿ ಅವರ ರೀತಿಯಲ್ಲಿ ಹೆಚ್ಚಿನ ಮತಗಳ ಅಂತರದಲ್ಲಿ ಭರತ್ ಅವರನ್ನು ಗೆಲ್ಲಿಸಬೇಕು ಎಂದರು.
ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಅಭಿವೃದ್ಧಿ ಕೆಲಸ ಮುಂದುವರಿಯಲು ಹಾಗೂ ಕ್ಷೇತ್ರದ ಜನರ ರಕ್ಷಣೆಗಾಗಿ ಭರತ್ ಬೊಮ್ಮಾಯಿ ಅವರಿಗೆ ಆಶೀರ್ವದಿಸಿ ಎಂದರು.
ಅಭ್ಯರ್ಥಿ ಭರತ್ ಬೊಮ್ಮಾಯಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಬಗ್ಗೆ ತಂದೆ ಕನಸು ಕಂಡಿದ್ದಾರೆ. ಕನಸು ನನಸು ಮಾಡಲು ನಾನು ಕೆಲಸ ಮಾಡುತ್ತೇನೆ. ಮತದ ರೂಪದಲ್ಲಿ ಆಶೀರ್ವಾದ ಮಾಡಿ ಎಂದರು.
ಕಾಂಗ್ರೆಸ್ ಗೆ ಬಂಡಾಯದ ಬಿಸಿ: ಕುತೂಹಲ ಕೆರಳಿಸಿರುವ ಶಿಗ್ಗಾವಿ ಕ್ಷೇತ್ರಕ್ಕೆ ಕಾಂಗ್ರೆಸ್ ನಿನ್ನೆ ತನ್ನ ಅಭ್ಯರ್ಥಿ ಹೆಸರನ್ನು ಪ್ರಕಟಿಸಿ ಅಚ್ಚರಿ ಮೂಡಿಸಿತು. ಇದರ ಬೆನ್ನಲ್ಲೇ ಅಧಿಕೃತ ಅಭ್ಯರ್ಥಿ ವಿರುದ್ಧ ಹಲವು ಟಿಕೆಟ್ ಆಕಾಂಕ್ಷಿಗಳು ಬಂಡಾಯದ ಬಾವುಟ ಹಾರಿಸುವ ಸೂಚನೆ ನೀಡಿದರು.
ಅದರಲ್ಲೂ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸೂಚನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಅಸಮಾಧಾನ ಶಮನಗೊಳಿಸಲು ಸಚಿವ ಜಮೀರ್ ಅಹ್ಮದ್ ಖಾನ್ ದಿಡೀರ್ ಶಿಗ್ಗಾವಿಗೆ ಆಗಮಿಸಿದರು.
ಶಿಗ್ಗಾವಿ ಸಮೀಪದ ಹುಲಗೂರಿನಲ್ಲಿ ಅಜ್ಜಂಪೀರ್ ಖಾದ್ರಿ ಬೆಂಬಲಿಗರ ಸಭೆ ನಡೆಸುತ್ತಿರುವ ವಿಷಯ ತಿಳಿದು ಅಲ್ಲಿಗೆ ತೆರಳಿ ಸಂಧಾನ ಸಭೆ ನಡೆಸಿ ವಾಪಸಾಗುತ್ತಿದ್ದ ಜಮೀರ್ ಅಹಮದ್ ಖಾನ್ ಅವರ ಕಾರಿನ ಮೇಲೆ ಖಾದ್ರಿ ಬೆಂಬಲಿಗರು ಕಲ್ಲು ತೂರಾಟ ನಡೆಸಿದರು.
ಕೂಡಲೇ ಸ್ಥಳೀಯರು ಮಧ್ಯಪ್ರವೇಶಸಿ ಜಮೀರ್ ಅಹ್ಮದ್ ಖಾನ್ ಅವರನ್ನು ರಕ್ಷಿಸಿ ಬೇರೊಂದು ಕಾರಿನಲ್ಲಿ ಅವರನ್ನು ಕಳುಹಿಸಿದರೆ ಸೈಯದ್ ಅಜ್ಜಂಪೀರ್ ಖಾದ್ರಿ ಬೆಂಬಲಿಗನ ದ್ವಿಚಕ್ರ ವಾಹನದಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು. ಅಜ್ಜಂಪೀರ್ ಖಾದ್ರಿ ಅವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ, ಮತ್ತೊಂದು ಮಾಜಿ ಶಾಸಕ ಮಂಜುನಾಥ್ ಕುನ್ನೂರು ಸಹ ಪಕ್ಷೇತರರಾಗಿ ಉಮೇದುವಾರಿಕೆ ಸಲ್ಲಿಸಿದರು
ಜೆಡಿಎಸ್ ಶಕ್ತಿ ಪ್ರದರ್ಶನ: ಮತ್ತೊಂದೆಡೆ ತೀವ್ರ ಹಣಾಹಣಿ ಸೃಷ್ಟಿಸಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಎನ್ ಡಿ ಎ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಜೆ ಡಿ ಎಸ್ ನ ನಿಖಿಲ್ ಕುಮಾರಸ್ವಾಮಿ ಭರ್ಜರಿ ಶಕ್ತಿ ಪ್ರದರ್ಶನದೊಂದಿಗೆ ತಮ್ಮ ನಾಮಪತ್ರ ಸಲ್ಲಿಸಿದರು. ಇವರಿಗೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್, ಡಾ. ಸಿ.ಎನ್. ಅಶ್ವತ್ಥನಾರಾಯಣ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಸೇರಿದಂತೆ ಮೈತ್ರಿ ಪಕ್ಷಗಳ ನಾಯಕರು ಸಾಥ್ ನೀಡಿದರು.
ಚನ್ನಪಟ್ಟಣದ ಶೇರು ಹೋಟೆಲ್ ವೃತ್ತದಿಂದ ಶುರುವಾದ ರೋಡ್ ಶೋ, ಸಾತನೂರು ವೃತ್ತದ ಬಳಿ ಇರುವ ಚುನಾವಣಾ ಅಧಿಕಾರಿ ಕಚೇರಿವರೆಗೆ ಅರ್ಧ ಕಿಲೋಮೀಟರ್ ದೂರದಷ್ಟು ನಡೆಯಿತು.
ರೋಡ್ ಶೋಗೂ ಮುಂಚೆ ನಿಖಿಲ್ ಅವರು, ಕೆಂಗಲ್‌ನಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದರು. ನಂತರ, ಅಲ್ಲಿಂದ ನೂರಾರು ಕಾರ್ಯಕರ್ತರು ಬೈಕ್ ರ‍್ಯಾಲಿ ಮೂಲಕ ನಿಖಿಲ್ ಅವರನ್ನು ಚನ್ನಪಟ್ಟಣದತ್ತ ಕರೆದೊಯ್ದರು.
ವಿಜಯೇಂದ್ರ ಶೋ: ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು, ಪಕ್ಷದ ಅಧ್ಯಕ್ಷ ವಿಜಯೇಂದ್ರ, ಮಾಜಿ ಸಚಿವರಾದ ಜನಾರ್ದನ ರೆಡ್ಡಿ, ಶ್ರೀರಾಮುಲು, ಎಂ.ಪಿ.ರೇಣುಕಾಚಾರ್ಯ, ಕರುಣಾಕರರೆಡ್ಡಿ, ಮಾಜಿ ಶಾಸಕ ಸೋಮಶೇಖರರೆಡ್ಡಿ ಸೇರಿದಂತೆ ಪಕ್ಷದ ಹಲವು ನಾಯಕರೊಂದಿಗೆ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಿದರು.
ಬಂಗಾರು ಹನುಮಂತು ಈಗಾಗಲೇ ಒಂದು ಸೆಟ್ ನಾಮಪತ್ರ ಸಲ್ಲಿಸಿದ್ದು ಇದೀಗ ಶಕ್ತಿಪ್ರದರ್ಶನದ ಮೂಲಕ ಮತ್ತೊಂದು ಸೆಟ್ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಬಿ.ವೈ.ವಿಜಯೇಂದ್ರ, ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಹಣದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿ.ಶ್ರೀರಾಮುಲು ಅವರನ್ನು ಸೋಲಿಸಲಾಗಿದೆ. ಈ ಬಾರಿಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.




