ಬೆಂಗಳೂರು: ಕನ್ನಡದ ಜನಪದರು ಆರ್ಥಿಕವಾಗಿ ಬಡತನವನ್ನು ಕಂಡಿರಬಹುದು, ಆದರೆ ಅವರ ಕಲಾ ಸಿರಿವಂತಿಕೆಯ ಮುಂದೆ ಯಾವುದೇ ಐಶ್ವರ್ಯಗಳು ನಿಲ್ಲಲು ಸಾಧ್ಯವೇ ಇಲ್ಲ. ಕನ್ನಡ ನಾಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಜನಪದರ ಕೊಡುಗೆ ಅಪಾರವಾದದ್ದು. ಎಂತಹ ಕಷ್ಟ ಕಾಲ ಬಂದರೂ, ಲಾಭದ ಆಸೆಗೆ ಮಣಿಯದೇ ತಲೆ ತಲೆಮಾರುಗಳಿಂದ ಕನ್ನಡವನ್ನು ಉಳಿಸಿಕೊಂಡು ಬಂದವರು ನಮ್ಮ ಜನಪದರು. ಅಂಥವರನ್ನು ಗುರುತಿಸಿ ಗೌರವಿಸುವ ಭಾಗ್ಯ ನಮ್ಮವರಿಗೆ ದಕ್ಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಂಡ ಶ್ರೀಮತಿ ಲಕ್ಷ್ಮೀದೇವಿ ಮತ್ತು ಎಸ್. ರಾಮಚಂದ್ರ ಬಾಯರ್ ದತ್ತಿ, ಶ್ರೀಮತಿ ಕಂಡ್ಲೂರು ಗಿರಿಜಮ್ಮ ಮತ್ತು ನರಸಿಂಹ ಜೋಗಿ ದತ್ತಿ ಹಾಗೂ ಶ್ರೀಮತಿ ನಿಂಗಮ್ಮ ಹುಚ್ಚೇಗೌಡ ಕೋಡಿಹೊಸಹಳ್ಳಿ ದತ್ತಿ ಪ್ರಶಸ್ತಿಗಳ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತು ಎಲೆಯ ಮರೆಯ ಪ್ರತಿಭೆಗಳನ್ನು ಗುರುತಿಸಿ, ಗೌರವಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಲೇ ಬಂದಿದೆ. ಈ ಮೂಲಕ ಅನೇಕ ಸಾಧಕರನ್ನು ಪ್ರಮಾಣಿಕವಾಗಿ ಹುಡುಕಿ ಗುರುತಿಸಿ ಅವರ ಸಾಧನೆಗೆ ಬೆಳಕು ತೋರಿಸುವ ಕಾರ್ಯ ಮಾಡುತ್ತ ಬಂದಿದ್ದೇವೆ. ಅದಕ್ಕಾಗಿಯೇ ಸಮಸ್ತ ಕನ್ನಡಿಗರು ಕಳೆದ ೧೦೮ ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್ತಿನ ವೇಳೆ ಅಪಾರವಾದ ಗೌರವ ಹಾಗೂ ವಿಶ್ವಾಸವನ್ನು ಇಟ್ಟುಕೊಂಡು ಬಂದಿದೆ. ಪರಿಣಾಮ ಪರಿಷತ್ತಿನಲ್ಲಿ ೨೦೦೦ಕ್ಕೂ ಹೆಚ್ಚು ದತ್ತಿ ಪ್ರಶಸ್ತಿಗಳನ್ನು ಕನ್ನಡಿಗರು ಅಭಿಮಾನದಿಂದ ಸ್ಥಾಪಿಸಿರುತ್ತಾರೆ ಎಂದರು.
ಕನ್ನಡಿಗರ ವಿಶ್ವಾಸಕ್ಕೆ ಹಾಗೂ ಅಭಿಮಾನಕ್ಕೆ ಧಕ್ಕೆ ಬಾರದ ರೀತಿಯಲ್ಲಿ ನಮ್ಮ ಕರ್ತವ್ಯವನ್ನು ಮಾಡುತ್ತಿದ್ದೇವೆ. ದತ್ತಿ ಪ್ರಶಸ್ತಿಗಳು ಕೆಲವೇ ಕೆಲವು ಸಮುದಾಯಕ್ಕೆ ಸೀಮಿತವಾಗದೇ, ಸಮಾಜದ ಎಲ್ಲ ಕಲಾವಿದರನ್ನೂ ಹಾಗೂ ಭೌಗೋಳಿಕವಾಗಿ ಎಲ್ಲೆಡೆಯ ಸಾಧಕರನ್ನು ಗಮನಿಸಿ ಪ್ರಶಸ್ತಿ ನೀಡಲಾಗುತ್ತದೆ. ಜನಪದ ಕಲೆ, ಕಲಾವಿದರ ರಕ್ಷಣೆಯೂ ಪರಿಷತ್ತಿನ ಕರ್ತವ್ಯ ಎನ್ನುವುದನ್ನು ಪರಿಷತ್ತು ಎಂದೂ ಮರೆಯುವುದಿಲ್ಲ. ಪ್ರಶಸ್ತಿ ನೀಡಲು ಯಾವುದೇ ಲಾಬಿ ಅಥವಾ ಪ್ರಭಾವ ನಡೆಯದು ಎಂಬುದನ್ನು ನಾನು ಹೆಮ್ಮೆಯಿಂದ ಹೇಳಬಯಸುತ್ತೇನೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ತನ್ನದೇ ಆದ ಮಹತ್ವವನ್ನು ಹೊಂದಿದೆ. ಸರಕಾರಿ ಪ್ರಶಸ್ತಿಗಳಂತೆ ಗೊಂದಲದ ಗೂಡು, ಗೌಜು ಗಲಾಟೆಗಳು, ಆಯ್ಕೆಯಲ್ಲಿ ಯಾವುದೇ ರಾಜಕೀಯ ಇಲ್ಲಿ ಇರುವುದಿಲ್ಲ. ಹಾಗಾಗಿ ನಿಜವಾದ ಸಾಧಕರಿಗೆ ಯೋಗ್ಯ ಪ್ರಶಸ್ತಿಗಳು ಲಭ್ಯವಾಗತ್ತವೆ ಎಂದರು.
ನಮ್ಮ ದೇಶದಲ್ಲಿ ಅತಿಹೆಚ್ಚು ಜನಪದ ಕಲಾ ಪ್ರಕಾರಗಳು ಇರುವುದು ನಮ್ಮ ನಾಡಿನಲ್ಲಿ ಬರೋಬರಿ ೧೮೪ ಅಧಿಕೃತ ಕಲಾ ಪ್ರಾಕಾರಗಳನ್ನು ದಾಖಲಿಸಲಾಗಿದೆ. ೨೧ ಜನಪದ ಮಹಾಕಾವ್ಯಗಳು ಪ್ರಕಟಗೊಂಡಿವೆ. ಆದರೂ ಕನ್ನಡ ನಾಡಿನಲ್ಲಿ ಬಹುತೇಕ ಜನಪದ ಕಲೆಗಳು ನಾಪತ್ತೆಯಾಗುವ ಹಂತಕ್ಕೆ ಬಂದಿವೆ. ಮೂಡಲಪಾಯ ಶೇ.೯೯ ರಷ್ಟು ನಾಪತ್ತೆಯಾಗಿದೆ ಎಂದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಚಲನಚಿತ್ರ ನಿರ್ಮಾಪಕಿ ಲಕ್ಷ್ಮೀ ವಜ್ರಮುನಿ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕನ್ನಡ ಉಳಿಸಿ ಬೆಳೆಸುವ ಕೆಲಸವನ್ನು ಕಟ್ಟುನಿಟ್ಟಾಗಿ ಮಾಡಲಾಗುತ್ತಿದೆ. ಆದರೆ ನಮ್ಮ ಜನರು ಕನ್ನಡದ ಮೇಲಿನ ಅಭಿಮಾನವನ್ನು ಕಡಿಮೆ ಮಾಡಿಕೊಳ್ಳದೆ ಕನ್ನಡದ ಕಾರ್ಯಕ್ರಮಗಳಿಗೆ, ನಾಟಕ, ಯಕ್ಷಗಾನ, ಚಲನಚಿತ್ರಗಳನ್ನು ಹೆಚ್ಚು ಆಸಕ್ತಿಯಿಂದ ನೋಡುವ ಕಾರ್ಯಗಳು ನಡೆಯಬೇಕಿದೆ. ನಮ್ಮ ಸಂಸ್ಕೃತಿ ಉಳಿದಾಗ ನಮ್ಮ ಕನ್ನಡ ನವಿರಾಗಿ ನಳನಳಿಸುವುದು ಎಂದರು.
ತುಮಕೂರಿನ ಸಿ.ವಿ.ಮಹಾದೇವಯ್ಯ ಹಾಗೂ ಉಡುಪಿಯ ಟಿ.ಎನ್. ರಾಘವೇಂದ್ರ ರಾವ್ ಅವರಿಗೆ ಕ್ರಮವಾಗಿ ೨೦೨೧ ಹಾಗೂ ೨೦೨೨ನೆಯ ಸಾಲಿನ ಶ್ರೀಮತಿ ಲಕ್ಷ್ಮೀದೇವಿ ಮತ್ತು ಎಸ್. ರಾಮಚಂದ್ರ ಬಾಯರ್ ದತ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕಾಸರಗೋಡಿನ ಕಾಸರಗೋಡು ಚಿನ್ನ, ವಿಜಯಪುರದ ಭಾರತಿ ಬಿಜಾಪುರ, ಬೆಂಗಳೂರಿನ ರಂಗಶ್ರೀ ರಂಗಸ್ವಾಮಿ ಅವರಿಗೆ ಕ್ರಮವಾಗಿ ೨೦೨೧, ೨೦೨೨ ಹಾಗೂ ೨೦೨೩ನೆಯ ಸಾಲಿನ ಶ್ರೀಮತಿ ಕಂಡ್ಲೂರು ಗಿರಿಜಮ್ಮ ಮತ್ತು ನರಸಿಂಹ ಜೋಗಿ ದತ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಬಾಗಲಕೋಟೆ ಜಿಲ್ಲೆಯ ದೊಡ್ಡನಾಗಮ್ಮ, ಚಾಮರಾಜನಗರ ಜಿಲ್ಲೆಯ ಚಿನ್ನಮ್ಮ, ಹಾವೇರಿ ಜಿಲ್ಲೆಯ ಸಾವಕ್ಕ ಯಲ್ಲಪ್ಪ ಓಲೆಕಾರ ಹಾಗೂ ಬಾಗಲಕೊಟೆ ಜಿಲ್ಲೆಯ ಬೋರವ್ವ ಬಾಗನ್ನವರ ಇವರುಗಳಿಗೆ ಕ್ರಮವಾಗಿ ೨೦೧೯, ೨೦೨೦, ೨೦೨೧ ಮತ್ತು ೨೦೨೨ ನೆಯ ಸಾಲಿನ ಶ್ರೀಮತಿ ನಿಂಗಮ್ಮ ಹುಚ್ಚೇಗೌಡ ಕೋಡಿಹೊಸಹಳ್ಳಿ ದತ್ತಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ಕಾಸರಗೋಡು ಚಿನ್ನ, ಕಾಸರಗೋಡು ಕರ್ನಾಟಕದ ಅವಿಭಾಜ್ಯ ಅಂಗ. ಇತ್ತೀಚೆಗೆ ಕಾಸರಗೋಡಿನಲ್ಲಿ ಕನ್ನಡ ಶಾಲೆಗಳು ಕಮ್ಮಿಯಾಗುತ್ತಿವೆ. ಕನ್ನಡಿಗರು ಕಾಣೆಯಾಗುತ್ತಿದ್ದಾರೆ. ಅಲ್ಲಿರುವ ಕನ್ನಡಿಗರಿಗೆ ಭಾಷಾ ಅಭದ್ರತೆ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗಡಿನಾಡು ಕಾಸರಗೋಡಿನ ವ್ಯಕ್ತಿಯನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಿದ್ದು ಅಲ್ಲಿಯ ಜನರಿಗೆ ಪರಿಷತ್ತು ನಮ್ಮ ಜೊತೆ ಇದೆ ಎನ್ನುವ ವಿಶ್ವಾಸ ಮೂಡಿಸಲಿದೆ. ಅದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತು ಕಾಸರಗೋಡಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಕನ್ನಡ ಕಟ್ಟುವ ಕೆಲಸಕ್ಕೆ ನಮ್ಮ ಜನರಿಗೆ ಪ್ರೋತ್ಸಾಹ ನೀಡಬೇಕು ಎಂದರು.
ದತ್ತಿ ದಾನಿಗಳಾದ ಗಣೇಶ್ ಫುಡ್ ಪ್ರಾಡಕ್ಟ್ಸ್ ಪ್ರೈ.ಲಿ ನ ಶ್ರೀ ನಾಗರಾಜ ರಾವ್, ಶ್ರೀನಿವಾಸ ಜೋಗಿ ಬೆಂಗಳೂರು, ರಾಮಣ್ಣ ಎಚ್. ಕೋಡಿಹೊಸಹಳ್ಳಿ ಬೆಂಗಳೂರು ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು ಸ್ವಾಗತಿಸಿದರು. ನೇ.ಭ.ರಾಮಲಿಂಗ ಶೆಟ್ಟಿ ವಂದಿಸಿದರು. ಗೌರವ ಕೋಶಾಧ್ಯಕ್ಷ ಡಾ. ಬಿ.ಎಮ್. ಪಟೇಲ್ ಪಾಂಡು ಕಾರ್ಯಕ್ರಮ ನಿರೂಪಿಸಿದರು.




