ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸೋಲುವ ಭೀತಿ ಆವರಿಸಿದೆ. ಹೀಗಾಗಿ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನ ಮಾಡಿ ಮುಖ ಮುಚ್ಚಿಕೊಳ್ಳುವ ಪ್ರಯತ್ನ ನಡೆಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ನಾಯಕರು ಸೋಲುವ ಭೀತಿಯಿಂದಾಗಿ ಕೇಂದ್ರ ಸರ್ಕಾರ ತಮ್ಮ ವಿರುದ್ಧ ಐಟಿ ಸಿಬಿಐ ಮತ್ತು ಇಡಿ ಬಳಸುತ್ತಿದೆ ಕರ್ನಾಟಕದ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ಈ ಸಂಸ್ಥೆಗಳ ಮೂಲಕ ದಾಳಿ ನಡೆಸಲು ಸಂಚುರೂಪಿಸಿದೆ ಎಂದು ಮಾಡುತ್ತಿರುವ ಆರೋಪ ಬಾಲಿಶತನದ್ದು ಎಂದರು.
ಕೇಂದ್ರ ಸರ್ಕಾರ ಯಾವುದೇ ಸ್ವಾಯತ್ತ ಸಂಸ್ಥೆಗಳ ಕರ್ತವ್ಯದಲ್ಲಿ ಹಸ್ತಕ್ಷೇಪ ಮಾಡಲು ಹೋಗಿಲ್ಲ. ಐಟಿ ಸಿಬಿಐ ಸೇರಿದಂತೆ ಎಲ್ಲ ಇಲಾಖೆಗಳು ಸ್ವತಂತ್ರವಾಗಿ ಕೆಲಸ ಮಾಡುತ್ತಿವೆ. ಚುನಾವಣೆಯಲ್ಲಿ ಗೆಲ್ಲುವ ದೃಷ್ಟಿಯಿಂದ ಕಾಂಗ್ರೆಸ್ ಮುಖಂಡರು ಮತ್ತು ಅಭ್ಯರ್ಥಿಗಳು ವ್ಯಾಪಕ ಪ್ರಮಾಣದ ಅಕ್ರಮದಲ್ಲಿ ತೊಡಗಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ಪಡೆದಿರುವ ಐಟಿ ಮತ್ತು ಇಡಿ ಅಧಿಕಾರಿಗಳು ತೀವ್ರ ನಿಗಾವಹಿಸಿದ್ದಾರೆ. ಅಲ್ಲದೆ ಅಗತ್ಯವೆನಿಸಿದ ಕಡೆ ದಾಳಿ ನಡೆಸುತ್ತಿದ್ದಾರೆ. ಇದರಿಂದ ಬೆಚ್ಚಿದ ಕಾಂಗ್ರೆಸ್ ಸುಳ್ಳು ಆರೋಪದಲ್ಲಿ ನಿರತವಾಗಿದೆ ಎಂದರು.
ಕುಂಬಳಕಾಯಿ ಕಳ್ಳ ಎಂದರೆ ಯಾಕೆ ಹೆಗಲು ಮುಟ್ಟಿ ನೋಡಿಕೊಳ್ಳಬೇಕು, ಚುನಾವಣೆಯಲ್ಲಿ ಯಾವುದೇ ಅಕ್ರಮ ನಡೆಸುವುದಿಲ್ಲ ಎನ್ನುವುದಾದರೆ ಸುಳ್ಳು ಆರೋಪಗಳನ್ನು ಯಾಕೆ ಮಾಡಬೇಕು ಸ್ವಾಯತ್ತ ಸಂಸ್ಥೆಗಳು ತಮ್ಮ ಕೆಲಸ ಮಾಡಲಿ ಎಂದು ಬಿಡಬೇಕಿದೆ. ರಾಜ್ಯದಲ್ಲಿ ಬಿಜೆಪಿ ಪರವಾಗಿ ಕಾಣಿಸುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಮೆಚ್ಚಿರುವ ಜನ ಈ ಬಾರಿ ಬಿಜೆಪಿಯನ್ನು ಬಾರಿ ಅಂತರದಿಂದ ಗೆಲ್ಲಿಸಲಿದ್ದಾರೆ ಎಂದರು.




