ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಖತರ್ನಾಕ್ ಖದೀಮನ ಬಂಧನ

3 years ago

ಬೆಂಗಳೂರು: ಪ್ರತಿಷ್ಠಿತ ಕುಟುಂಬದ ನೆಪದಲ್ಲಿ ಮಾಲೀಕರಿಂದ ಬಾಡಿಗೆಗೆ ಪಡೆದ ಬಿಳಿ (ವೈಟ್) ಬೋರ್ಡ್ ಕಾರುಗಳನ್ನು ಅವರಿಂದಲೇ ಪಡೆದ ಜೆರಾಕ್ಸ್ ಪ್ರತಿಗಳನ್ನು ಬಳಸಿ ನಕಲಿ ದಾಖಲೆಯನ್ನು ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಖತರ್ನಾಕ್ ಖದೀಮನನ್ನು ತಿಲಕನಗರ ಪೊಲೀಸರು ಬಂಧಿಸಿ 78.70 ಲಕ್ಷ ಮೌಲ್ಯದ ವಾಹನಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜರಾಜೇಶ್ವರಿನಗರದ ಕೃಷ್ಣಗಾರ್ಡನ್ ನ ವೇದಾಂತ್ ಗೌಡ ಅಲಿಯಾಸ್ ಜೀವನ್(27) ಬಂಧಿತ ಆರೋಪಿಗಳಾಗಿದ್ದು, ಆತನಿಂದ 78.70 ಲಕ್ಷ ಮೌಲ್ಯದ ಆರು ವಿವಿಧ ಕಂಪನಿಯ ಕಾರುಗಳು, ಬೈಕ್, ವಾಹನಗಳ ನಕಲಿ ದಾಖಲಾತಿಗಳು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬಾ ತಿಳಿಸಿದ್ದಾರೆ.

ಹಾಸನ ಮೂಲದ ಬಂಧಿತ ಆರೋಪಿಯು ಸಾಮಾಜಿಕ ಜಾಲತಾಣದಿಂದ ಮಾಹಿತಿಯನ್ನು ಪಡೆದು ನಗರದ ವಿವಿಧೆಡೆಗಳಲ್ಲಿ ಕಾರುಗಳ ಮಾಲೀಕರಿಂದ, ಕಾರುಗಳನ್ನು ಬಾಡಿಗೆಗೆ ಪಡೆದು,ಒಂದು ತಿಂಗಳ ಬಾಡಿಗೆಯನ್ನು ಮುಂಗಡವಾಗಿ ನೀಡಿ  ನಂಬಿಕೆ ಗಳಿಸಿ ಜೆರಾಕ್ಸ್ ದಾಖಲೆಗಳನ್ನು ಪಡೆದು ಅದರಿಂದ ನಕಲಿ ದಾಖಲೆಗಳನ್ನು ಸೃಷ್ಠಿಸಿ ಅವುಗಳನ್ನು ಅಸಲಿ ದಾಖಲೆಗಳೆಂದು ನಂಬಿಸಿ, ಆ ಕಾರುಗಳನ್ನು ಬೇರೆಯವರ ಬಳಿ ಭದ್ರತೆಗಾಗಿ ಇಟ್ಟು ಹಣ ಪಡೆದು ವಂಚಿಸುತ್ತಿದ್ದ ಎಂದು ತಿಳಿಸಿದರು.

ವಂಚನೆಯಿಂದ ಬಂದ ಹಣದಿಂದ ಆನ್ ಲೈನ್ ಜೂಜಾಟ ಮೋಜು ಮಸ್ತಿ ಮಾಡುತ್ತಿದ್ದು ಆತನನ್ನು ಹೆಚ್ಚಿನ ವಿಚಾರಣೆ ನಡೆಸಲಾಗಿದೆ ಎಂದು ಹೇಳಿದರು.

ತಿಲಕ್ ನಗರದಲ್ಲಿ ನಡೆದಿದ್ದ ಕಾರು ಬಾಡಿಗೆಗೆ ಪಡೆದು ವಂಚಿಸಿದ್ದ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಇನ್ಸ್‌ಪೆಕ್ಟರ್ ಶಂಕರಾಚಾರ್.ಬಿ ನೇತೃತ್ವದ ಪಿಎಸ್‌ಐ ಸದ್ದಾಂ ಹುಸ್ಸೇನ್ ನದಾಪ್ ಮತ್ತವರ  ಸಿಬ್ಬಂದಿ ಆರೋಪಿಯನ್ನು ಬಂಧಿಸುವಲ್ಲಿ‌ ಯಶಸ್ವಿಯಾಗಿದ್ದಾರೆ.

ಬಂಧಿತನಿಂದ ಫೋರ್ಡ್ ಈಕೋ ಸ್ಪೋಟ್ಸ್ ಕಾರ್, ಟಾಟಾ ಟಿಗರ್ , ಮಾರುತಿ ಸುಜುಕಿ ಎರ್ಟಿಗಾ, ಮಹೀಂದ್ರ ಎಕ್ಸ್.ಯು.ವಿ 500, ಮಾರುತಿ ಸುಜುಕಿ ಸ್ವಿಪ್ಟ್ ಕಾರ್,ಟಾಟಾ ಇನ್ನೋವಾ ಕಾರುಗಳು ಹಾಗೂ ಟಿ.ವಿ.ಎಸ್ ಅಪ್ಪಾಚಿ ಬೈಕ್,2 ವಿವೋ ಮೊಬೈಲ್ ಗಳು ಸೇರಿ 78.70 ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಲಾಗಿದೆ ಎಂದರು.

ಕಾರು ಬಾಡಿಗೆಗೆ ಪಡೆದು ವಂಚನೆಗಳಿಗೆ ಒಳಗಾಗಿದ್ದಲ್ಲಿ, ತಿಲಕ್‍ನಗರ ಪೊಲೀಸ್ ಠಾಣೆ ದೂರವಾಣಿ 080-2294-2571,ಇನ್ಸ್‌ಪೆಕ್ಟರ್ ಮೊಬೈಲ್ 9480801621ನ್ನು ಸಂಪರ್ಕಿಸಲು ಮನವಿ ಮಾಡಿದ್ದಾರೆ. 

Leave a Reply