ಶಿವಮೊಗ್ಗ: ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ನಡೆಸುತ್ತಿದ್ದ ಅಣಕು ಶವ ಯಾತ್ರೆ ವೇಳೆ ಪಕ್ಷದ ಹಿರಿಯ ನಾಯಕ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಭಾನುಪ್ರಕಾಶ್ ಹಠಾತ್ ಕುಸಿದು ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಶಿವಮೊಗ್ಗದ ಜನಪ್ರತಿನಿಧಿಗಳು ಮತ್ತು ಪಕ್ಷದ ನೂರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ದರ ಏರಿಕೆ ವಿರೋಧಿಸಿ ವಿಧಾನ ಪರಿಷತ್ ಸದಸ್ಯ ಡಿಎಸ್ ಅರುಣ್ ಕುದುರೆ ಏರಿಬಂದು ಗಮನ ಸೆಳೆದರೆ, ಶಾಸಕ ಚನ್ನಬಸಪ್ಪ ಅಣಕು ಶವಯಾತ್ರೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಇದರಲ್ಲಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಭಾನುಪ್ರಕಾಶ್, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ಆನಂತರ ಎಲ್ಲ ಕಾರ್ಯಕರ್ತರು ರಸ್ತೆ ಮಧ್ಯದಲ್ಲಿ ಕುಳಿತು ರಘುಪತಿ ರಾಘವ ಭಜನೆ ಹಾಡತೊಡಗಿದರು. ಈ ವೇಳೆ ನಾಯಕ ಭಾನುಪ್ರಕಾಶ್ ಅವರು ಏಕಾಏಕಿ ಕುಸಿದುಬಿದ್ದರು. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ಕೊಂಡಯ್ಯಲಾಯಿತು. ಆದರೆ ಆ ವೇಳೆಗಾಗಲೇ ಅವರು ನಿಧನರಾಗಿದ್ದರು. ಅವರನ್ನು ಪರೀಕ್ಷಿಸಿದ ವೈದ್ಯರು ತೀವ್ರ ಹೃದಯಘಾತದಿಂದ ಮೃತಪಟ್ಟಿದ್ದಾರೆ ಎಂದು ಪ್ರಕಟಿಸಿದರು.
ಈ ಮೂಲಕ ರಾಜ್ಯ ಸರ್ಕಾರದ ವಿರುದ್ಧ ನಡೆಯುತ್ತಿದ್ದ ಹಾಸ್ಯ, ವಿಡಂಬನೆಯ ಪ್ರತಿಭಟನೆಯ ತಾಣ ಶೋಕಸಾಗರವಾಗಿ ಪರಿವರ್ತನೆಯಾಯಿತು.
ಶಿವಮೊಗ್ಗದಲ್ಲಿ ಬಿಜೆಪಿ ನಾಯಕರಾದ ಕೆ.ಎಸ್.ಈಶ್ವರಪ್ಪ, ಬಿ.ಎಸ್.ಯಡಿಯೂರಪ್ಪ ಮತ್ತು ಶಂಕರಮೂರ್ತಿ ಅವರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಭಾನುಪ್ರಕಾಶ್ ಅವರು ಸಂಘ ಪರಿವಾರದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು.
ರಾಜ್ಯ ಆರ್ ಎಸ್ ಎಸ್ ಶಕ್ತಿಕೇಂದ್ರ ಹಾಗೂ ಸಂಸ್ಕೃತ ಗ್ರಾಮ ಮತ್ತೂರಿನವರಾದ ಭಾನುಪ್ರಕಾಶ್ ಅವರು ಬಾಲ್ಯದಿಂದಲೂ ಸಂಘ ಪರಿವಾರದ ಕಾರ್ಯಕರ್ತರಾಗಿ ಆನಂತರ ಜನಸಂಘದ ಮೂಲಕ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ವಿವಿಧ ಹುದ್ದೆಗಳನ್ನು ನಿಭಾಯಿಸಿದವರು ಕಳೆದ 2013 ರಿಂದ 2019 ರವರೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದರು.
ಭಾನುಪ್ರಕಾಶ್ ಅವರ ನಿಧನಕ್ಕೆ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಆಘಾತ ವ್ಯಕ್ತಪಡಿಸಿ ಕಂಬನಿ ಮಿಡಿದಿದ್ದಾರೆ.




