ದೆಹಲಿ: ದೇಶದಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲ್ಲಿನ ತೀವ್ರ ಕೊರತೆ ಉಂಟಾಗಿದೆ. ಕೆಲವು ಥರ್ಮಲ್ ಘಟಕಗಳಲ್ಲಿ 4 ದಿನದ ವಿದ್ಯುತ್ ಉತ್ಪಾದನೆಗೆ ಸಾಕಾಗುವಷ್ಟು ಕಲ್ಲಿದ್ದಲು ಮಾತ್ರ ದಾಸ್ತಾನಿದೆ. ಇದೇ ಕಾರಣದಿಂದಾಗಿ ಭಾರತದಲ್ಲಿ ಈಗ ಹಬ್ಬದ ಸೀಸನ್ ನಲ್ಲಿ ವಿದ್ಯುತ್ ಕೊರತೆ ಉಂಟಾಗುವ ಭೀತಿ ಎದುರಾಗಿದೆ.
ಭಾರತದಲ್ಲಿ ಸಾಂಪ್ರದಾಯಿಕ, ಅಸಾಂಪ್ರದಾಯಿಕ ಮೂಲಗಳಿಂದ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಕಲ್ಲಿದ್ದಲಿನಿಂದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಪವನ ಶಕ್ತಿ, ಜಲಶಕ್ತಿ, ಸೌರಶಕ್ತಿಯನ್ನು ಬಳಸಿ ವಿದ್ಯುತ್ ಉತ್ಪಾದನೆಗೆ ಯತ್ನಿಸಲಾಗಿದೆ.
ದೇಶದಲ್ಲಿ ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದಿಸುವ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲಿನ ಕೊರತೆ ಇದೆ. ಅಕ್ಟೋಬರ್ 4ರಂದು ಕೇಂದ್ರೀಯ ವಿದ್ಯುತ್ ಪ್ರಾಧಿಕಾರದ ಮಾಹಿತಿಯ ಪ್ರಕಾರ, ದೇಶದ 64 ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕೇವಲ 4 ದಿನಕ್ಕೆ ಆಗುವಷ್ಟು ಕಲ್ಲಿದ್ದಲು ಮಾತ್ರ ದಾಸ್ತಾನು ಇತ್ತು. ದೇಶದ 25 ಉಷ್ಣು ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ 7 ದಿನಕ್ಕೆ ಮಾತ್ರ ಸಾಕಾಗುವಷ್ಟು ದಾಸ್ತಾನಿದೆ.
ಕಲ್ಲಿದ್ದಲ ಕೊರತೆಯಿಂದಾಗಿ ಸದ್ಯಕ್ಕೆ ಭಾರತೀಯರು ವಿದ್ಯುತ್ ಸಮಸ್ಯೆಗೆ ಸಿಲುಕುವ ಸಾಧ್ಯತೆಗಳು ದಟ್ಟವಾಗಿವೆ. ವಿಶೇಷವಾಗಿ ರೈತರ ಪಂಪ್ ಸೆಟ್ ಗಳು, ಕಾರ್ಖಾನೆಗಳು ಸ್ಥಗಿತವಾದಲ್ಲಿ ದೇಶದ ಉತ್ಪಾದನೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಈಗಾಗಲೇ ಕೊರೊನಾ ಕಾರಣದಿಂದಾಗಿ ಕುಸಿದಿರುವ ಆರ್ಥಿಕತೆಯನ್ನು ಮೇಲಕ್ಕೆತ್ತಬೇಕಾದ ಅನಿವಾರ್ಯತೆ ಇದೆ. ಇದೀಗ ಕಲ್ಲಿದ್ದಲ ಕೊರತೆ ಕೂಡ ಎದುರಾಗಿ ಸಮಸ್ಯೆಯ ಬೆಂಕಿಗೆ ತುಪ್ಪ ಸುರುವಿದಂತಾಗಿದೆ.



