ಬೆಂಗಳೂರು: ಸಿಲಿಕಾನ್ ಸಿಟಿ ಮಹಾನಗರಿ ಬೆಂಗಳೂರಿನಲ್ಲಿ ನಕಲಿ ನೋಟುಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಅತಿ ಹೆಚ್ಚಿನ ಮುಖಬೆಲೆಯ ನಕಲಿ ನೋಟುಗಳ ಮುದ್ರಣ ಮತ್ತು ಚಲಾವಣೆ ಕಷ್ಟ ಎಂಬ ಹಿನ್ನೆಲೆಯಲ್ಲಿ ವಂಚಕರು ನೂರು ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ಮುದ್ರಣ ಮಾಡಿ ಎಗ್ಗಿಲ್ಲದಂತೆ ಚಲಾವಣೆ ಮಾಡುತ್ತಿದ್ದಾರೆ.
ಸಾಮಾನ್ಯವಾಗಿ ಜನಸಾಮಾನ್ಯರು ಮತ್ತು ವ್ಯಾಪಾರ ವಹಿವಾಟು ಮಾಡುವವರು ನೂರು ರೂಪಾಯಿ ನೋಟುಗಳ ಸತ್ಯಾಸತ್ಯತೆಯನ್ನು ಅಷ್ಟೊಂದು ವಿವರವಾಗಿ ಪರಿಶೀಲಿಸುವುದಿಲ್ಲ ಎಂಬ ಹಿನ್ನೆಲೆಯಲ್ಲಿ ಇವುಗಳನ್ನು ಮುದ್ರಣ ಮಾಡಿ ಚಲಾವಣೆ ಮಾಡುತ್ತಿದ್ದಾರೆ.
ಪೆಟ್ರೋಲ್ ಬಂಕ್, ಬಸ್ಸುಗಳು, ಹೋಟೆಲ್ ಮತ್ತು ದಿನಸಿ ಅಂಗಡಿಗಳಲ್ಲಿ 100 ರೂಪಾಯಿ ಮುಖಬೆಲೆಯ ನಕಲಿ ನೋಟುಗಳ ಚಲಾವಣೆ ತೀವ್ರ ಗತಿಯಿಂದ ನಡೆಯುತ್ತಿದ್ದು ಇತ್ತೀಚೆಗೆ ಬ್ಯಾಂಕುಗಳಿಗೂ ಕೂಡ ಈ ನೋಟುಗಳನ್ನು ಜಮಾ ಮಾಡಲಾಗಿದೆ.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಈ ನೋಟುಗಳು ಪತ್ತೆಯಾಗಿದ್ದು ಬ್ಯಾಂಕ್ ಸಿಬ್ಬಂದಿ ನೀಡಿರುವ ನೋಟುಗಳನ್ನು ಪಡೆದಿರುವ ಆರ್ ಬಿ ಐ ಈ ಸಂಬಂಧ ದೂರು ದಾಖಲಿಸಿದೆ.
ಕಳೆದೆರಡು ದಿನಗಳಲ್ಲಿ 100 ರೂ ಮುಖಬೆಲೆಯ 30 ನಕಲಿ ನೋಟುಗಳು ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದಿನಗಳಲ್ಲಿ 4 ಎಫ್ಐಆರ್ಗಳು ದಾಖಲಾಗಿವೆ.
ಉಡುಪಿ , ಮಣಿಪಾಲ , ಹುಬ್ಬಳ್ಳಿ ಹಾಗು ಮಲ್ಲೇಶ್ವರ ಬ್ರಾಂಚ್ನ ಬ್ಯಾಂಕ್ ಗಳಲ್ಲಿ ನಕಲಿ ನೋಟು ಪತ್ತೆಯಾಗಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ)ಗೆ ಭರ್ತಿ ಮಾಡುವ ಸಂದರ್ಭದಲ್ಲಿ ನಕಲಿ ನೋಟುಗಳು ಕಂಡು ಬಂದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ಆರ್ ಬಿಐ ಮ್ಯಾನೇಜರ್ ಆನಂದ್, ಬ್ಯಾಂಕ್ ಆಫ್ ಬರೋಡಾ, ಕೆನರಾ, ಯುಬಿಐ ಬ್ಯಾಂಕ್ ಮ್ಯಾನೇಜರ್ ಮೇಲೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಬ್ಯಾಂಕ್ ಮ್ಯಾನೇಜರ್ ಗಳನ್ನೇ ಆರೋಪಿಗಳನ್ನಾಗಿ ಮಾಡಿದ್ದಾರೆ.
ಆರ್ ಬಿ ಐ ಮ್ಯಾನೇಜರ್ ನೀಡಿರುವ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಹಲಸೂರು ಗೇಟ್ ಪೊಲೀಸರು ನಕಲಿ ನೋಟಿನ ಜಾಲವನ್ನು ಬೇಧಿಸಲು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.




