ಬೆಂಗಳೂರು: ಆಡಳಿತ ನಡೆಸುವವರ ಕೆಲಸ ಪ್ರಶ್ನೆ ಕೇಳುವುದಲ್ಲ, ಜನರ ಪ್ರಶ್ನೆಗಳಿಗೆ ಉತ್ತರ ನೀಡುವುದು. ತಮ್ಮದು ವಿರೋಧ ಪಕ್ಷ ಅಲ್ಲ, ಆಡಳಿತಾರೂಢ ಪಕ್ಷ ಎನ್ನುವುದನ್ನು ರಾಜ್ಯ @BJP4Karnataka ಏನಾದರೂ ಮರೆತುಬಿಟ್ಟಿದೆಯಾ ಹೇಗೆ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ನಿನ್ನೆಯ ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ತುರ್ತಾಗಿ ಬೇಕಿರುವುದು ನೆರವಿನ ಹಸ್ತವೇ ಹೊರತು ಉಪದೇಶದ ಬುರುಡೆ ಮಾತಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದ ರಾಜ್ಯ ಬಿಜೆಪಿ, ನಮ್ಮ ಪಂಚ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ತೋರುವಿರಾ @siddaramaiah ?
- ಕಡಿಮೆ ದರದಲ್ಲಿ ಲಸಿಕೆ ಪೂರೈಕೆ ನೆರವಿನ ಹಸ್ತವಲ್ಲವೇ?
- ದೇಶಾದ್ಯಂತ ಕೋವಿಡ್ ಲ್ಯಾಬ್ ವ್ಯವಸ್ಥೆ ಮಾಡುತ್ತಿರುವುದು ನೆರವಿನ ಹಸ್ತವಲ್ಲವೇ?
- ಕೋವಿಡ್ ಸಂದರ್ಭದಲ್ಲೂ ಆರ್ಥಿಕ ಸ್ಥಿತಿ ಪಾತಾಳ ಸೇರದಂತೆ ನೋಡಿದ್ದು ನೆರವಿನ ಹಸ್ತವಲ್ಲವೇ?
- ದೇಶಾದ್ಯಂತ ಪ್ರಾಥಮಿಕ ಆರೋಗ್ಯ ವ್ಯವಸ್ಥೆ ಸುಧಾರಣೆ ಆರಂಭಿಸಿದ್ದು ನೆರವಿನ ಹಸ್ತವಲ್ಲವೇ?
- ದೇಶದ ಜನರಲ್ಲಿ ಆತ್ಮವಿಶ್ವಾಸ ಮೂಡಿಸಿದ್ದು ನೆರವಿನ ಹಸ್ತವಲ್ಲವೇ?
ಲಸಿಕೆಯ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ದೇ ಕಾಂಗ್ರೆಸ್ ನೀಡಿದ ನೆರವಿನ ಹಸ್ತ, ಜನರನ್ನು ತಪ್ಪುದಾರಿಗೆಳೆದದ್ದೇ ಕಾಂಗ್ರೆಸ್ ಸಾಧನೆ!!! ಎಂದು ಪ್ರತಿಕ್ರಿಯೆ ನೀಡಿತ್ತು. ಅಲ್ಲದೆ, #ಬುರುಡೆರಾಮಯ್ಯ ಹ್ಯಾಷ್ ಟ್ಯಾಗ್ ರಚಿಸಿ ಸಿದ್ದರಾಮಯ್ಯನವರನ್ನು ಬಿಜೆಪಿ ಕೆರಳಿಸಿತ್ತು.
ಈ ಪ್ರಶ್ನೆಗೆ ತಿರುಗೇಟು ನಿಡಿರುವ ಸಿದ್ದರಾಮಯ್ಯ, #ದಶಪ್ರಶ್ನೆ #FekuModi ಹ್ಯಾಷ್ ಟ್ಯಾಗ್ ನಡಿ ಸರಣಿ ಟ್ವೀಟ್ ಮಾಡಿದ್ದು, ರಾಜ್ಯ ಬಿಜೆಪಿಗೆ 10 ಪ್ರಶ್ನೆಗಳನ್ನು ಕೇಳಿದ್ದಾರೆ. ಜೊತೆಗೆ, ತಮ್ಮ ಪ್ರತಿಯೊಂದು ಪ್ರಶ್ನೆಗೂ ಪೂರಕವಾಗಿ ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳ ಛಾಯಾಚಿತ್ರವನ್ನು ಟ್ವೀಟ್ ಜೊತೆ ಹಂಚಿಕೊಂಡಿದ್ದಾರೆ.
ಪ್ರಶ್ನೆ ಕೇಳುವ ಅಷ್ಟೊಂದು ಹುಚ್ಚಿದ್ದರೆ ಮರ್ಯಾದೆಯಿಂದ ರಾಜೀನಾಮೆ ಕೊಟ್ಟು ವಿರೋಧ ಪಕ್ಷದಲ್ಲಿ ಕೂತುಕೊಂಡು ಪ್ರಶ್ನೆ ಕೇಳಿ, ನಾವು ಉತ್ತರಿಸುತ್ತೇವೆ ಎಂದು ಕಾಲೆಳೆದಿದ್ದಾರೆ.
ರಾಜ್ಯ ಬಿಜೆಪಿ ನಾಯಕರು ಬೆಳಿಗ್ಗೆ ಎದ್ದು ಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಂಡರೆ ಅವರಿಗೂ ಹಿತ, ರಾಜ್ಯಕ್ಕೂ ಹಿತ. ಕೊರೊನಾ ಎರಡನೆ ಅಲೆಯಿಂದ ತತ್ತರಿಸಿಹೋಗಿರುವ ಜನತೆ ಪ್ರಶ್ನಿಸುತ್ತಿರುವುದು ಆಡಳಿತವಪಕ್ಷವನ್ನು, ವಿರೋಧಪಕ್ಷವನ್ನು ಅಲ್ಲ ಎನ್ನುವುದು ನೆನಪಿರಲಿ ಎಂದಿದ್ದಾರೆ.
ಸೌಜನ್ಯಪೂರ್ವಕವಾಗಿ ನೆರವು ನೀಡಿ ಎಂದು ಪ್ರಧಾನಿಯವರನ್ನು ಕೋರಿದ್ದೆ. ಅಂತಹ ಸೌಜನ್ಯಪೂರಿತ ನಡವಳಿಕೆಗೆ ನೀವು ಯೋಗ್ಯರಲ್ಲ. ನೆರವು ನೀಡಲು ನೀವು ದಾನಿಗಳಲ್ಲ, ಪಡೆಯಲು ನಾವು ನಿಮ್ಮ ಮನೆಮುಂದೆ ನಿಂತ ಭಿಕ್ಷುಕರೂ ಅಲ್ಲ. ಆರುವರೆ ಕೋಟಿ ಜನ ಬೆವರಗಳಿಕೆಯಲ್ಲಿ ಪಾವತಿಸಿರುವ ತೆರಿಗೆಹಣದಲ್ಲಿ ಕರ್ನಾಟಕದ ಪಾಲು ಕೇಳುತ್ತಿದ್ದೇವೆ ಎಂದು ಕಿಡಿಕಾರಿದ್ದಾರೆ.
ನಿಮ್ಮ ಪಂಚ ಪ್ರಶ್ನೆಗೆ ನನ್ನ ಮೊದಲ ಕಂತಿನ ದಶ ಪ್ರಶ್ನೆಗಳೇ ಉತ್ತರ.
- ಕರ್ನಾಟಕದಿಂದ #pmcares ನಿಧಿಗೆ ಸಂಗ್ರಹವಾಗಿರುವ ಹಣ ಎಷ್ಟು?
- #pmcares ನಿಧಿಯಿಂದ ಇಲ್ಲಿಯವರೆಗೆ ಕರ್ನಾಟಕಕ್ಕೆ ಕೊರೊನಾ ನಿರ್ವಹಣೆಗಾಗಿ ನೀಡಿರುವ ದುಡ್ಡು ಎಷ್ಟು?
- 50,000 ವೆಂಟಿಲೇಟರ್ ತಯಾರಿಕೆಗೆ #pmcares ನಿಧಿಯಿಂದ ರೂ. 2000 ಕೋಟಿ ನೀಡಲಾಗಿದೆ. ಅದರಲ್ಲಿ ಕರ್ನಾಟಕಕ್ಕೆ ನೀಡಿದ್ದು ಕೇವಲ 90 ವೆಂಟಿಲೇಟರ್ ಮಾತ್ರ ಎಂದು #PIB ಪ್ರಕಟಣೆ ತಿಳಿಸಿದೆ. ನಮ್ಮ ರಾಜ್ಯಕ್ಕೆ ಮಾತ್ರ ಈ ಅನ್ಯಾಯ ಏಕೆ?
- ಕೊರೊನಾ ಸೋಂಕಿನ ಪರಿಣಾಮವಾಗಿ ಲಾಕ್ ಡೌನ್ ಹೇರಿದ ನಂತರ ಬೀದಿಗೆ ಬಿದ್ದ ವಲಸೆ ಕಾರ್ಮಿಕರ ಕಲ್ಯಾಣಕ್ಕಾಗಿ #pmcares ನಿಧಿಯಿಂದ ಬಿಡುಗಡೆಯಾಗಿದ್ದೇ ರೂ. 1000 ಕೋಟಿ. ಅದರಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದು ಕೇವಲ ರೂ. 30 ಕೋಟಿ ಮಾತ್ರ. ಈ ಅನ್ಯಾಯಕ್ಕೆ ಯಾರು ಹೊಣೆ?
- ಆಕ್ಸಿಜನ್ ಕೊರತೆಯಿಂದ ರಾಜ್ಯದಲ್ಲಿ ಕೊರೊನಾ ಸೋಂಕಿತರು ಸಾಯುತ್ತಿರುವುದು ನಿಜವಲ್ಲವೇ @BJP4Karnataka ನಾಯಕರೇ? ರಾಜ್ಯದ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೇಡಿಕೆ ಎಷ್ಟು? ಪೂರೈಕೆಯಾಗುತ್ತಿರುವುದು ಎಷ್ಟು? ಕೇಂದ್ರ ಸರ್ಕಾರ ನೀಡಿರುವುದು ಎಷ್ಟು?
- ಪ್ರಪಂಚದಲ್ಲಿ ಅತಿಹೆಚ್ಚು ಆಕ್ಸಿಜನ್ ಉತ್ಪಾದಿಸುವ ದೇಶ ಭಾರತವಾಗಿದ್ದರೂ, ದೇಶದಲ್ಲಿ ಕೊರೊನಾ ಸೋಂಕಿತರು ಆಕ್ಸಿಜನ್ ಕೊರತೆಯಿಂದ ಸಾಯುತ್ತಿರುವುದು ಯಾಕೆ?
- ಭಾರತದಲ್ಲಿ 2019-20ಕ್ಕೆ ಹೋಲಿಸಿದರೆ 2020-21ರಲ್ಲಿ ಆಕ್ಸಿಜನ್ ಉತ್ಪಾದನೆ ದುಪ್ಪಟ್ಟಾಗಿದ್ದರೂ ಈಗಿನ ಆಕ್ಸಿಜನ್ ಕೊರತೆಗೆ ಕಾರಣ ಏನು? ಹೊಣೆ ಯಾರು?
- ಒಂದು ವರ್ಷದ ಹಿಂದೆಯೇ ಕೊರೊನಾ ಕಾಣಿಸಿಕೊಂಡಾಗಲೇ ಆಕ್ಸಿಜನ್ ಅವಶ್ಯಕತೆ ಬಗ್ಗೆ ತಜ್ಞರು ಎಚ್ಚರಿಸಿದ್ದರೂ ಹಿಂದಿನ ವರ್ಷಕ್ಕಿಂತ ಆಕ್ಸಿಜನ್ ರಫ್ತಿನ ಪ್ರಮಾಣ ದುಪ್ಪಟ್ಟುಗೊಳಿಸಿದ್ದು ಯಾಕೆ?
- ನಮ್ಮ ದೇಶದ ಜನಸಂಖ್ಯಾ ಪ್ರಮಾಣಕ್ಕೆ ಹೋಲಿಸಿದರೆ ಈ ವರೆಗೆ ಕಡಿಮೆ ಪ್ರಮಾಣದಲ್ಲಿ ಕೊರೊನಾ ಲಸಿಕೆ ನೀಡಿರುವುದು ಭಾರತದಲ್ಲಿ (10%ಗಿಂತ ಕಡಿಮೆ). ಈ ಹಿಂದುಳಿಯುವಿಕೆಗೆ ಯಾರು ಕಾರಣ?
- @narendramodi ಅವರು ಪ್ರಧಾನಿಯಾದ ನಂತರ ಪ್ರಾಥಮಿಕ ಆರೋಗ್ಯ ಕೇಂದ್ರ ಸುಧಾರಣೆಯಾಗಿದ್ದರೆ ಕೊರೊನಾ ರೋಗಿಗಳು ಚಿಕಿತ್ಸೆ ಇಲ್ಲದೆ ಸಾಯುತ್ತಿರುವುದು ಯಾಕೆ? ಖಾಸಗಿ ಆಸ್ಪತ್ರೆಗಳ ಮುಂದೆ ಕ್ಯೂ ನಿಂತಿರುವುದು ಯಾಕೆ? (ಪ್ರಶ್ನೆಗಳು ಮುಂದುವರಿಯುವುದು) ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರ, ಬಿಜೆಪಿಗೆ ತಿರುಗೇಟು ನೀಡಿದ್ದಾರೆ.



