ಪ್ರಶಸ್ತಿಗೆ ಗೌರವ ಸಿಗುವುದು ನಿಷ್ಟಾವಂತ ಸಾಧಕರ ಆಯ್ಕೆಯಾದ ಸಂದರ್ಭದಲ್ಲಿ ಮಾತ್ರ!

3 years ago

#award #honored #sincere #achievers #selected #nirmalakumari #kiramnagaraja #art

ನಿರ್ಮಲಾಕುಮಾರಿಗೆ “ಕಿ.ರಂ.ನಾಗರಾಜ” ಪ್ರಶಸ್ತಿ

ಪ್ರಶಸ್ತಿಗೆ ಗೌರವ ಸಿಗುವುದು ನಿಷ್ಟಾವಂತ ಸಾಧಕರ ಆಯ್ಕೆಯಾದ ಸಂದರ್ಭದಲ್ಲಿ ಮಾತ್ರ!
  
ಅತ್ಯಂತ ಖುಷಿ ನನ್ನನ್ನು ಈಗ ಅಕ್ಷರಶಃ ಆವರಿಸಿಕೊಂಡಿದೆ. ವರ್ಣಿಸಲು ಪದಗಳಿಲ್ಲ ಎನ್ನುವಷ್ಟು ಆನಂದ ನನಗೆ. ಪ್ರತಿಷ್ಠಿತ ಪ್ರಶಸ್ತಿಯೊಂದು ನಿಜವಾದ ಸಾಧಕಿಗೆ ಸಂದಿದೆ. ಪ್ರತಿಯೊಬ್ಬ ಚಿತ್ರಕಲಾವಿದರು ಖುಷಿ ಪಡಬೇಕಾದ ಸಂಗತಿ. ಪ್ರಶಸ್ತಿಗೆ ಭಾಜನರಾದ ಚಿತ್ರಕಲಾವಿದೆ, ನಿವೃತ್ತ ಕಲಾ ಪ್ರಾಧ್ಯಾಪಕಿ, ಆರ್ಟ್ ಬೇರು ಇಂಡಿಯಾದ ಉಪಾಧ್ಯಕ್ಷೆ ನಿರ್ಮಲಾಕುಮಾರಿ ಸಿ.ಎಸ್. ಅವರಿಗೆ ಹೃದಯಪೂರ್ವಕ ಅಭಿನಂದನೆಗಳು.

ಪ್ರಾಮಾಣಿಕ ಸೇವೆ ಸಲ್ಲಿಸಿ ನೂರಾರು ಚಿತ್ರಕಲಾವಿದರ ಹೃದಯದಲ್ಲಿ ಗುರುವಾಗಿ ನೆಲೆಸಿರುವ ನಿರ್ಮಲಾಕುಮಾರಿ ಅವರನ್ನು ಆಯ್ಕೆ ಮಾಡಿರುವ ಕಿರಂ ಬಳಗದ ಎಲ್ಲರಿಗೂ ಧನ್ಯವಾದಗಳು.

ಸ್ನೇಹಿತರೆ, ತುಮಕೂರು ಮೂಲದ ಬೆಂಗಳೂರು ನಿವಾಸಿ, ಹಿರಿಯ ಕಲಾವಿದೆ ನಿರ್ಮಲಾಕುಮಾರಿ ಅವರು ಪ್ರಸಕ್ತ ಸಾಲಿನ ಕಿ.ರಂ. ನಾಗರಾಜ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಸಿದ್ಧ ಸಾಹಿತಿ ಹೆಸರಲ್ಲಿ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿ ಇದಾಗಿದೆ. ಜನ ಸಂಸ್ಕೃತಿ ಪ್ರತಿಷ್ಠಾನ, ಬೆಂಗಳೂರು ಆರ್ಟ್ ಫೌಂಡೇಷನ್ ಮತ್ತು ಮಿಂಚುಳ್ಳಿ ಸಾಹಿತ್ಯ ಪತ್ರಿಕೆ ಸಹಯೋಗದಲ್ಲಿ ಆಗಸ್ಟ್ 7, ಸೋಮವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ “ಕಾಡುವ ಕಿರಂ ಅಹೋರಾತ್ರಿ” ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಅನೇಕ ವಿಶೇಷತೆಗಳಿಂದ ಕೂಡಿರುವ ಕಾರ್ಯಕ್ರಮ ಇದಾಗಿದೆ ಎನ್ನುವುದು ಮತ್ತೊಂದು ಖುಷಿಯ ಸಂಗತಿ.

ನಿರ್ಮಲಾಕುಮಾರಿ ಅವರು ಕರ್ನಾಟಕದ ಕಲಾವಿದೆಯರ ಸಾಲಿನಲ್ಲಿ ಮೇರು ಪಂಕ್ತಿಗೆ ಸಲ್ಲುವವರು. ತಮ್ಮದೆ ಶೈಲಿಯಲ್ಲಿ ಕಲಾಕೃತಿ ರಚಿಸಿ ಕಲಾಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಆದರ್ಶ ಕಲಾವಿದರು.

ನಿರ್ಮಲಾಕುಮಾರಿ ಅವರು ಕಲಾ ಪ್ರಾಧ್ಯಾಪಕಿಯಾಗಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಚಿತ್ರಕಲೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ನಿರ್ಮಲಾಕುಮಾರಿ ಅವರು ತಮ್ಮ ವೃತ್ತಿಯಾಗಿಸಿಕೊಂಡಿದ್ದು ಚಿತ್ರಕಲೆಯನ್ನೆ. ತುಮಕೂರಿನ ಸಿದ್ದಗಂಗಾ ಕಾಲೇಜಿನಲ್ಲಿ ಪ್ರೌಢ ಶಿಕ್ಷಣ ಮುಗಿಸಿ, ಬಿ.ಎ ಪದವಿ ಪಡೆದುಕೊಂಡಿದ್ದಾರೆ. ಆ ಬಳಿಕ ತುಮಕೂರಿನ ಪ್ರತಿಷ್ಠಿತ ಕಲಾಶಾಲೆ ರವೀಂದ್ರ ಕಲಾನಿಕೇತನದಲ್ಲಿ ಜಿ.ಡಿ. ಆರ್ಟ್ ಮತ್ತು ಆರ್ಟ್ ಮಾಸ್ಟರ್ ಮುಗಿಸಿದ್ದಾರೆ. ಅಲ್ಲದೆ, ಹಂಪಿ ವಿಶ್ವವಿದ್ಯಾಲಯದಿಂದ ಎಂ.ವಿ.ಎ. ಪದವಿ ಪಡೆದುಕೊಂಡು ಕೆಲ ಕಾಲ ತಾವು ಕಲಿತ ಕಲಾಶಾಲೆಯಲ್ಲಿಯೇ ಪ್ರಾಧ್ಯಾಪಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಆನಂತರದ ದಿನಗಳಲ್ಲಿ ಬೆಂಗಳೂರಿನ ಪ್ರತಿಷ್ಠಿತ ಕೆನ್ ಕಲಾಶಾಲೆಯಲ್ಲಿ ಪ್ರಾಧ್ಯಾಪಕಿಯಾಗಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ನೂರಾರು ಕಲಾವಿದರು ಇಂದಿಗೂ ಅವರ ಪಾಠದ ಕ್ರಮವನ್ನು ನೆನಪಿಸಿಕೊಳ್ಳುವುದರ ಮೂಲಕ ಅವರ ಕಲಾಸಕ್ತಿಯ ಮೆಲುಕು ಹಾಕುತ್ತಾರೆ.

ಅನೇಕ ಕಲಾಶಿಬಿರಗಳಲ್ಲಿ ಪಾಲ್ಗೊಂಡು ತಮ್ಮ ಕಲಾಕೃತಿಗಳ ಮೂಲಕ ಮೆಚ್ಚುಗೆ ಪಡೆದುಕೊಂಡಿರುವ ನಿರ್ಮಲಾಕುಮಾರಿ ಅವರಿಗೆ ಸೌತ್ ಝೋನ್ ಕ್ಯಾಮಲಿನ್ ಫೌಂಡೇಶನ್ ಪ್ರಶಸ್ತಿ, ಮೈಸೂರು ದಸರಾ ಪ್ರಶಸ್ತಿ ಲಭಿಸಿವೆ. ಇದೀಗ ಕಿರಂ ಬಳಗದ ಗೌರವಕ್ಕೂ ಪಾತ್ರವಾಗುತ್ತಿರುವುದು ನಾವೆಲ್ಲರೂ ಖುಷಿ ಪಡುವ ಮತ್ತೊಂದು ಸಂಗತಿ.

ಆರ್ಟ್ ಬೇರು ಸಂಸ್ಥಾಪಕ ಸದಸ್ಯರಾದ ನಿರ್ಮಲಾಕುಮಾರಿ ಅವರಿಗೆ ಅಭಿನಂದನೆಗಳು.

– ಗಣಪತಿ ಅಗ್ನಿಹೋತ್ರಿ

Leave a Reply