ಜನ-ಜಾನುವಾರ ಪ್ರಾಣ ಹಾನಿ ತಪ್ಪಿಸುವುದು ಮೊದಲ ಆದ್ಯತೆಯಾಗಲಿ: ಕೃಷ್ಣ ಬೈರೇಗೌಡ

2 years ago

ಕಲಬುರಗಿ: ಕಲಬುರಗಿ, ಪ್ರಸಕ್ತ ವರ್ಷ ಹೆಚ್ಚಿನ ಮಳೆ‌ ನಿರೀಕ್ಷೆ ಹಿನ್ನೆಲೆಯಲ್ಲಿ ಪ್ರವಾಹದಿಂದ ಆಗಬಹುದಾದ ಜನ-ಜಾನುವಾರಗಳ ಹಾನಿ ತಪ್ಪಿಸುವುದು ನಮ್ಮೆಲ್ಲರ‌ಮೊದಲ ಆದ್ಯತೆಯಾಗಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚು ಮುತುವರ್ಜಿ ವಹಿಸಿ ಕೆಲಸ ಮಾಡಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಕಲಬುರಗಿ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಕಲಬುರಗಿ ವಿಭಾಗದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರವಾಹದಿಂದ ಹಾನಿಯಿಂದ ನಂತರ ಪರಿಹಾರ ನೀಡುವುದು ನಮ್ಮ ಕರ್ತವ್ಯ. ಆದರೆ ಅಷ್ಟೆ ನಮ್ಮ ಕೆಲಸ‌ದ ಸೀಮಿತವಲ್ಲ. ಬದಲಾಗಿ ಪ್ರವಾಹ ಮುನ್ನ ಜನರ ರಕ್ಷಣೆ ಮಾಡಿ ಪ್ರಾಣಿ, ಮಾನವ ಹಾನಿಯಾಗದಂತೆ ತಡೆಯುವುದು ಸರ್ಕಾರದ ಉದ್ದೇಶ. ಇದನ್ನರಿತು ಅಧಿಕಾರಿಗಳು ಕೆಲಸ‌ ಮಾಡಬೇಕು ಎಂದರು.

ಪ್ರವಾಹ ಬಂದ‌ ನಂತರ ತಯ್ಯಾರಿ ಮಾಡುವುದು ಬೇಡ. ಮಳೆ‌ ಮುನ್ಸೂಚನೆ ಮಾಹಿತಿ ನೀಡುವುದು ಬಹಳಷ್ಟು ಸುಧಾರಣೆಯಾಗಿದೆ. ಇದರ ಆಧಾರದ ಮೇಲೆ ಪ್ರವಾಹ ಭೀತಿ ಇರುವ ನದಿ, ಜಲಾಶಯ ಪಕ್ಕದಲ್ಲಿನ ಜನ ಮತ್ತು ಜಾನುವಾರು ಮುಂಚಿತವಾಗಿಯೇ ರಕ್ಷಣೆಗೆ ಮುಂದಾಗಬೇಕು. ಕಂದಾಯ, ಆರ್.ಡಿ.ಪಿ.ಆರ್, ಪೊಲೀಸ್, ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳದಲ್ಲಿದ್ದು ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಬೇಕು. ಇದಕ್ಕಾಗಿ ಪ್ರತಿ ಗ್ರಾಮ ಪಂಚಾಯತಿಗೆ ತಾಲೂಕು ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಬೇಕು. ಕಾಳಜಿ ಕೇಂದ್ರದಲ್ಲಿ ಜನರಿಗೆ ಸೂಕ್ತ ಉಪಚಾರ ಮಾಡಬೇಕು ಎಂದರು.

ತಾಲೂಕಿನ ತಹಶೀಲ್ದಾರರು ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಮುಂದಾಳತ್ವ ವಹಿಸಬೇಕು. ಪೊಲೀಸ್, ಅಗ್ನಿಶಾಮಕ, ಅರ್.ಡಿ.ಪಿ.ಆರ್. ಹೀಗೆ ಎಲ್ಲ ಅಧಿಕಾರಿಗಳ ಸಹಾಯ ಪಡೆದು ಯುದ್ದೋಪಾದಿಯಲ್ಲಿ ಕೆಲಸ‌ ಮಾಡಬೇಕೆಂದು ತಹಶೀಲ್ದಾರರಿಗೆ ಸಚಿವರು ನಿರ್ದೇಶನ ನೀಡಿದರು.

ಭೀಮಾ ಭೀತಿ ಕಲಬುರಗಿ, ವಿಜಯಪುರ ಜಿಲ್ಲೆಗೆ ಹೆಚ್ಚು. ಮಹಾರಾಷ್ಟ್ರದ ಸರ್ಕಾರದೊಂದಿಗೆ ಕಲಬುರಗಿ ಜಿಲ್ಲಾಡಳಿತ ಸತತ ಸಂಪರ್ಕದಲ್ಲಿರಬೇಕು. ವಿಭಾಗದ ಎಲ್ಲಾ ಜಿಲ್ಲೆಗಳಲ್ಲಿ ಅಧಿಕಾರಿಗಳನ್ನು ಪ್ರವಾಹ ಭೀತಿ ಗ್ರಾಮಗಳಿಗೆ ಈಗಲೆ ಭೇಟಿ ನೀಡಿ ಪ್ರವಾಹ ಬಂದಲ್ಲಿ ಆಗಬಹುದಾದ ಸಮಸ್ಯೆಗಳ ಬಗ್ಗೆ ಅಂದಾಜಿಸಿ ಅಗತ್ಯ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ವಿಭಾಗದ ಡಿ.ಸಿ. ಗಳಿಗೆ ಸೂಚಿಸಿದರು.

ಇನ್ನು ಪ್ರಕೃತಿ ವಿಕೋಪ ಹಿನ್ನೆಲೆಯಲ್ಲಿ ಕೈಗೊಳ್ಳುವ ತಾತ್ಕಾಲಿಕ ಪರಿಹಾರ ರೂಪದ ರಸ್ತೆ, ಅಂಗನವಾಡಿ, ಶಾಲೆ‌ ಕಟ್ಟಡ ದುರಸ್ತಿ, ರಸ್ತೆ ಸಂಪರ್ಕ ಜೋಡಣೆ ಇದೆಲ್ಲ ಕಾಮಗಾರಿಗಳು ತಿಂಗಳೊಳಗೆ ಮುಗಿಸಬೇಕು. ಇದನ್ನು ವರ್ಷಗಟ್ಟಲೆ ಎಳೆದಾಡಿದರೆ ಅದಕ್ಕೆ ಅರ್ಥವಿಲ್ಲ ಎಂದು ಡಿ.ಸಿ.ಗಳಿಗೆ ಖಡಕ್ ಸೂಚನೆ ನೀಡಿದರು.

ಕಂದಾಯ ಇಲಾಖೆ ಜನರಿಗೆ ಪೂರಕವಾಗಿ ಕೆಲಸ ಮಾಡಬೇಕೇ ಹೊರತು ಜನರ ಬದುಕಿಗೆ ಹೊರೆಯಾಗಬಾರದು. ಹಲವಾರು ಕಂದಾಯ ಪ್ರಕರಣಗಳಲ್ಲಿ ಜನರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ.ಇವರನ್ನ ಸಮಸ್ಯೆಗಳಿಂದ ಹೊರತರಬೇಕಾದ ಕೆಲಸ ತಳ ಹಂತದ ಅಧಿಕಾರಿಗಳು ಮಾಡಬೇಕಿದೆ ಎಂದರು.

ಜಿಲ್ಲಾವಾರು ಪ್ರಗತಿ ಪರಿಶೀಲನೆ ವೇಳೆಯಲ್ಲಿ ಕಲಬುರಗಿ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮಾತನಾಡಿ ಜಿಲ್ಲೆಯಲ್ಲಿ 135 ಗ್ರಾಮ‌ ಪ್ರವಾಹಕ್ಕೆ ತುತ್ತಾಗುವ ಸಮಸ್ಯಾತ್ಮಕ ಹಳ್ಳಿಗಳನ್ನು ಗುರುತಿಸಿ ಇದಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿಸಿ ನೇಮಿಸಿದೆ. ಅಲ್ಲದೆ ತರಬೇತಿ ಸಹ ನೀಡಲಾಗಿದೆ. 2020ರಲ್ಲಿ ಉಜನಿ ಜಲಾಶಯದಿಂದ ಭೀಮಾ ನದಿಗೆ 8 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟ ಕಾರಣ 11 ಹಳ್ಳಿಗಳು ತುಂಬಾ ಸಮಸ್ಯೆಯಾಗಿದ್ದವು. ಈ ಬಾರಿ ಪ್ರವಾಹ ನಿಯಂತ್ರಣಕ್ಕೆ ಮುಂಜಾಗ್ರತೆ ಕ್ರಮ ಕೈಗೊಂಡಿದ್ದೇವೆ. 65 ಕಡೆ ಕಾಳಜಿ ಕೇಂದ್ರ, 40 ಕಡೆ ಪ್ರಾಣಿಗಳಿಗೆ ಪುನರ್ವಸತಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಸಭೆಗೆ ವಿವರಿಸಿದರು.

ಯಾದಗಿರಿ ಡಿ.ಸಿ. ಡಾ.ಸುಶೀಲಾ ಬಿ. ಮಾತನಾಡಿ ತಮ್ಮ ಜಿಲ್ಲೆಯಲ್ಲಿ ಕೃಷ್ಣಾ, ಭೀಮಾ ನದಿ ಪ್ರವಾಹಕ್ಕೆ 80 ಹಳ್ಳಿ ಸಂಕಷ್ಟಕ್ಕೆ ಸಿಲುಕಬಹುದೆಂದು ಅಂದಾಜಿಸಿ ಪೂರ್ವಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು. ಬೀದರ ಜಿಲ್ಲೆಯಲ್ಲಿ ಪ್ರವಾಹಕ್ಕೆ ಹಳ್ಳಿ ಮುಳುಗಡೆಯಾಗುವುದಿಲ್ಲ. ಬದಲಾಗಿ ಜಿಲ್ಲೆಯಲ್ಲಿ ಬಹುತೇಕ ಮನೆಗಳು ಮಣ್ಣಿನಿಂದ ನಿರ್ಮಾಣ ಮಾಡಿದ್ದರಿಂದ ಸತತ ಮಳೆ‌ ಬಿದ್ದಲ್ಲಿ ಮನೆ ಹಾನಿ ಜೊತೆಗೆ ಬೆಳೆ ಹಾನಿ ಹೆಚ್ಚಲಿದೆ ಎಂದು ಡಿ.ಸಿ. ಗೋವಿಂದರೆಡ್ಡಿ ತಿಳಿಸಿದರು. ಬಳ್ಳಾರಿಯಲ್ಲಿ 19, ಕೊಪ್ಪಳದಲ್ಲಿ 27 ಹಾಗೂ ವಿಜಯನಗರ ಜಿಲ್ಲೆಯಲ್ಲಿ 22 ಹಳ್ಳಿ ಸಮಸ್ಯಾತ್ಮಕ ಇವೆ ಎಂದು ಕ್ರಮವಾಗಿ ಡಿ.ಸಿ. ಪ್ರಶಾಂತಕುಮಾರ ಮಿಶ್ರಾ, ನಳಿನ್ ಕುಮಾರ ಅತುಲ್ ಹಾಗೂ ಎಂ.ಎಸ್.ದಿವಾಕರ ತಿಳಿಸಿದರು. ಇನ್ನುಳಿದಂತೆ ರಾಯಚೂರು ಜಿಲ್ಲೆಯಲ್ಲಿ ಬಹುತೇಕ ಎಲ್ಲಾ ತಾಲೂಕು ಪ್ರವಾಹಕ್ಕೆ ತುತ್ತಾಗುತ್ತವೆ. ಕಳೆದ 2009ರಲ್ಲಿ ನಾರಾಯಣಪುರ ಜಲಾಶಯದಿಂದ 6 ಲಕ್ಷ ನೀರು ಹರಿಬಿಟ್ಟಿದರಿಂದ ಪ್ರವಾಹ ಭೀತಿ ಎದುರಾಗಿತ್ತು. ಭೀತಿಯಿಂದ 70 ಹಳ್ಳಿ ಗುರುತಿಸಿದೆ ಎಂದು ಡಿ.ಸಿ. ಚಂದ್ರಶೇಖರ ನಾಯಕ್ ತಿಳಿಸಿದರು.

Leave a Reply