ಪಬ್ ಲೇಡೀಸ್ ಟಾಯ್ಲೆಟ್ ನಲ್ಲಿ ಬ್ಯಾಂಕ್ ಮ್ಯಾನೇಜರ್ ಮೃತ ದೇಹ ಪತ್ತೆ

6 months ago

ಬೆಂಗಳೂರು: ರಾಜಧಾನಿ ಮಹಾನಗರ ಬೆಂಗಳೂರಿನ ಪಬ್ ಒಂದರ ಲೇಡೀಸ್ ಟಾಯ್ಲೆಟ್ ನಲ್ಲಿ ಬ್ಯಾಂಕ್ ಮ್ಯಾನೇಜರ್ ಒಬ್ಬರ ಮೃತ ದೇಹ ಪತ್ತೆಯಾಗಿದೆ.

ಸ್ನೇಹಿತರೊಂದಿಗೆ ಪಬ್ ಗೆ ಹೋಗಿದ್ದ ಖಾಸಗಿ ಬ್ಯಾಂಕ್‌ ಮಾನ್ಯೇಜರ್‌ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಮೇಘರಾಜ್‌ (31) ಶಂಕಾಸ್ಪದವಾಗಿ‌ ಮೃತಪಟ್ಟಿರುವ ದುರ್ಘಟನೆ ರಾಜರಾಜೇಶ್ವರಿನಗರದಲ್ಲಿ ನಡೆದಿದೆ.

ಜನ ಸ್ಮಾಲ್‌ ಬ್ಯಾಂಕ್‌ನಲ್ಲಿ ಮ್ಯಾನೇಜರ್‌ ಆಗಿದ್ದಮೇಘರಾಜ್‌ ಅವರು ಬೆಂಗಳೂರಿನ ಉಲ್ಲಾಳದಲ್ಲಿ ಪತ್ನಿ ಹಾಗೂ ಆರು ತಿಂಗಳ ಮಗುವಿನೊಂದಿಗೆ ವಾಸವಾಗಿದ್ದರು. ಆರ್‌ ಆರ್‌ ನಗರ ಮುಖ್ಯ ರಸ್ತೆಯಲ್ಲಿರುವ 1522 ಪಬ್ ಗೆ ಗುರುವಾರ ರಾತ್ರಿ ಮೂವರು ಸ್ನೇಹಿತರೊಂದಿಗೆ ಹೋಗಿ ಮದ್ಯ ಸೇವಿಸಿ ಊಟ ಮಾಡಿದ್ದಾರೆ.

ನಂತರ ಬಿಲ್‌ ಕೊಟ್ಟು ಸ್ನೇಹಿತರೊಂದಿಗೆ ರೆಸ್ಟೋರೆಂಟ್‌ನಿಂದ ರಾತ್ರಿ 11.30 ರ ಸುಮಾರಿನಲ್ಲಿ ಹೊರಗೆ ಹೋಗುವಾಗ ಒಂದು ನಿಮಿಷ ನಿಂತಿರಿ ಎಂದು ಹೇಳಿ ಮತ್ತೆ ಮೇಘರಾಜ್‌ ಒಳಗೆ ಹೋಗಿದ್ದಾರೆ. ಎಷ್ಟು ಹೊತ್ತಾದರೂ ಮೇಘರಾಜ್‌ ಬಾರದಿದ್ದಾಗ ಸ್ನೇಹಿತರು ಒಳಗೆ ಹೋಗಿ ನೋಡಿದರೂ ಕಾಣಿಸಿಲ್ಲ.

ನಂತರ ಬಾರ್‌ ಮ್ಯಾನೇಜರ್‌ನನ್ನು ವಿಚಾರಿಸಿ, ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ವಾಶ್‌ರೂಂಗೆ ಹೋಗಿರುವುದು ಕಂಡು ಬಂದಿದೆ. ಸ್ನೇಹಿತರು ವಾಶ್‌ ರೂಂ ಬಳಿ ಹೋಗಿ ಬಾಗಿಲು ತಟ್ಟಿ ಕೂಗಿದ್ದಾರೆ. ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಗಾಬರಿಯಾಗಿ ಮ್ಯಾನೇಜರ್‌ಗೆ ತಿಳಿಸಿದ್ದಾರೆ. ತಕ್ಷಣ ಬಾಗಿಲು ಹೊಡೆದು ನೋಡಿದಾಗ ಮೇಘರಾಜ್‌ ಅವರು ಮೃತಪಟ್ಟಿರುವುದು ಗೊತ್ತಾಗಿದೆ. ಈ ಬಗ್ಗೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಅಧಿಕಾರಿಗಳು ಆರ್‌ಆರ್‌ನಗರ ಠಾಣೆ ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಮೇಘರಾಜ್‌ ಅವರ ಸಹೋದರ ವಿನಯ್‌ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಮೇಘರಾಜ್‌ ಅವರ ಸಾವು ಹೇಗಾಗಿದೆ ಎಂಬುದು ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವಷ್ಟೇ ಗೊತ್ತಾಗಲಿದೆ ಎಂದು ಡಿಸಿಪಿ ಗಿರೀಶ್‌ ತಿಳಿಸಿದ್ದಾರೆ.

Leave a Reply