ಬೆಳಗಾವಿ: ಭೋವಿ ಅಭಿವೃದ್ಧಿ ನಿಗಮವನ್ನು ಬೆಳಗಾವಿಯ ಸುವರ್ಣ ಸೌಧಕ್ಕೆ ವರ್ಗಾವಣೆ ಮಾಡಿ ಎಂದು ಸಾಮಾಜಿಕ ಹೋರಾಟಗಾರ ಮತ್ತು ಭೋವಿ ಸಮುದಾಯದ ಯುವ ನಾಯಕ ಸಿದ್ದು ಬಂಡಿವಡ್ಡರ್ ಒತ್ತಾಯಿಸಿದ್ದಾರೆ.
ಭೋವಿ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಉತ್ತರ ಕರ್ನಾಟಕದಲ್ಲಿ. ಅಲ್ಲದೇ ನಿಗಮದ ಸೌಲಭ್ಯಗಳನ್ನು ಪಡೆದುಕೊಳ್ಳುವ ಸಲುವಾಗಿ ಬೆಂಗಳೂರು ನಂಬಿ ಹೋಗುವ ಯಾವುದೇ ಜಿಲ್ಲೆಯ ಜನರಿಗೆ ಇರುವ ಸಲುವಾಗಿ ಒಂದು ಸಣ್ಣ ವಸತಿ ಗೃಹಗಳು ಕೂಡಾ ಬೆಂಗಳೂರಿನಲ್ಲಿ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ ಅನೇಕ ಸಮುದಾಯದ ಸಂಘ – ಸಂಸ್ಥೆಗಳು ಸಮಾಜ ಕಲ್ಯಾಣ ಇಲಾಖೆಯಿಂದ ಅನುದಾನ ಹಾಗೂ ನಿವೇಶನಗಳನ್ನು ಪಡೆದು ವಿದ್ಯಾರ್ಥಿ ವಸತಿ ನಿಲಯಗಳನ್ನು ಕಟ್ಟಿದ್ದು, ಈಗ ಕಟ್ಟಡಗಳನ್ನು ದುಡ್ಡಿಗಾಗಿ ಬೇರೆಯವರಿಗೆ ಬಾಡಿಗೆ ರೂಪದಲ್ಲಿ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕರ್ನಾಟಕದ ಯಾವುದೇ ಮೂಲೆಯಿಂದ ಬೆಂಗಳೂರಿಗೆ ಹೋಗಿ ಹೊಟೇಲ್ ರೂಮುಗಳನ್ಮು ಹಿಡಿದು ಕೆಲಸ ಮುಗಿಸಿಕೊಂಡು ಬರುವುದು ಬಹಳ ಕಷ್ಟಕರವಾಗಿದೆ. ಆದಕಾರಣ ಎಲ್ಲಾ ಭಾಗದ ಜನರಿಗೆ ಅನುಕೂಲರವಾಗುವ ಹಾಗೇ ಭೋವಿ ನಿಗಮದ ಕಚೇರಿಯನ್ನು ಕರ್ನಾಟಕದ ಪ್ರಮುಖ ಕೇಂದ್ರವಾದ ಬೆಳಗಾವಿಯ ಸುವರ್ಣ ಸೌಧಕ್ಕೆ ವರ್ಗಾವಣೆ ಮಾಡಿದರೆ ಅನುಕೂಲಕರವಾಗುತ್ತದೆ ಎಂದಿದ್ದಾರೆ.
ಈಗಾಗಲೇ ಸರ್ಕಾರ ಜನರಿಗೆ ಅನುಕೂಲವಾಗಲಿ ಎಂದು ಸರ್ಕಾರದ ಬೇರೆ ಬೇರೆ ಇಲಾಖೆಯ 9 ಕಚೇರಿಗಳನ್ನು ಬೆಳಗಾವಿಯ ಸುವರ್ಣ ಸೌಧಕ್ಕೆ ವರ್ಗಾವಣೆ ಮಾಡಿದ್ದಾರೆ. ಇದರಿಂದ ಎಲ್ಲಾ ಭಾಗದ ಜನರಿಗೆ ಅನುಕೂಲವಾಗಿದೆ. ಈಗ ಭೋವಿ ಅಭಿವೃದ್ಧಿ ನಿಗಮವನ್ನು ಬೆಳಗಾವಿಯ ಸುವರ್ಣ ಸೌಧಕ್ಕೆ ವರ್ಗಾವಣೆ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.
ಜೊತೆಗೆ, ನಿಗಮದ ಕಚೇರಿಯನ್ನು ಬೆಳಗಾವಿಗೆ ವರ್ಗಾಯಿಸದೇ ಇದ್ದಲ್ಲಿ ಭವಿಷ್ಯದಲ್ಲಿ ಹೋರಾಟದ ರೂಪವನ್ನು ಕೂಡಾ ಪಡೆಯಬಹುದು ಎಂದು ಎಚ್ಚರಿಸಿದ್ದಾರೆ.




