ಇಂದು ನಾನು ಗೌರವಿಸುವ ಆಪ್ತಜೀವ ಮತ್ತು ನಾನು ಎದುರಿಸುವ ಅನೇಕ ಸವಾಲುಗಳಲ್ಲಿ ಸದಾ ನನ್ನ ಜೊತೆಗೆ ನಿಲ್ಲುವ Murali Mohan Kati ಸರ್ ರವರ ಸಂಪಾದನೆಯ ‘ಒಂದೇ ಸ್ಲೇಟ್’ ಪುಸ್ತಕ ಕೈಸೇರಿತು.
ಕೈಗೆ ಪುಸ್ತಕ ಸಿಕ್ಕ ತಕ್ಷಣ ಪುಟಗಳನ್ನ ತಿರುವಿದೆ. ಒಂದೇ ಸ್ಲೇಟು ಎಂಬ ಬರಹ ಸೆಳೆಯಿತು, ಓದುತ್ತಾ ಹೋದೆ.
ನಾನು ಓದಿದ ಮೇಲೆ ಐದನೇ ತರಗತಿ ಮಕ್ಕಳನ್ನ ಕರೆದು, ಗಿಡದ ಎಳೆಬಿಸಿಲು ತುಸು ನೆರಳಲ್ಲಿ ಕೂರಿಸಿಕೊಂಡು ನಮ್ಮ ವಾಣಿಗೆ ಓದಲು ಹೇಳಿದೆ. ನಾವು ಏನಾದರೂ ಮುಖ್ಯವಾದದ್ದನ್ನ ಕೇಳಿಸಿಕೊಳ್ಳುವಾಗ ಕಣ್ಣುಮುಚ್ಚಿಕೊಂಡು ಕೇಳಿಸಿಕೊಳ್ಳುತ್ತೇವೆ. ಇಂದೂ ಹಾಗೆಯೇ ಮಾಡಿದೆವು.
‘ಒಂದೇ ಸ್ಲೇಟು’ ಬರಹ ಅತ್ಯಂತ ಓರಿಜಿನಲ್ ಆದ ಪ್ರಾಮಾಣಿಕವಾದ ಅಧಿಕೃತ ಅನುಭವಗಳ ದಾಖಲೆ. ತಳಸಮುದಾಯದ ಹೆಣ್ಣುಮಗಳೊಬ್ಬಳ ಸ್ವಕಥನ.
ಇಲ್ಲಿ ಬಳಸಿರುವ ಭಾಷೆ ಅದೆಷ್ಟು ಸಹಜವಾಗಿದೆಯೆಂದರೆ ಯಾವುದೇ ಬುದ್ಧಿಮತ್ತೆಯನ್ನ ತೋರುಗೊಡದ, ಸೃಜಶೀಲವಾಗಿ ಕಟ್ಟಬೇಕೆಂಬ ಇರಾದೆ ಇರದ ಯಾವ ಉದ್ದೇಶವೂ ಇಲ್ಲದೆ ಸಹಜೀವದೊಂದಿಗೆ ಕೂತು ಮಾತಾಡಿದ ಮುಕ್ತತೆ ಈ ಬರಹದಲ್ಲಿದೆ. ಈ ಸಹಜತೆಯೇ ಈ ಬರಹದ ಶಕ್ತಿ.
ನನ್ನನ್ನ ನಮ್ಮ ಮಕ್ಕಳನ್ನ ಬಹುವಾಗಿ ಕಲಕಿದ್ದು ಈ ಬರಹದಲ್ಲಿನ ಪಶ್ಚಾತ್ತಾಪಗಳು. ಆದರೆ ನಿಜವಾಗಿಯೂ ಇವು ಪಶ್ಚಾತ್ತಾಪಗಳಲ್ಲ, ನಮ್ಮ ಸಮಾಜ ನಮ್ಮ ಶಿಕ್ಷಣವ್ಯವಸ್ಥೆಯ ಬಲಹೀನತೆಗಳು, ಅಸಹಾಯಕತೆಗಳು.
ತಾನು ಹುಟ್ಟಿದ ಕಾರಣಕ್ಕೆ ತನ್ನ ದೇಖರೇಖಿಗಾಗಿ ತನಗನ ಹಿರಿಯಕ್ಕ ಶಾಲೆ ಬಿಡಬೇಕಾಯಿತು ಎಂಬುದನ್ನ ಓದಿದಾಗ ಇದು ನಮ್ಮ ನೆಲದ ಅನೇಕ ಹೆಣ್ಣುಮಕ್ಕಳ ಕಥೆಯನ್ನೇ ರಿಪ್ರೆಸೆಂಟ್ ಮಾಡುತ್ತಿದೆಯಲ್ಲ ಎನ್ನಿಸಿತು. ಮತ್ತೊಬ್ಬ ಅಕ್ಕ ತನಗನ ಜೊತೆಗೇ ಓದುತ್ತಿರುವಾಗ ಇಬ್ಬರಿಗೂ ಒಂದೇ ಸ್ಲೇಟು. ತನ್ನಕ್ಕನ ಸ್ಲೇಟನ್ನು ತಾನು ತೆಗೆದುಕೊಂಡು ಬರೆದು ತೋರಿಸಿದಾಗ ತನ್ನಕ್ಕ ಪೆಟ್ಟು ತಿನ್ನಬೇಕಾಯಿತು ಎಂದು ನೊಂದು ನುಡಿಯುವಾಗ ಇದು ನಮ್ಮದೇ ನೋವು ಎನ್ನಿಸುವ ಸಾರ್ವತ್ರಿಕ ಗುಣ ಈ ಬರಹಕ್ಕಿದೆ.
ನಯನ (ಹೆಸರು ಬದಲಿಸಲಾಗಿದೆ) ಎಂಬ ಹೆಸರಿನಲ್ಲಿ ಬರೆಯಲಾದ ಈ ಬರಹದಲ್ಲಿ ಕೆಂಡದುಂಡೆಗಳಂಥ ಸತ್ಯಗಳಿವೆ. ಈ ಕೆಂಡದುಂಡೆಗಳನ್ನ ಲೇಖಕಿ ತಾನೇ ಉಂಡುತಿಂದು ಅರಗಿಸಿಕೊಂಡು ಇಂದು ಪ್ರೊಫೆಸರ್ ಆಗಿ ಬದುಕು ಕಟ್ಟಿಕೊಂಡವರು.
ಶಿಕ್ಷಣವೆನ್ನುವುದು ಇನ್ನೂ ಅನೇಕ ಜೀವಗಳಿಗೆ ಎಟುಕುವ ಸರಕಾಗಿ ಉಳಿದಿಲ್ಲ. ಇನ್ನೂ ನಮ್ಮ ನಡುವೆ ಅನೇಕ ಮಕ್ಕಳು ಹೊಲದಲ್ಲಿ ಎತ್ತಾಗಿ, ಇಟ್ಟಂಗಿ ಬಟ್ಟೆಗಳಲ್ಲಿ ಕತ್ತೆಗಳ ಕಾಯುತ್ತಾ ಬದುಕು ಸುಟ್ಟುಕೊಳ್ಳುತ್ತಿರುವ ಅನೇಕ ಮಕ್ಕಳಿವೆ. ಆ ಮಕ್ಕಳೆಲ್ಲರ ನೋವಿನ ಪ್ರತಿನಿಧಿಯಂತೆ ಈ ನಯನ ಇದ್ದಾರೆ.
ಹಳ್ಳಿಗಾಡ ಹೆಣ್ಣುಮಕ್ಕಳಿಗೆ ಬದುಕು ಕಟ್ಟಿಕೊಳ್ಳುವ ಅವಕಾಶಗಳನ್ನ ಕುಟುಂಬ ಸಮಾಜ ಮತ್ತು ವ್ಯವಸ್ಥೆ ಯಾವುದೂ ಕೂಡ ನೀಡುತ್ತಿಲ್ಲ ಬದಲಾಗಿ ಸಮಸ್ಯೆ ಗಳ ಬಂಧನದಲ್ಲಿ ಬಂಧಿಸಿ ಅಲ್ಲಿಯೇ ಅನೇಕ ಬದುಕುಗಳು ಮುಗಿದು ಹೋಗುವ ಸಾಕ್ಷಿಗಳನ್ನ ನಮ್ಮ ಮಧ್ಯೆ ಕಾಣುತ್ತಿದ್ದೇವೆ. ಅದರ ಅಧಿಕೃತ ದಾಖಲೆಯಾಗಿ ಈ ಬರಹ ಕಾಣಿಸುತ್ತಿದೆ.
ಒಂದು ಕಾದಂಬರಿ ಕಟ್ಟಿಕೊಡಬಹುದಾದ ಗಾಢ ಅನುಭವಗಳನ್ನ ಈ ನಾಲ್ಕು ಪೇಜಿನ ಬರಹ ನೀಡುತ್ತದೆ.
ಇಂಥ ಅನೇಕ ಜೀವಗಳು ಹೇಗೋ ಹೇಗೆಲ್ಲ ಹೋರಾಟ ಮಾಡಿ ಅಂತಿಮವಾಗಿ ಗೆದ್ದಿದ್ದಾರೆ. ಆದರೆ ಒಂದು ಗೆಲುವಿನ ಹಿಂದೆ ಹತ್ತಾರು ಸೋಲುಗಳೂ ಇವೆ. ಈ ಸೋತವರ ಅನುಭವಗಳು ಹೇಗೆಲ್ಲ ಇರಬಹುದು… ಅವು ನಮ್ಮ ಲಕ್ಷಾಂತರ ಕೋಟಿ ಬಜೆಟ್ ಅನ್ನು ಅದೆಷ್ಟು ರೀತಿಯಲ್ಲಿ ಅಣಕಿಸಬಹುದು, ಶಪಿಸಬಹುದು ಎಂಬುದನ್ನ ನೆನಪಿಸಿಕೊಂಡು ಆತಂಕಿತನಾಗಿದ್ದೇನೆ.
ನಾವು ಪಾಲಿಸಿಗಳ ಬಗ್ಗೆ ಮಾತನಾಡುತ್ತೇವೆ, ಕಲಿಸುವ ವಿಧಾನಗಳ ಬಗ್ಗೆ ಮಾತನಾಡುತ್ತೇವೆ, ಆದರೆ ಶಾಲೆಯ ಮೆಟ್ಟಿಲನ್ನೇ ಹತ್ತದ ಪರಿಸ್ಥಿತಿ ಯ ಬಗ್ಗೆ ನಾವು ಮಾತನಾಡಲು ಸಾಧ್ಯವಾಗುತ್ತಿದೆಯೇ? ಅವರನ್ನ ಕರೆತರುವ ನಮ್ಮ ಪ್ರಯತ್ನಗಳು ಎಷ್ಟು ಸಫಲವಾಗಿವೆ ಎಂಬುದರ ಬಗ್ಗೆ ನಮ್ಮ ಆತ್ಮಾವಲೋಕನ ಸಾಧ್ಯವಾಗಿದೆಯೇ?
ಇಂಥ ಅನೇಕ ಪ್ರಶ್ನೆಗಳನ್ನು ಈ ಪುಟ್ಟ ಬರಹ ಹುಟ್ಟುಹಾಕುತ್ತದೆ.
ಕಾಡುವ ಅಸ್ಪೃಶ್ಯತೆ, ಬಡತನದ ಸವಾಲು, ಚಟಗಳು ತಂದೊಡ್ಡುವ ಅಸಂಗತತೆಗಳು ಇನ್ನೂ ಅನೇಕ ಸಂಗತಿಗಳನ್ನ ಈ ಬರಹ ಅಂಗೈಗಾಯಗಳನ್ನ ತೆರೆದು ತೋರಿಸಿದಂತೆ ನಮ್ಮೆದೆಯ ಮುಂದೆ ಚಲ್ಲಿ ನಗುತ್ತದೆ. ಕಾಣುವ ಕೇಳಿಸಿಕೊಳ್ಳುವ ಸಹಿಸುವ ಸಹೃದಯತೆ ಈ ಬರಹ ಆಪೇಕ್ಷಿಸುತ್ತದೆ.
ಹೃದ್ಯವಾಗಿ ನಮ್ಮ ವಾಣಿ ಈ ಬರಹ ಓದಿದಳು. ಅವಳು ಓದುತ್ತ ಓದುತ್ತ ಗದ್ಗದಿತಳಾಗಿದ್ದು ಅವಳ ದನಿಯಲ್ಲಿ ಕೇಳಿಸುತ್ತಿತ್ತು. ಉಳಿದ ಮಕ್ಕಳೆಲ್ಲ ಬರಹ ಮುಗಿದಾಗ ಹನಿಗಣ್ಣಾಗಿ ಕಣ್ಣು ಒರೆಸಿಕೊಳ್ಳುತ್ತಾ ಮಾತು ಹೊರಡದೆ ಸುಮ್ಮನೇ ಕೂತಿದ್ದರು.
ನಾನೂ ಏನೂ ಮಾತನಾಡಲಿಲ್ಲ. ಹಲಹೊತ್ತು ಸುಮ್ಮಬಿದ್ದು ನಾನೇ ಮೌನಮುರಿದು ಈ ಬರಹದ ಕುರಿತು ಮಾತುಕತೆ ಆರಂಭಿಸಿದೆ. ತಮ್ಮ ತಮ್ಮ ಅಕ್ಕ ತಂಗಿಯರ ಅಣ್ಣತಮ್ಮಂದಿರ ಕುಟುಂಬಗಳ ಓಣಿಯ ಊರಿನ ಕಥನಗಳೆಲ್ಲ ನಮ್ಮ ಮಾತಿನ ಮಧ್ಯ ಬಂದು ಹೋದವು.
ಈ ಮಾತುಕತೆಗಳಲ್ಲಿ ಮುರಳಿ ಸರ್ ಈ ಬರಹ ಬರೆದವರ ಕುರಿತು ಮತ್ತಷ್ಟು ಮಾಹಿತಿಯನ್ನ ಹಂಚಿಕೊಂಡಿದ್ದನ್ನ ಮಕ್ಕಳೊಂದಿಗೆ ಹಂಚಿಕೊಂಡೆ.
ಇಷ್ಟೆಲ್ಲ ಸವಾಲುಗಳನ್ನ ಎದುರಿಸಿದ ಆ ಹೆಣ್ಣುಮಗು ಈಗ ಕಾಲೇಜಿಂದರಲ್ಲಿ ಪ್ರೊಫೆಸರ್ ಎಂದಾಗ ನಮ್ಮ ಮಕ್ಕಳು ಬೆರಗಿನಿಂದ ಅಬ್ಬಾ! ಎಂದು ಉದ್ಗಾರ ತೆಗೆದರು.
ನಮ್ಮ ಮಕ್ಕಳ ಕಣ್ಣಲ್ಲಿ ಭರವಸೆಯ ಬೆಳಕನ್ನ ಹುಟ್ಟಿಸಿದ ಈ ಬರಹಕ್ಕೆ ಸಲಾಂ…
– ವೀರಣ್ಣ ಮಡಿವಾಳರ, ಕವಿಗಳು




