ಯುಪಿಎಸ್ ಸಿ ಪರೀಕ್ಷೆಗಳು ಅಕ್ಟೋಬರ್ 10ರಂದು ನಡೆಯುತ್ತಿದ್ದು ಈ ಬಾರಿಯೂ ಕನ್ನಡಿಗರಿಗೆ ಕನ್ನಡದಲ್ಲಿ ಪರೀಕ್ಷೆಗಳನ್ನು ಬರೆಯುವ ಅವಕಾಶ ನೀಡದೆ ಕನ್ನಡಿಗರನ್ನು ಎರಡನೇ ದರ್ಜೆ ಪ್ರಜೆಗಳಂತೆ ನೋಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಹಕ್ಕೊತ್ತಾಯದ ಸರಣಿ ಅಭಿಯಾನ ಆರಂಭಿಸಲಿದೆ.
ಭಾರತ ಸರಕಾರದ ಎಲ್ಲಾ ಹಂತದ ಉದ್ಯೋಗ ಪರೀಕ್ಷೆಗಳೂ ಕನ್ನಡದಲ್ಲಿ ನಡೆಯಬೇಕು. ಕರ್ನಾಟಕದ ಉದ್ಯೋಗಗಳು ಕರ್ನಾಟಕ ಯುವಕರಿಗೇ ಸಿಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ದಶಕಗಳಿಂದ ಹೋರಾಡುತ್ತ ಬಂದಿದೆ. ಕೆಲವು ಹಂತಗಳಲ್ಲಿ ಚಳವಳಿ ಯಶಸ್ವಿಯಾಗಿದ್ದರೂ ಇನ್ನಷ್ಟು ವಿಷಯಗಳಲ್ಲಿ ಕನ್ನಡಿಗರ ಹಕ್ಕುಗಳಿಗಾಗಿ ಚಳವಳಿ ಮಾಡಬೇಕಿದೆ.
ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೇ ಸಿಗಬೇಕು. ಇದು ಸಾಧ್ಯವಾಗಬೇಕೆಂದರೆ ಐಎಎಸ್, ಐಪಿಎಸ್ ಸೇರಿದಂತೆ ಎಲ್ಲ ಪರೀಕ್ಷೆಗಳು ಕನ್ನಡದಲ್ಲೂ ನಡೆಯಬೇಕು. ಆದರೆ ಎಲ್ಲ ಹಂತಗಳಲ್ಲೂ ಕನ್ನಡದಲ್ಲಿ ಪರೀಕ್ಷೆಗಳು ಸಿಗುತ್ತಿಲ್ಲ. ಆಯಾ ರಾಜ್ಯದ ಹುದ್ದೆಗಳು ಆಯಾ ರಾಜ್ಯದ ಜನರಿಗೆ ಸಿಗಲು ಬೇಕಾದ ನಿಯಮಗಳೂ ಇಲ್ಲವಾಗುತ್ತಿವೆ.
ಭಾರತ ಸರಕಾರ A ಮತ‌್ತು B ಗುಂಪಿನ ಹುದ್ದೆಗಳಿಗೆ UPSC ಮೂಲಕ ಪರೀಕ್ಷೆ ನಡೆಸುತ್ತದೆ. C ಮತ್ತು D ಗುಂಪಿನ ಹುದ್ದೆಗಳಿಗೆ SSC ಮೂಲಕ ಪರೀಕ್ಷೆ ನಡೆಸುತ್ತದೆ, ಇದಲ್ಲದೇ ಸೇನೆ, ಬ್ಯಾಂಕಿಂಗ್, ರೈಲ್ವೇ ಉದ್ಯೋಗಗಳಿಗೆ ಪ್ರತ್ಯೇಕವಾದ ಉದ್ಯೋಗ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇವುಗಳಲ್ಲಿ UPSC ಯ ಮುಖ್ಯ ಪರೀಕ್ಷೆ(Mains) , ರೈಲ್ವೇ ಉದ್ಯೋಗದ ಕೆಲವು ಪರೀಕ್ಷೆಗಳು ಮತ್ತು ಬ್ಯಾಂಕಿನ ಕ್ಲರ್ಕ್ ಹುದ್ದೆಗೆ ಪ್ರಥಮ ಮತ್ತು ಮುಖ್ಯ ಪರೀಕ್ಷೆಗಳು ಮಾತ್ರ ಕನ್ನಡದಲ್ಲಿ ಕೊಡಲಾಗುತ್ತಿದೆ.
ಇನ್ನುಳಿದಂತೆ ಎಲ್ಲ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಲಾಗುತ್ತಿಲ್ಲ. ಜೊತೆಗೆ ಸ್ಥಳೀಯರಿಗೆ ಉದ್ಯೋಗ ಸಿಗಬೇಕು ಎಂಬ ನಿಯಮಗಳು ನಿಧಾನವಾಗಿ ಸಡಿಲಗೊಳಿಸಲಾಗುತ್ತಿದೆ. ಇದು ನೇರವಾಗಿ ಕನ್ನಡಿಗರ ಬದುಕುವ ಹಕ್ಕಿನ ದಮನವಾಗಿರುತ್ತದೆ. ಭಾರತ ಸಂವಿಧಾನದ ಸಮಾನತೆಯ ಆಶಯಗಳಿಗೆ ಧಕ್ಕೆ ಬಂದಂತಾಗಿದೆ. ಇದನ್ನು ನಾವು ಇನ್ನೆಷ್ಟು ಕಾಲ ಸಹಿಸುವುದು?
ಈ ಹಿನ್ನೆಲೆಯಲ್ಲಿ ಭಾರತ ಸರಕಾರದಿಂದ ಕರ್ನಾಟಕದ ಜನರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಸಾಮಾನ್ಯ ಜನರಲ್ಲಿ ಮತ್ತು ಜನಪ್ರತಿನಿಧಿಗಳಲ್ಲಿ ಜಾಗೃತಿ ಮೂಡಿಸುವ ಕಾರಣಕ್ಕಾಗಿ ಕರವೇ ಸರಣಿ ಅಭಿಯಾನಗಳನ್ನು ಹಮ್ಮಿಕೊಳ್ಳಲಿದೆ. ಈ ಮೂಲಕ ಕರ್ನಾಟಕದ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರುವ ಕಾರ್ಯ ಮಾಡಲಾಗುವುದು.
ಈ ಅಭಿಯಾನದ ಭಾಗವಾಗಿ ಇದೇ ಭಾನುವಾರ, ಅಕ್ಟೋಬರ್ 10ರಂದು ಬೆಳಿಗ್ಗೆ 10.10 ಗಂಟೆಯಿಂದ #ಕನ್ನಡದಲ್ಲಿUPSC #UPSCInKannada ಹ್ಯಾಶ್ ಟ್ಯಾಗ್ ನಲ್ಲಿ ಟ್ವಿಟರ್ ಅಭಿಯಾನ ಹಮ್ಮಿಕೊಂಡಿದೆ. ಇದರ ಜೊತೆಗೆ ಭಾರತ ಸರಕಾರದ ಎಲ್ಲಾ ಹಂತದ ಪರೀಕ‌್ಷೆಗಳೂ ಕನ್ನಡದಲ್ಲಿ ಸಿಗಬೇಕೆಂದು ಒತ್ತಾಯಿಸಿ ವಿಚಾರಸಂಕಿರಣ, ಚಿತ್ರಚಳುವಳಿ, ಪತ್ರ ಚಳವಳಿಗಳನ್ನೂ ಹಮ್ಮಿಕೊಳ್ಳಲಿದ್ದೇವೆ.
ಕರ್ನಾಟಕದಲ್ಲಿ ಉದ್ಯೋಗ ಪಡೆಯುವುದು ಕನ್ನಡಿಗರ ಮೂಲಭೂತ ಹಕ್ಕು. ಅದನ್ನು ಕಿತ್ತುಕೊಳ್ಳುವುದು ಅನೈತಿಕ ಮಾತ್ರವಲ್ಲ ಅಸಾಂವಿಧಾನಿಕ. ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯಗಳನ್ನು ಖಂಡಿಸುವವರು ಈ ಚಳವಳಿಯಲ್ಲಿ ಪಾಲ್ಗೊಳ್ಳಲು ಕೋರುತ್ತೇನೆ. ನಾಡಪರವಾದ ಈ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಲು ಮನವಿ ಮಾಡುತ್ತೇನೆ.
– ಟಿ.ಎ.ನಾರಾಯಣಗೌಡ, ರಾಜ್ಯಾಧ್ಯಕ್ಷ, ಕರ್ನಾಟಕ ರಕ್ಷಣಾ




