ಸಮಾಜದ ಓರೆ ಕೋರೆಗಳನ್ನು ತಿದ್ದಲು ಕಲೆ, ಸಾಹಿತ್ಯ ಪೂರಕ: ನರಸಿಂಹಮೂರ್ತಿ

5 years ago

ಬೆಂಗಳೂರು: ಕಲೆ, ಸಾಹಿತ್ಯ, ಸಂಗೀತ ಸಮಾಜಕ್ಕೆ ಮುಖ್ಯ ಅಂಶಗಳು. ಸಮಾಜದ ಓರೆ ಕೋರೆಗಳನ್ನು ತಿದ್ದಲು ಇವು ಪೂರಕ ಶಕ್ತಿಗಳಾಗುತ್ತವೆ  ಎಂದು ಖ್ಯಾತ ನಗೆ ಬರಹಗಾರ ನರಸಿಂಹಮೂರ್ತಿ ಹೇಳಿದರು.

ರಂಗ ವಿಜಯ ಸಂಸ್ಥೆಯು ರಂಗ ಚಂದಿರ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಆನ್ಲೈನ್ ಅಭಿನಯ, ಸಂಗೀತ ಶಿಬಿರದ ಉದ್ಘಾಟನೆಯನ್ನು ವಿಶ್ವ ವೈದ್ಯರ ದಿನಾಚರಣೆಯ ಅಂಗವಾಗಿ ಸೈನ್ಯದಲ್ಲಿದ್ದು ಅಲ್ಲಿಂದ ಬಂದ ನಂತರ ವೈದ್ಯಕೀಯ ಸೇವೆಯನ್ನು ಸಲ್ಲಿಸುತ್ತಿರುವ ಡಾ.ಸತ್ಯನಾರಾಯಣ, ಅಲ್ಲದೆ ವೈದ್ಯ ವೃತ್ತಿಯನ್ನು ಮಾಡುತ್ತಾ 53 ಬಾರಿ ರಕ್ತದಾನ ಮಾಡಿರುವ ಕರೋನ ರೋಗಿಗಳಿಗೆ ಸೇವೆ ಮಾಡುತ್ತಿರುವ ಡಾ.ಚೆನ್ನಕೇಶ್ವರ ಅವರನ್ನು ಗೌರವಿಸುವ ಮೂಲಕ ಈ ಸಮಾರಂಭವನ್ನು ಉದ್ಘಾಟಿಸಲಾಯಿತು.

ನಗು ಸಹಜ ಧರ್ಮ ನಗಿಸುವುದು ಪರಧರ್ಮ ಎಂಬಂತೆ ಅಭಿನಯದ ಮೂಲಕ ಕಲಾವಿದರು ಸಮಾಜದ ಅನೇಕ ತೊಡರುಗಳನ್ನು ನಿವಾರಿಸಬಲ್ಲ ಶಕ್ತಿಯುಳ್ಳವರು, ಕಲೆ ಎಲ್ಲರನ್ನೂ ಆರೋಗ್ಯವಂತರನ್ನಾಗಿ ಇರುವಂತೆ ಮಾಡುವ ಶಕ್ತಿ ಹೊಂದಿದೆ ಕಲಾವಿದ ಪ್ರತಿಯೊಬ್ಬರ ಬಾಳಿನ ನೋವುಗಳನ್ನು ತೊಳೆಯುವ ಶಕ್ತಿ ಹೊಂದಿರುತ್ತಾನೆ ಎಂದರು.

ಪಾಪ ಪಾಂಡು ಖ್ಯಾತಿಯ ನಟ ಚಿದಾನಂದ ಮಾತನಾಡಿ ರಂಗಭೂಮಿ ಒಂದು ವಿಶ್ವವಿದ್ಯಾನಿಲಯ ಇದ್ದಹಾಗೆ. ಒಬ್ಬ ಮನುಷ್ಯ ಒಳ್ಳೆಯ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕಾದರೆ ರಂಗಭೂಮಿಯಲ್ಲಿ ತೊಡಗಿಕೊಂಡು ಗುರಿ ಮತ್ತು ಶ್ರದ್ಧೆಯನ್ನು ಇಟ್ಟುಕೊಂಡರೆ ಅದ್ಭುತವಾಗಿ  ಬದುಕಬಹುದು ಎಂದರು.

ನಿರ್ದೇಶಕ ಶಶಿಧರ್ ಭಾರಿಘಾಟ್ ಮಾತನಾಡಿ, ಮಕ್ಕಳು ಮನಬಿಚ್ಚಿ ಮಾತನಾಡುವ, ಆಟವಾಡಿ ಬೆಳೆಯುವ, ತರಗತಿಗಳಲ್ಲಿ ಕಲಿಯುವ ಅವಕಾಶವನ್ನು ಕರೋನ ಕಾರಣದಿಂದ ಕಳೆದುಕೊಂಡಿದ್ದಾರೆ. ರಂಗಭೂಮಿಯ ಕಾಳಜಿ ಇದ್ದಲ್ಲಿ ಏನನ್ನಾದರೂ ಸಾಧಿಸುವ ಆತ್ಮವಿಶ್ವಾಸ ಮಕ್ಕಳಲ್ಲಿ ಬರುತ್ತದೆ ಎಂದರು.

ಕಿರುತೆರೆ ನಟಿ ಡಾ.ರಾಜಶ್ರೀ ಮಾತನಾಡಿ, ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ರಂಗ ವಿಜಯ ಮಾಡುತ್ತಿರುವ ಕೆಲಸ ಶ್ಲಾಘನೀಯ ಕಲಾವಿದ ಕಲೆಯನ್ನು ಕಲಿಯುವ ಜೊತೆಗೆ ಜೀವನದ ಪಾಠವನ್ನು ಕಲಿಯಲು ಸಾಧ್ಯ. ಆ ಕಾರಣದಿಂದ ರಂಗಭೂಮಿಗೆ ಬಂದು ರಂಗಭೂಮಿಯನ್ನು ಜೀವಂತವಾಗಿಸಿ ನಾವು ಜೀವಂತವಾಗಿರೋಣ ಎಂದರು.

ಖ್ಯಾತ ಗಾಯಕ ಮನೋಜವಂ ಅತ್ರೆಯ ಮಾತನಾಡುತ್ತಾ ಕಲೆ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ ಕೆಲವರು ಮಾತ್ರ ಕಲಾವಿದರಾಗುತ್ತಾರೆ. ಆ ಆಲೋಚನೆಯಲ್ಲಿ ನೀವು ಕಲಿಯುವ ಮನಸ್ಸಿದ್ದರೆ ಉತ್ತಮ ಕಲಾವಿದರಾಗಲು ಸಾಧ್ಯ ಆ ನಿಟ್ಟಿನಲ್ಲಿ ಪ್ರಯತ್ನಿಸಿ ಎಂದರು.

ರಂಗ ವಿಜಯ ಸಂಸ್ಥೆಯ ಅಧ್ಯಕ್ಷ ಮಾಲೂರು ವಿಜಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ರಂಗ ವಿಜಯ ಗ್ರಾಮೀಣ ಪ್ರತಿಭೆಗಳಿಗೆ ತೆರೆದ ಬಾಗಿಲಾಗಿದೆ. ಎಲ್ಲಾ ಕಲಾಪ್ರಕಾರಗಳನ್ನು ಕಲಿಸುವ ಹುಮ್ಮಸ್ಸು ನಮ್ಮಲ್ಲಿದೆ ಕಲಿಯುವ ಮನಸ್ಸುಳ್ಳವರು ರಂಗ ವಿಜಯದೊಂದಿಗೆ ಕೈಜೋಡಿಸಿ ಎಂದರು.

ರಂಗ ಚಂದಿರದ ಜಿಪಿಒ ಚಂದ್ರು ಎಲ್ಲರನ್ನು ಸ್ವಾಗತಿಸಿದರು. ಲಕ್ಷ್ಮೀನಾರಾಯಣ್ ಹಾಗೂ ಚಂದ್ರಿಕಾ ಪ್ರಾರ್ಥಿಸಿದರು. ಗೀತಾ ರಾಘವೇಂದ್ರ ಅವರು ವಂದನಾರ್ಪಣೆ ನಡೆಸಿಕೊಟ್ಟರು.

Leave a Reply