ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್ ಪಡೆದ ರಾಜ್ಯ ಸರ್ಕಾರದ ಕ್ರಮವನ್ನು ಹೈಕೋರ್ಟ್ ನಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟ್‍ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.
ಪ್ರಕರಣ ಕುರಿತು ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಇದರ ಬೆನ್ನಲ್ಲೇ ಯತ್ನಾಳ್ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.
ತಮ್ಮ ಅರ್ಜಿಯನ್ನು ಸೀಮಿತವಾಗಿ ವಿಚಾರಣೆ ನಡೆಸಬೇಕೆಂದು ಮನವಿ ಮಾಡಿರುವ ಯತ್ನಾಳ್, ಈಗಾಗಲೇ ಪ್ರಕರಣ ಅಂತಿಮ ಹಂತದಲ್ಲಿದೆ. ಸ್ವತಃ ಸಿಬಿಐ ತನಿಖಾ ತಂಡ 80ರಿಂದ 90ರಷ್ಟು ವಿಚಾರಣೆ ಮುಗಿದಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ಕೊಟ್ಟಿದೆ. ಆದರೆ, ಸಚಿವ ಸಂಪುಟ ವಿಚಾರಣೆ ಮುಕ್ತಾಯ ಹಂತದಲ್ಲಿರುವಾಗ ಪೂರ್ವಾನುಮತಿಯನ್ನು ವಾಪಸ್ ಪಡೆದಿರುವುದು ವಿಚಾರಣೆಯನ್ನು ನಿಷ್ಪಲಗೊಳಿಸುವ ಯತ್ನವಾಗಿದೆ. ಇದು ಕಾನೂನು ಬಾಹಿರವಾಗಿದ್ದು, ತಮ್ಮ ಮೇಲ್ಮನವಿ ಅರ್ಜಿಯನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಬೇಕೆಂದು ಮನವಿ ಸಲ್ಲಿಸಿದ್ದಾರೆ.
ರಾಜ್ಯ ಸಚಿವ ಸಂಪುಟದ ತೀರ್ಮಾನವನ್ನು ನೋಡಿದರೆ ಪ್ರಕರಣವನ್ನು ಮೊಟಕುಗೊಳಿಸುವ ದುರುದ್ದೇಶ ಹೊಂದಿದೆ. ಒಂದು ಬಾರಿ ತನಿಖಾ ಸಂಸ್ಥೆಗೆ ರಾಜ್ಯ ಸರ್ಕಾರ ವಹಿಸಿದ ಮೇಲೆ ಅದನ್ನು ಹಿಂಪಡೆಯುವ ಅಧಿಕಾರ ಯಾವುದೇ ಸರ್ಕಾರಕ್ಕೆ ಇರುವುದಿಲ್ಲ. ಸರ್ಕಾರದ ನಡೆ ಪೂರ್ವಾಗ್ರಹ ಪೀಡಿತವಾಗಿದೆ ಎಂದು ವಾದಿಸಿದ್ದಾರೆ.
ಈ ಕುರಿತು ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಸರ್ಕಾರದ ತೀರ್ಮಾನವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲು ಎಲ್ಲರಿಗೂ ಹಕ್ಕಿದೆ. ಆದರೆ ಅಂತಿಮ ತೀರ್ಮಾನ ನ್ಯಾಯಾಲಯದ್ದೇ ಆಗಿರುತ್ತದೆ ಎಂದರು.
ಬಿಜೆಪಿ ನೇತೃತ್ವದ ಆಡಳಿತದ ಅವಧಿಯಲ್ಲಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ತನಿಖೆಗೆ ನೀಡಿರುವ ಅನುಮತಿ ಕಾನೂನು ಬಾಹಿರವಾಗಿದ್ದು, ಈ ಆದೇಶವನ್ನು ಇಂದಿನ ಸರ್ಕಾರ ವಾಪಸ್ಸು ಪಡೆದಿದೆ ಎಂದರು.



