ವಿಜಯಪುರ: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ಈ ಬಾರಿ ಉತ್ತರ ಕರ್ನಾಟಕದ ಅಶೋಕ ಲಿಂಬಾವಳಿ ಅವರಿಗೆ ನೀಡಬೇಕು ಎಂದು ವಿಜಯಪುರ ಜಿಲ್ಲಾ ಭೋವಿ (ವಡ್ಡರ) ಸಮಾಜದ ಯುವ ಮುಖಂಡ ಹಾಗೂ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಖಜಾಂಚಿ ಪರಶುರಾಮ ಹೊಸಪೇಟೆ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ವಿವಿಧ ನಿಗಮಗಳ ಅಧ್ಯಕ್ಷರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ. ಆದರೆ ಕಳೆದ ಎರಡು ವರ್ಷಗಳಿಂದ ಭೋವಿ ನಿಗಮಕ್ಕೆ ರಾಜ್ಯ ಸರ್ಕಾರ ಅಧ್ಯಕ್ಷರನ್ನು ನೇಮಿಸಿಲ್ಲ ಎಂದ ಅವರು, ಕೂಡಲೇ ಈ ಬಾರಿ ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ಮತ್ತು ನಮ್ಮ ಸಮುದಾಯವನ್ನು ರಾಜ್ಯಾದ್ಯಂತ ಸಂಚರಿಸಿ ಸಮುದಾಯವನ್ನು ಸಂಘಟನೆ ಮಾಡಿದ ಅಶೋಕ ಲಿಂಬಾವಳಿ ಅವರನ್ನು ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದರು.
ಅವರನ್ನು ನೇಮಿಸಿದರೆ ನಮ್ಮ ಸಮುದಾಯದ ಕಟ್ಟ ಕಡೆಯ ವ್ಯಕ್ತಿಗಳಿಗೂ ಸರ್ಕಾರದ ಸೌಲಭ್ಯಗಳನ್ನು ತಲುಪಲು ಸಾಧ್ಯ. ಜೊತೆಗೆ ಈ ಬಾರಿ ಉತ್ತರ ಕರ್ನಾಟಕದವರಾದ ಅಶೋಕ ಲಿಂಬವಳಿ ಅವರನ್ನು ರಾಜ್ಯ ಸರಕಾರ ನೇಮಕ ಮಾಡಿದರೆ ಉತ್ತರ ಕರ್ನಾಟಕದಲ್ಲಿ ಪಕ್ಷದ ಸಂಘಟನೆಗೆ ಮತ್ತು ನಮ್ಮ ಸಮುದಾಯದ ಸಂಘಟನೆಗೆ ಹೆಚ್ಚು ಅನುಕೂಲವಾಗುವುದು. ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದಕ್ಷಿಣ ಕರ್ನಾಟಕಕ್ಕೆ ಆದ್ಯತೆ ನೀಡಲಾಗಿದೆ ಎಂದರು.



