ಯುವತಿಯ ಮೋಹದ ಬಲೆಗೆ ಬಿದ್ದ ಬೆಂಗಳೂರು ಸಾಫ್ಟ್ವೇರ್ ಇಂಜಿನಿಯರ್

1 year ago

ಬೆಂಗಳೂರು: ಯುವತಿಯ ಮೋಹದ ಬಲೆಗೆ ಬಿದ್ದ ಬೆಂಗಳೂರು ನಗರದ ಸಾಫ್ಟ್ವೇರ್ ಇಂಜಿನಿಯರ್ ಬರೋಬ್ಬರಿ 8.1 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. 29 ವರ್ಷದ ಟೆಕ್ಕಿ ಆನ್‌ಲೈನ್‌ ಪೋರ್ಟಲ್‌ ಮೂಲಕ ಎಸ್ಕಾರ್ಟ್‌ ಸೇವೆಯನ್ನು ಬುಕ್‌ ಮಾಡಿದ್ದರು. ಅದರ ಮೂಲಕ ಪರಿಚಯವಾದ ಯುವತಿಯನ್ನು ನಂಬಿ ಮೋಸಹೋಗಿದ್ದಾರೆ.

ಎಲೆಕ್ಟ್ರಾನಿಕ್ಸ್ ಸಿಟಿಯ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ವಿಕ್ರಮ್ (ಹೆಸರು ಬದಲಿಸಲಾಗಿದೆ)ಗೆ ಅಮೃತಾ ಗಿಲ್‌ ಎಂಬ ಕಾಲ್‌ ಗರ್ಲ್‌ ಮೊಬೈಲ್‌ ನಂಬರ್‌ ಸಿಕ್ಕಿದೆ. ಮಸಾಜ್‌ ರಿಪಬ್ಲಿಕ್‌ ಡಾಟ್‌ ಕಾಂ ಎಂಬ ಸೈಟ್‌ನಿಂದ ಈ ನಂಬರ್‌ ಪಡೆಯಲಾಗಿತ್ತು. ಈತ ಆಕೆಗೆ ಕರೆ ಮಾಡಿದ್ದ. ಅವಳು ತನ್ನನ್ನು ರೂಪ ಎಂದು ಪರಿಚಯ ಮಾಡಿಕೊಂಡಿದ್ದಳು.

ಆನಂತರ ವ್ಯವಹಾರ ಕುದುರುಸಿದ ಆತ ಆಕೆಯನ್ನು ಮೂರು ಗಂಟೆಗಳ ಅವಧಿಗೆ 15 ಸಾವಿರ ರೂಪಾಯಿಗೆ ಬುಕ್‌ ಮಾಡಿಕೊಂಡಿದ್ದ. ಆಕೆಯೊಂದಿಗೆ ಸಮಯ ಕಳೆಯಲು ನವೆಂಬರ್ 29 ರಂದು ರೆಸಿಡೆನ್ಸಿ ರಸ್ತೆಯ ಹೋಟೆಲ್‌ನಲ್ಲಿ ರೂಂ ಕಾಯ್ದಿರಿಸಿದ್ದ. ರೂಪಾಗೆ ಗೌತಮ್‌ ಕ್ಯಾಬ್‌ ಚಾರ್ಜ್‌ ಸೇರಿ 16 ಸಾವಿರ ರೂ. ಪಾವತಿಸಿದ್ದ.

ಇದಾದ ನಂತರ ನವೆಂಬರ್ 29ರ  ಸಂಜೆ 6.15ರ ಹೊತ್ತಿಗೆ ರೂಪ ಹೋಟೆಲ್ ನಲ್ಲಿ ವಿಕ್ರಮ್‌ನನ್ನು ಭೇಟಿಯಾಗಿದ್ದಳು. ಈ ವೇಳೆ ಆಕೆ ತಾನು ಹೇಳಿಕೊಂಡಂತೆ 18 ವರ್ಷದವಳಲ್ಲ, 30 ವರ್ಷ ಆಸುಪಾಸಿನವಳು ಎಂಬುದು ವಿಕ್ರಮ್‌ ಗಮನಕ್ಕೆ ಬಂದಿದೆ. ವಯಸ್ಸಿನ ವಿಷಯದಲ್ಲಿ ಇಬ್ಬರ ನಡುವೆ ಗಲಾಟೆಯಾಗಿದೆ. 

ಆದರೆ ಇದಕ್ಕೆ ಉತ್ತರಿಸಿದ ಆಕೆ ನಾನು ಕಾಲ್ ಗರ್ಲ್ ಅಲ್ಲ. ಮಫ್ತಿಯಲ್ಲಿರುವ ಪೊಲೀಸ್‌. ನಿನ್ನನ್ನು ಬಂಧಿಸಲು  ಬಂದಿರುವುದು ಎಂದು ಹೇಳಿ ನಂಬಿಸಿದ್ದಾಳೆ. ಇದೇ ವೇಳೆ ಖಾಕಿ ಯೂನಿಫಾರ್ಮ್‌ ಹಾಕಿದ ವ್ಯಕ್ತಿಯ ಚಿತ್ರ ಇರುವ ನಂಬರ್‌ನಿಂದ ವಾಟ್ಸಾಪ್‌ ಕಾಲ್‌ ಬಂದಿದೆ. ನಾನು ಹಿತೇಶ್‌ ಕುಮಾರ್‌ ಐಪಿಎಸ್‌ ಅಧಿಕಾರಿ ಎಂದು ಪರಿಚಯಿಸಿಕೊಂಡ ಆತ, ತಾನು ಈ ಮಹಿಳೆಯ ಸಹೋದ್ಯೋಗಿ ಎಂದು ಹೇಳಿದ್ದಾನೆ. ರೂಪಾ ವಿಕ್ರಮ್‌ ಫೋನ್‌ ಕಿತ್ತುಕೊಂಡು ಲೌಡ್‌ ಸ್ಪೀಕರ್‌ ಆನ್ ಮಾಡಿದ್ದಾಳೆ. ಆಗ ಕುಮಾರ್‌ ನೀನು ಡಿಜಿಟಲ್ ಬಂಧನಕ್ಕೆ ಒಳಗಾಗಿದ್ದೀಯ ಎಂದು ಹೆದರಿಸಿ ಹುಟ್ಟಿಸಿದ್ದಾನೆ.

ನಿನ್ನನ್ನು ಬಂಧಿಸದೇ ಇರಲು 10 ಲಕ್ಷ ಕೊಡಬೇಕು ಎಂದು ಆರಂಭದಲ್ಲಿ ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ಈತ ನನ್ನ ಬಳಿ ಅಷ್ಟೊಂದು‌ ಹಣ ಇಲ್ಲ ಎಂದಿದ್ದಾನೆ. ಇದನ್ನು ಕೇಳಿದ ಅವರು ಇಲ್ಲವಾದರೆ ನಿನ್ನನ್ನು ಪೊಲೀಸ್ ಠಾಣೆಗೆ ಎಳೆದೊಯ್ಯುತ್ತೇವೆ ಎಂದು ಬೆದರಿಕೆ ಹಾಕಿ‌ದ್ದಾರೆ.

ಅಲ್ಲದೆ, ಈ ವೇಳೆ ಒತ್ತಾಯವಾಗಿ ಕ್ರೆಡಿಟ್‌ ಕಾರ್ಡ್‌ ಕಸಿದುಕೊಂಡ ರೂಪಾ, ಇನ್ನುಳಿದ ಎರಡು ಕ್ರೆಡಿಟ್‌ ಕಾರ್ಡ್‌ಗಳ ವಿವರವನ್ನು ಪಡೆದು ಬೇರೆ ಬೇರೆ ಖಾತೆಗಳಿಗೆ 8.1 ಲಕ್ಷ ರೂ. ವರ್ಗಾಯಿಸಿಕೊಂಡಿದ್ದಾಳೆ. ರಾತ್ರಿ 8.30ರವರೆಗೆ ಈ ವಸೂಲಿ ಮಾಡುವ ಕೆಲಸ ನಡೆದಿದೆ. ಕೊನೆಗೆ ರೋಸಿದ ವಿಕ್ರಮ್‌ ಪೊಲೀಸ್‌ ಠಾಣೆಗೆ ಹೋಗೋಣ, ಇದನ್ನೆಲ್ಲ ಅಲ್ಲೇ ಬಗೆಹರಿಸೋಣ ಎಂದು ಹೇಳಿದ್ದಾನೆ.

ಆಗ ವಂಚಕರು ತಮ್ಮ ಜಾಲ ಬಯಲಾಗುವ ಭಯದಲ್ಲಿ ಬೇರೆ ರೀತಿಯಲ್ಲಿ ಮಾತನಾಡಲು ತೊಡಗಿದ್ದಾರೆ. ಆಗ ಈತನಿಗೆ ಇದು ಮೋಸದ ಜಾಲ ಎಂಬ ಅರಿವಾಗಿದೆ. ತಕ್ಷಣ ಆತ ಹೋಟೆಲ್‌ ಸಿಬ್ಬಂದಿಯನ್ನು ಇವರು ತನ್ನಿಂದ ಹಣ ಕಿತ್ತುಕೊಳ್ಳುತ್ತಿದ್ದಾರೆ ಎಂದು ವಿವರಿಸಿ ಪೊಲೀಸ್‌ ಹೆಲ್ಪ್‌ಲೈನ್‌ 112ಗೆ ಕರೆ ಮಾಡಲು ಹೇಳಿದ್ದಾನೆ. ಅದರಂತೆ ಹೋಟೆಲ್ ಸಿಬ್ಬಂದಿ ಕರೆ ಮಾಡುತ್ತಿದ್ದಂತೆ  ಆಕೆ ಅಲ್ಲಿಂದ ಓಡಿ ಹೋಗಿದ್ದಾಳೆ.

ತಕ್ಷಣ ವಿಕ್ರಮ್ ಆಕೆಯನ್ನು ಹಿಂಬಾಲಿಸಿ ಹಿಡಿದುಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ರಸ್ತೆಯಲ್ಲಿ ತನ್ನ  ಬಟ್ಟೆಯನ್ನು ತಾನೇ ಹರಿದುಕೊಂಡು, ವಿಕ್ರಮ್‌ ನನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡ ಎಂದು ಅಲ್ಲಿದ್ದವರ ಬಳಿ ಸಹಾಯ ಯಾಚಿಸಿದ್ದಾಳೆ. ವಿಕ್ರಮ್‌ ಕೈಯನ್ನು ಕಚ್ಚಿ ಓಡಿ ಹೋಗಲು ಯತ್ನಿಸಿದ್ದಾಳೆ.

ಆದರೆ ಈ ವೇಳೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಆಕೆಯನ್ನು ಬಂಧಿಸಿದ್ದಾರೆ. ಆಗ ಪ್ರಜ್ಞೆ ತಪ್ಪಿದಂತೆ ನಾಟಕ ಮಾಡಿದ್ದಾಳೆ. ಇದಕ್ಕೆ ಬೆಚ್ಚದ ಪೊಲೀಸರು ಆಕೆಯನ್ನು ಪೋಲಿಸ್ ವಾಹನದಲ್ಲಿ ಕೂರಿಸಿಕೊಂಡು ಠಾಣೆಗೆ ಕರೆದೊಯ್ದಿದ್ದಾರೆ. ನಂತರ ವಿಕ್ರಮ್‌ಗೆ 1930 ಸೈಬರ್‌ ಕ್ರೈಂ ಪೊಲೀಸ್‌ಗೆ ಕರೆ ಮಾಡಲು ಸಲಹೆ ಮಾಡಿದ ಪೊಲೀಸರು ಹಣ ರವಾನಿಸಿದ ಎಲ್ಲಾ ಖಾತೆಗಳನ್ನು ಸ್ಥಗಿತಗೊಳಿಸಲು ಸಹಾಯ ಮಾಡಿದ್ದಾರೆ.

ರೂಪಾ ಬಳಿಯಲ್ಲಿದ್ದ ಆಧಾರ್‌ ಕಾರ್ಡ್‌ ಪರಿಶೀಲಿಸಿದಾಗ ಆಕೆಯ ಹೆಸರು ಪೂಜಾ, 31 ವರ್ಷ ಎಂದು ಗೊತ್ತಾಗಿದೆ. ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.

Leave a Reply