ಕೊರೋನಾ ಸಂಕಷ್ಟ ಕಾಲದಲ್ಲಿ ನೆರವು ನೀಡಿದ್ದು, ಸಾರ್ಥಕ ZP CEO ಡಾ.ನಂದಿನಿ ದೇವಿ
ಚಿತ್ರದುರ್ಗ: ಕೋವಿಡ್ -19, ಕೊರೋನಾ ಸಂಕಷ್ಟ ಸಂದರ್ಭದಲ್ಲಿ ಕಷ್ಟದಲ್ಲಿದ್ದವರಿಗೆ ನೆರವು ನೀಡುವ ಮೂಲಕ ಸಾರ್ಥಕ ಕೆಲಸ ಮಾಡಿದವರಿಗೆ ಜನತೆ ಸದಾ ಅಭಾರಿ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ ನಂದಿನಿ ದೇವಿ ಹೇಳಿದರು.
ಚಿತ್ರದುರ್ಗ ಪತ್ರಿಕಾ ಭವನದಲ್ಲಿ ಸಿದ್ಧಾಪುರ ನೂತನ NGO ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಕಲಚೇತನರು ಮತ್ತು ಸ್ವಚ್ಛತೆ ಕಾರ್ಮಿಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು, ಕಳೆದ ಎರಡು ತಿಂಗಳಿನಿಂದ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡುವ ಮುಖಾಂತರ ಜನರ ಕಷ್ಟ ಕಾಲಕ್ಕೆ ನೆರವು ಹಸ್ತ ನೀಡಿರುವುದು ಪ್ರಶಂಸನೀಯ ಎಂದರು.
ಕೊರೋನಾ ಸಂಕಷ್ಟದ ಕಾಲ ಜನರಲ್ಲಿ ತೀವ್ರ ಸಂಕಷ್ಟವನ್ನು ಸೃಷ್ಟಿ ಮಾಡಿತ್ತು. ಹಸಿವು, ಬಡತನ ಸೇರಿಕೊಂಡು ಜನರಿಗೆ ಕಷ್ಟದ ಕಾಲ ಸೃಷ್ಟಿಯಾಗಿತ್ತು. ಇಂತಹ ಸಮಯದಲ್ಲಿ ಜನರಿಗಾಗಿ ಕೆಲಸ ಮಾಡಿದವರು ನಿಜಕ್ಕೂ ಅಭಿನಂದನಾರ್ಹ ಎಂದರು.
ಸಿದ್ಧಾಪುರ ನೂತನ ಸಂಸ್ಥೆಯ ಅಧ್ಯಕ್ಷ ರಘು ಮಾತನಾಡಿ, ಕೊರೋನಾ ಕಷ್ಟ ಕಾಲದಲ್ಲೂ ನೂತನ ಸಂಸ್ಥೆಯಿಂದ ನಿರಂತರವಾಗಿ ರೇಷನ್ ಕಿಟ್ ನೀಡಲಾಗಿದೆ. ಆರೋಗ್ಯ ಕಿಟ್ ಗಳನ್ನು ನೀಡಲಾಗಿದೆ ಎಂದರು.
ವಿಕಲಚೇತನರ ಇಲಾಖೆ ಅಧಿಕಾರಿ ವೈಶಾಲಿ ಮಾತನಾಡಿ, ಅಂಗವಿಕಲರು ವ್ಯಾಕ್ಸಿನೇಷನ್ ಹಾಕಿಸಿಕೊಳ್ಳುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಆಹಾರ ಧಾನ್ಯಗಳ ಕಿಟ್ ವಿತರಣಾ ಸಮಾರಂಭದಲ್ಲಿ ಜಿಲ್ಲಾ ವಾರ್ತಾ ಇಲಾಖೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಅಧಿಕಾರಿ ಬಿ.ಧನಂಜಯ, ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಹೆಚ್. ಲಕ್ಷ್ಮಣ್, ಸ್ಪೂರ್ತಿ ವಿಕಲಚೇತನರ ಟ್ರಸ್ಟ್ ಅಧ್ಯಕ್ಷ ತಿಪ್ಪಮ್ಮ, ಪರಿವರ್ತನಾ ಟ್ರಸ್ಟ್ ಅಧ್ಯಕ್ಷ ಕಾರ್ತಿಕ್, ನರೇನಹಳ್ಳಿ ಅರುಣ್ ಕುಮಾರ್, ಮಹಮದ್ ಹನೀಫ್ ಮೊದಲಾದವರು ಭಾಗವಹಿಸಿದ್ದರು.



