ವಿದೇಶಿ ಅಕ್ರಮ ನೆಲಸುಗರಿಗೆ ಸ್ವರ್ಗವಾಗಿದೆ ಬೆಂಗಳೂರು

3 years ago

ಬೆಂಗಳೂರು: ಸಿಲಿಕಾನ್ ಸಿಟಿ, ನಿವೃತ್ತರ ಸ್ವರ್ಗ ಎಂದೇ ಪರಿಗಣಿಸಲ್ಪಡುತ್ತಿರುವ ಮಹಾ ನಗರಿ ಬೆಂಗಳೂರು ಇತ್ತೀಚೆಗೆ ವಿದೇಶಿಯರ ಅಕ್ರಮ ವಾಸಕ್ಕೆ ಅವಾಸ ತಾಣವಾಗುತ್ತಿದೆಯಾ… ಹೌದು ಎನ್ನುತ್ತದೆ ಪೊಲೀಸ್ ಇಲಾಖೆಯ ಮಾಹಿತಿ.

ರಾಜಧಾನಿಯ ಹಲವೆಡೆ ಆಫ್ರಿಕಾ, ನೈಜೀರಿಯಾ, ಬಾಂಗ್ಲಾದೇಶ ಸೇರಿದಂತೆ ವಿವಿಧ ದೇಶಗಳ ಸುಮಾರು 600 ಮಂದಿ ಅಕ್ರಮವಾಗಿ ವಾಸ್ತವ್ಯ ಹೂಡಿರುವುದನ್ನು ನಗರದ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಇತ್ತೀಚೆಗೆ ಉತ್ತರಪ್ರದೇಶ ಮೂಲದ ಯುವಕನನ್ನು ಮದುವೆಯಾಗಿ ಅಕ್ರಮವಾಗಿ ನೆಲೆಸಿದ್ದ ಪಾಕ್‌ ಯುವತಿಯನ್ನು ಪತ್ತೆ ಹಚ್ಚಿ ಗಡಿಪಾರು ಮಾಡಲಾಗಿತ್ತು. ಆ ಯುವತಿ ಗಡಿಪಾರಾದ ಬೆನ್ನಲ್ಲೇ ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಯರ ಪತ್ತೆಗೆ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿತ್ತು.

ಪ್ರವಾಸ, ವ್ಯಾಪಾರ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕಾರಣದಿಂದ ಬೆಂಗಳೂರಿಗೆ ಬಂದ ವಿದೇಶಿಯರು ವೀಸಾ ಅವಧಿಯೊಳಗೆ ತಮ್ಮ ಕೆಲಸ ಮುಗಿಸಿಕೊಂಡು ತಮ್ಮ ದೇಶಕ್ಕೆ ತೆರಳಬೇಕು. ಆದರೆ ಅನೇಕ ಮಂದಿ ವೀಸಾ ಅವಧಿ ಮುಗಿದರೂ ತಮ್ಮ ದೇಶಕ್ಕೆ ತೆರಳದೆ ಇಲ್ಲಿಯೇ ಅಕ್ರಮವಾಗಿ ನೆಲೆಸಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

ಈ ರೀತಿಯಲ್ಲಿ ಒಟ್ಟು 600 ಮಂದಿ ನೆಲೆಸಿದ್ದು ಇವರ ಪೈಕಿ 34 ಮಂದಿಯನ್ನು ಅವರ ದೇಶಗಳಿಗೆ ಗಡಿಪಾರು ಮಾಡಲಾಗಿದೆ. 50 ಮಂದಿಯನ್ನು ನೆಲಮಂಗಲದ ಸೊಂಡೇಕೊಪ್ಪದ ಡಿಟೆನ್ಷನ್‌ ಸೆಂಟರ್‌ನಲ್ಲಿ ಇಡಲಾಗಿದ್ದು, ಅವರನ್ನು ಶೀಘ್ರವೇ ಗಡಿಪಾರು ಮಾಡುವ ಪ್ರಕ್ರಿಯೆ ನಡೆಯುತ್ತಿದೆ.
ನೈಜೀರಿಯಾ ಪ್ರಜೆಗಳು ಸೇರಿದಂತೆ ಆಫ್ರಿಕಾ ದೇಶದ ಕೆಲವರು ಇಲ್ಲಿ ಅಕ್ರಮವಾಗಿ ನೆಲೆಸಿದ್ದು, ಮಾದಕವಸ್ತು ಮಾರಾಟ, ವೇಶ್ಯಾವಾಟಿಕೆ, ಸುಲಿಗೆ ಸೇರಿದಂತೆ ಇನ್ನಿತರೆ ಅಪರಾಧ ಕೃತ್ಯಗಳಲ್ಲಿತೊಡಗಿಸಿಕೊಂಡಿದ್ದಾರೆ ಎಂದು ಪೊಲೀಸ್ ಇಲಾಖೆಯ ಅಂಕಿಅಂಶಗಳು ತಿಳಿಸಿವೆ.

ಅಕ್ರಮವಾಗಿ ನೆಲೆಸಿರುವ 400ಕ್ಕೂ ಅಧಿಕ ಮಂದಿ ವಿರುದ್ಧ ಇಂತಹ ಕ್ರಿಮಿನಲ್‌ ಪ್ರಕರಣಗಳಿವೆ. ಈ ಪೈಕಿ ಕೆಲ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ಮತ್ತೆ ಕೆಲವರು ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದಾರೆ.

ವಿದ್ಯಾಭ್ಯಾಸ, ಪ್ರವಾಸ, ವ್ಯಾಪಾರ ವೀಸಾ ಅಡಿ ನಗರಕ್ಕೆ ಬರುವ ವಿದೇಶಿಯರು ವೀಸಾ ಅವಧಿ ಮುಗಿದ ಬಳಿಕವೂ ಇಲ್ಲಿಯೇ ಠಿಕಾಣಿ ಹೂಡಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ವಿದೇಶಿಯರ ಮೇಲೆ ನಿಗಾ ವಹಿಸಿ ಮಾಹಿತಿ ಸಂಗ್ರಹಿಸಿದ್ದು, ಅವರ ಚಟುವಟಿಕೆಗಳ ಮೇಲೂ ಕಣ್ಗಾವಲು ಇರಿಸಲಾಗಿದೆ.

ಪೂರ್ವ ವಿಭಾಗದ ಹೆಣ್ಣೂರು, ಬಾಣಸವಾಡಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ನೈಜೀರಿಯಾ ಪ್ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈಶಾನ್ಯ ವಿಭಾಗದ ಕೊತ್ತನೂರು, ಸಂಪಿಗೆಹಳ್ಳಿ ಭಾಗದಲ್ಲೂಅಕ್ರಮ ವಿದೇಶಿಯರು ಇದ್ದಾರೆ. ಈಶಾನ್ಯ ವಿಭಾಗದ ಪೊಲೀಸರು ಕಳೆದ ವರ್ಷ ಅಕ್ರಮವಾಗಿ ನೆಲೆಸಿದ್ದ 40ಕ್ಕೂ ಹೆಚ್ಚು ವಿದೇಶಿಯರನ್ನು ಪತ್ತೆ ಹಚ್ಚಿದ್ದರು.

ಅಕ್ರಮ ವಿದೇಶಿಯರನ್ನು ಗಡಿಪಾರು ಮಾಡುವ ಪ್ರಕ್ರಿಯೆ ಅತ್ಯಂತ ಸುದೀರ್ಘವಾಗಿದೆ. ಅವರ ದೇಶದ ರಾಯಭಾರ ಕಚೇರಿ ಮೂಲಕ ಪತ್ರ ವ್ಯವಹಾರ ನಡೆಸಬೇಕು. ಅವರನ್ನು ತವರು ದೇಶಗಳು ವಾಪಸ್‌ ಕರೆಸಿಕೊಳ್ಳಲು ಸಿದ್ಧವಿರಬೇಕು. ಕ್ರಿಮಿನಲ್‌ ಪ್ರಕರಣಗಳು ಇತ್ಯರ್ಥಗೊಂಡಿರಬೇಕು. ಜತೆಗೆ, ಅವರನ್ನು ವಿಮಾನದಲ್ಲಿ ಕಳುಹಿಸಿ ಕೊಡುವ ವ್ಯವಸ್ಥೆಯಾಗಬೇಕು. ಪ್ರತಿ ಪ್ರಕ್ರಿಯೆಯೂ ಎರಡೂ ದೇಶಗಳ ರಾಜತಾಂತ್ರಿಕ ವ್ಯವಹಾರದಡಿ ನಡೆಯಬೇಕು. ಹೀಗಾಗಿ, ವಿದೇಶಿಯರ ಗಡಿಪಾರು ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಸೊಂಡೇಕೊಪ್ಪದ ಡಿಟೆನ್ಷನ್‌ ಸೆಂಟರ್‌ನಲ್ಲಿ 50 ಮಂದಿಯನ್ನು ಇಡಬಹುದು. ಹೀಗಾಗಿ, ಅಕ್ರಮ ವಾಸದ ವಿದೇಶಿ ಮಹಿಳೆಯರನ್ನು ತುಮಕೂರಿನಲ್ಲಿರಿಸಲು ಒಂದು ಕೇಂದ್ರ ಹಾಗೂ ಬೆಂಗಳೂರು ನಗರ ಭಾಗದಲ್ಲಿಮತ್ತೊಂದು ಕೇಂದ್ರ ತೆರೆಯಲು ಸರಕಾರ ಹಾಗೂ ವಿದೇಶಿಯರ ನೋಂದಣಿ ಪ್ರಾದೇಶಿಕ ಕಚೇರಿ ಅಧಿಕಾರಿಗಳ (ಎಫ್‌ಆರ್‌ಆರ್‌ಓ) ಜತೆ ಚರ್ಚೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Leave a Reply