ಜೂನ್ 13ರಂದು ವಿಧಾನಪರಿಷತ್ ಚುನಾವಣೆ

2 years ago

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ನ ತೆರವಾದ 11 ಸ್ಥಾನಗಳ ಭರ್ತಿಗೆ ಚುನಾವಣೆ ಘೋಷಣೆಯಾಗಿದೆ.

ಬಿಜೆಪಿಯ ರಘುನಾಥ್ ರಾವ್ ಮಲ್ಕಾಪುರೆ, ಎನ್.ರವಿಕುಮಾರ್, ಎಸ್. ರುದ್ರೇಗೌಡ ಸೇರಿದಂತೆ ವಿಧಾನ ಪರಿಷತ್ತಿನ 11 ಸದಸ್ಯರ ಅಧಿಕಾರಾವಧಿ ಪೂರ್ಣಗೊಂಡಿದ್ದು ನೂತನ ಸದಸ್ಯರ ನೇಮಕಕ್ಕೆ ಚುನಾವಣೆ ವೇಳಾಪಟ್ಟಿ ಪ್ರಕಟಿಸಲಾಗಿದೆ.

ಚುನಾವಣೆಯ ಅಧಿಸೂಚನೆ ಮೇ 27ರಂದು ಪ್ರಕಟವಾಗಲಿದ್ದು, ಅಂದಿನಿಂದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಲಿದೆ. ನಾಮಪತ್ರ ಸಲ್ಲಿಸಲು ಜೂನ್ 3 ಕೊನೆಯ ದಿನವಾಗಿದ್ದು, ಜೂನ್ 4ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಜೂನ್ 13ರಂದು ಮತದಾನಕ್ಕೆ ದಿನಾಂಕ ನಿಗದಿಯಾಗಿದೆ.

ಜೂನ್ 17ಕ್ಕೆ ನಿವೃತ್ತಿಯಾಗಲಿರುವ ವಿಧಾನಪರಿಷತ್ತಿನ ಹಾಲಿ ಸದಸ್ಯರು

  1. ಅರವಿಂದ ಕುಮಾರ್ ಅರಳಿ
  2. ಎನ್.ಎಸ್. ಬೋಸರಾಜು
  3. ಕೆ.ಗೋವಿಂದರಾಜ್
  4. ಡಾ.ತೇಜಸ್ವಿನಿ ಗೌಡ (ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ)
  5. ಮುನಿರಾಜುಗೌಡ ಪಿ.ಎಂ.
  6. ಕೆ.ಪಿ. ನಂಜುಂಡಿ (ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ)
  7. ಬಿ.ಎಂ. ಫಾರೂಕ್
  8. ರಘುನಾಥ ರಾವ್ ಮಲ್ಕಾಪುರೆ
  9. ಎನ್. ರವಿಕುಮಾರ್
  10. ಎಸ್.ರುದ್ರೇಗೌಡ
  11. ಕೆ.ಹರೀಶ್ ಕುಮಾರ್
    ವಿಧಾನ ಪರಿಷತ್ ಸದಸ್ಯರಾಗಲು ಭರ್ಜರಿ ಪೈಪೋಟಿ: ಈ 11 ಸ್ಥಾನಗಳಿಗೆ ಆಯ್ಕೆ ಬಯಸಿ ಕಾಂಗ್ರೆಸ್ ಬಿಜೆಪಿ ಮತ್ತು ಜೆಡಿಎಸ್ ನಲ್ಲಿ ಭರ್ಜರಿ ಪೈಪೋಟಿ ಆರಂಭವಾಗಿದೆ. ವಿಧಾನಸಭೆಯಲ್ಲಿ ಹೊಂದಿರುವ ಶಾಸಕರ ಸಂಖ್ಯಾಬಲದ ಆಧಾರದಲ್ಲಿ ಕಾಂಗ್ರೆಸ್ ಎಂಟು ಸ್ಥಾನಗಳಲ್ಲಿ ಸುಲಭವಾಗಿ ಆಯ್ಕೆಯಾದರೆ, ಬಿಜೆಪಿ ಎರಡು ಮತ್ತು ಜೆಡಿಎಸ್ ಗೆ ಒಂದು ಸ್ಥಾನ ಲಭಿಸಲಿದೆ.

ಕಾಂಗ್ರೆಸ್ ನಲ್ಲಿ ಈ ಎಂಟು ಸ್ಥಾನಗಳಿಗಾಗಿ ಎರಡು ಡಜನ್ ಗೂ ಅಧಿಕ ಆಕಾಂಕ್ಷಿಗಳು ಪೈಪೋಟಿ ನಡೆಸುತ್ತಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ತಮಗಿರುವ ಪ್ರಭಾವವನ್ನು ಕೆಲವರು ಬಳಸುತ್ತಿದ್ದರೆ ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿರುವ ಕೆಲವರು ತಮ್ಮ ಆಯ್ಕೆ ನಿಶ್ಚಿತ ಎಂದುಕೊಂಡಿದ್ದಾರೆ.

ಅದೇ ರೀತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತ ಬಣದಲ್ಲಿರುವ ಕೆಲವರು ಲಾಭಿ ನಡೆಸಿದರೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತರು ಕೂಡ ಲಾಭಿ ನಡೆಸುತ್ತಿದ್ದಾರೆ.

ವಿಧಾನ ಪರಿಷತ್ತಿನ ಸಭಾ ನಾಯಕರಾಗಿರುವ ಸಣ್ಣ ನೀರಾವರಿ ಸಚಿವ ಬೋಸರಾಜು ಮತ್ತೊಂದು ಅವಧಿಗೆ ಆಯ್ಕೆಯಾಗುವುದು ನಿಶ್ಚಿತವಾಗಿದ್ದು, ಉಳಿದ 8 ಸ್ಥಾನಗಳಲ್ಲಿ ಒಂದು ಸ್ಥಾನ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಲಭಿಸಲಿದೆ ಎನ್ನಲಾಗುತ್ತಿದೆ.

ಸದ್ಯ ನಿವೃತ್ತಿಯಾಗುತ್ತಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಕಾಂಗ್ರೆಸ್ ಮುಖಂಡರಾದ ವಿನಯ್ ಕಾರ್ತಿಕ್, ರಾಮಚಂದ್ರಪ್ಪ, ರಮೇಶ್ ಬಾಬು, ವಿಜಯ್ ಮುಳಗುಂದ, ನರೇಂದ್ರ, ಸೈಯದ್ ಶಫಿವುಲ್ಲಾ, ವಿಜಯ್ ಮತ್ತಿಕಟ್ಟಿ, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷ್ಯೆ ಪುಷ್ಪ ಅಮರ್ ನಾಥ್, ಆರತಿ ಕೃಷ್ಣ, ಕಮಲಾಕ್ಷಿ ರಾಜಣ್ಣ ಸೇರಿದಂತೆ ಹಲವರು ರೇಸ್ ನಲ್ಲಿದ್ದಾರೆ.

ಬಿಜೆಪಿಯಿಂದ ನಿವೃತ್ತಿಯಾಗುತ್ತಿರುವ ಸದಸ್ಯ ಎನ್ ರವಿಕುಮಾರ್, ಪಕ್ಷದ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಸಿ.ಟಿ.ರವಿ ಮತ್ತು ಎನ್.ಮಂಜುಳಾ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್ ನಿಂದ ನಿವೃತ್ತಿಯಾಗುತ್ತಿರುವ ಬಿ.ಎಂ.ಫಾರೂಕ್ ಅವರಿಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ.

Leave a Reply