ರೈತರು ಸ್ವಾಮಿನಾಥನ್ ವರದಿ ಜಾರಿಗೆ ತನ್ನಿʼ ಎಂದು ಪ್ರತಿಭಟನೆ ನಡೆಸಲು ತಯಾರಾಗಿದ್ದಾರೆ
ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಕೊಡುವುದರ ಜೊತೆಗೆ ಅವರ ಶಿಫಾರಸುಗಳಲ್ಲಿ ಕೆಲವನ್ನಾದರೂ ಅನುಷ್ಠಾನಗೊಳಿಸಿದ್ದರೆ ಇನ್ನೂ ಹೆಚ್ಚು ಸಂತೋಷವಾಗುತ್ತಿತ್ತು
ಪ್ರೊ.ಎಂ.ಎಸ್.ಸ್ವಾಮಿನಾಥನ್ ಅಧ್ಯಕ್ಷತೆಯ ರೈತರ ರಾಷ್ಟ್ರೀಯ ಆಯೋಗವು ಡಿಸೆಂಬರ್ ೨೦೦೪ರಿಂದ ಅಕ್ಟೋಬರ್ ೨೦೦೬ರ ಅವಧಿಯಲ್ಲಿ ಒಟ್ಟು ಐದು ವರದಿಗಳನ್ನು ಸರಕಾರಕ್ಕೆ ಸಲ್ಲಿಸಿತ್ತು. ಈ ವರದಿಗಳು ರಾಷ್ಟ್ರೀಯ ಕೃಷಿ ನೀತಿಯ ಅಗತ್ಯ, ಕೃಷಿ, ಸಂಶೋಧನೆಗಳಿಗೆ ಪ್ರಾಧಾನ್ಯ, ಸಂಪನ್ಮೂಲಗಳ ಕ್ರೋಢೀಕರಣ, ಮತ್ತಿತರ ವಿಷಯಗಳನ್ನು ಒಳಗೊಂಡಿತ್ತು.
ಜೊತೆಗೆ, ಆಹಾರ-ಪೌಷ್ಟಿಕಾಂಶಗಳ ಭದ್ರತೆ, ಕೃಷಿ ಸುಸ್ಥಿರತೆ, ಭೂ ಸುಧಾರಣೆ, ಕೃಷಿ ಭೂಮಿ ಮಾರಾಟ ನಿಯಂತ್ರಣ, ನೀರಾವರಿ, ಸಾಲ ಮತ್ತು ವಿಮೆ, ಒಣಭೂಮಿ ಅಭಿವೃದ್ಧಿ, ಬೆಲೆ ಕುಸಿತದಿಂದ ರೈತರ ರಕ್ಷಣೆ, ರೈತರ ಆತ್ಮಹತ್ಯೆ ತಡೆ, ಕೃಷಿ ಭೂಮಿಯನ್ನು ಕಾರ್ಪೋರೇಟ್ ಕುಳಗಳಿಗೆ ಕೊಡದಿರುವ ನಿಯಮಗಳ ರೂಪಿಸುವಿಕೆ ಮತ್ತಿತರ ವಿಷಯಗಳ ಬಗ್ಗೆ ಮಹತ್ವದ ಮತ್ತು ಅನುಷ್ಠಾನಕ್ಕೆ ತರಲು ಯೋಗ್ಯವಾದ ಅನೇಕ ಶಿಫಾರಸುಗಳನ್ನು ನೀಡಿತ್ತು.
ಸ್ವಾಮಿನಾಥನ್ ಕಮಿಟಿಯ ಶಿಫಾರಸುಗಳನ್ನು ಯಾವ ಸರ್ಕಾರವೂ ಗಣನೆಗೆ ತೆಗೆದುಕೊಂಡಿಲ್ಲ. ಅವು ಯಾಕೆ ಬೇಡ ಎಂದೂ ಹೇಳಿಲ್ಲ. ʼಸ್ವಾಮಿನಾಥನ್ ವರದಿ ಜಾರಿಗೆ ತನ್ನಿʼ ಎಂದು ಮನವಿ ಮಾಡಿಕೊಂಡು ರಸ್ತೆಯಲ್ಲಿ ಕುಳಿತ ರೈತರೊಡನೆ ಮೋದಿ ಸರಕಾರ ಮಾತಾಡಲೂ ಇಲ್ಲ.
ಕೃಷಿ ಇಲ್ಲದೇ ಇರುವ ದಿನಗಳಲ್ಲೂ ಆ ಜನರಿಗೆ ಉದ್ಯೋಗವನ್ನು ಒದಗಿಸುವ ಉದ್ದೇಶದಿಂದ ಜಾರಿಗೆ ತರಲಾದ ಕೇಂದ್ರ ಸರಕಾರದ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ–ನರೇಗಾ ಯೋಜನೆಗೆ ಕೇಂದ್ರ ಸರಕಾರ ಕರ್ನಾಟಕಕ್ಕೆ ಇನ್ನೂ ೯೫೦ ಕೋಟಿ ಬಾಕಿ ಉಳಿಸಿಕೊಂಡಿದೆ. ಬಹುಶ: ಈ ಯೋಜನೆ ನಿಂತು ಹೋಗುವ ಸಾಧ್ಯತೆಗಳೇ ಹೆಚ್ಚು.
ಈಗ ಸ್ವಾಮಿನಾಥನ್ ಅವರಿಗೆ ಭಾರತ ರತ್ನ ದೊರೆತಿದೆ. ʼರೈತರು ಸ್ವಾಮಿನಾಥನ್ ವರದಿ ಜಾರಿಗೆ ತನ್ನಿʼ ಎಂದು ಪ್ರತಿಭಟನೆ ನಡೆಸಲು ತಯಾರಾಗಿದ್ದಾರೆ. ʼಒಪ್ಪಿಗೆ ಇಲ್ಲದೆ ಪ್ರತಿಭಟನೆ ಮಾಡಿದರೆ ನಿಮ್ಮ ಅಕೌಂಟ್ ಗಳನ್ನು ಮುಟ್ಟುಗೋಲು ಹಾಕುತ್ತೇವೆʼ ಎಂದು ಹರಿಯಾಣ ಸರಕಾರ ಬೆದರಿಕೆ ಹಾಕಿದೆ. ಪ್ರಧಾನಿಗಳು ಕುರಳ್ ಬಗ್ಗೆ ಬರೆದಿದ್ದಾರೆ!
- ಪ್ರೊ.ಪುರುಷೋತ್ತಮ ಬಿಳಿಮಲೆ, ಹಿರಿಯ ವಿದ್ವಾಂಸರು




