ಬೆಂಗಳೂರು: ಸ್ಯಾಂಡಲ್ ವುಡ್ ನಟ, ನಿರ್ಮಾಪಕ ಟಿ.ಚಂದ್ರಶೇಖರ್ ಅವರು ತನ್ನ ಪತ್ನಿ ಮಾದಕ ದ್ರವ್ಯ ವ್ಯಸನಿಯಾಗಿದ್ದು, ಆಕೆಗೆ ಡ್ರಗ್ ಪೆಡ್ಲರ್ ಜೊತೆ ಅನೈತಿಕ ಸಂಬಂಧವಿದೆ ಎಂದು ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರಿಗೆ ದೂರು ದಾಖಲಿಸಿದ್ದಾರೆ.
‘ಹೀಗೊಂದು ದಿನ’ ಹಾಗು ‘ಅಪ್ಪುಗೆ’ ಎನ್ನುವ ಎರಡು ಚಿತ್ರಗಳ ನಿರ್ಮಾಪಕರಾದ ಟಿ.ಚಂದ್ರಶೇಖರ್ ತನ್ನ ಪತ್ನಿಯು ಮಾದಕ ವ್ಯಸನಿಯಾಗಿದ್ದು, ಅದಕ್ಕಾಗಿಯೇ ಆಕೆ ಡ್ರಗ್ ಪೆಡ್ಲರ್ ಜೊತೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಮಿತಾರನ್ನು ಕಳೆದ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದು ಆಕೆಯ ಜೊತೆ ವಾಸವಾಗಿರುವ ನನಗೆ ಮಕ್ಕಳಿಲ್ಲ, ನನ್ನ ಪತ್ನಿಯ ಮಾದಕ ವಸ್ತುಗಳ ವ್ಯಸನವನ್ನು ಬಿಡಿಸಲು ಬಹಳ ಸಾರಿ ಪ್ರಯತ್ನ ಪಟ್ಟಿರುತ್ತೇನೆ. ಆದರೂ ಕದ್ದು ಮುಚ್ಚಿ ಆಕೆ ಸೇವನೆ ಮಾಡುತ್ತಿರುತ್ತಾಳೆ ಎಂದು ಬರೆದಿದ್ದಾರೆ.
ಕಳೆದ ಜನವರಿಯಿಂದ ಲಕ್ಷ್ಮೀಶ್ ಪ್ರಭು ಎಂಬ ಡ್ರಗ್ ಪೆಡ್ಲರ್ ನೊಂದಿಗೆ ಸ್ನೇಹ ಬೆಳೆಸಿಕೊಂಡು ಅಕ್ರಮ ಸಂಬಂಧ ಇಟ್ಟುಕೊಂಡಿರುವುದಕ್ಕೆ ಸಾಕ್ಷಿಗಳು ದೊರೆತು ನಾನು ನನ್ನ ಪತ್ನಿಗೆ ಬುದ್ದಿ ಹೇಳಿರುತ್ತೇನೆ. ಆದರೂ ನನ್ನ ಮಾತನ್ನು ಆಕೆ ತಿರಸ್ಕಾರ ಮಾಡಿ, ಅವನೊಂದಿಗೆ ಕದ್ದು ಮುಚ್ಚಿ ಸಂಬಂಧವಟ್ಟು ಇಟ್ಟುಕೊಂಡಿರುತ್ತಾಳೆ. ಅವನು ಮಾದಕ ವಸ್ತಗಳನ್ನು ಕೊಡುತ್ತಿರುತ್ತಾನೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪತ್ನಿ ಮತ್ತು ಅವಳ ಪ್ರಿಯಕರ ತಮ್ಮ ಮೇಲೆ ಹಲ್ಲೆ ಮಾಡಿದ್ದನ್ನೂ ದೂರಿನಲ್ಲಿ ಉಲ್ಲೇಖಿಸಿರುವ ಚಂದ್ರಶೇಖರ್, ‘ಜೂ.16ರ ಮಧ್ಯಾಹ್ನ 12.30 ಗಂಟೆಯಲ್ಲಿ ನಾನು ಇಲ್ಲದ ಸಮಯದಲ್ಲಿ ಲಕ್ಷ್ಮೀಶ್ ಪ್ರಭುವನ್ನು ಮನೆಗೆ ಕರೆಯಿಸಿಕೊಂಡು ಅವನೊಂದಿಗೆ ದೈಹಿಕ ಸಂಪರ್ಕದಲ್ಲಿದ್ದಾಗ ನಾನು ಪ್ರತ್ಯಕ್ಷವಾಗಿ ನೋಡಿ ಪ್ರಶ್ನಿಸಿದಾಗ ನನ್ನ ಪತ್ನಿ ಹಾಗೂ ಅವಳ ಪ್ರಿಯಕರ ನನ್ನ ಕೈ ಕಾಲು ಹಿಡಿದುಕೊಂಡು ರಕ್ತ ಬರುವಂತೆ ಹೊಡೆದಿರುತ್ತಾರೆ. ನನ್ನ ಪತ್ನಿ ನನ್ನನ್ನು ಹಿಡಿದುಕೊಂಡು ಅವಳ ಪ್ರಿಯಕರ ನನ್ನ ಮೇಲೆ ಚಾಕುವಿನಿಂದ ಹಲ್ಲೇ ಮಾಡಿರುತ್ತಾರೆ’ ಎಂದು ದೂರಿನಲ್ಲಿ ಚಂದ್ರಶೇಖರ್ ಉಲ್ಲೇಖಿಸಿದ್ದಾರೆ.
ಪತಿಯ ವಿರುದ್ಧ ಮರು ದೂರು ನೀಡಿರುವ ಪತ್ನಿ, ಮನೆಯಲ್ಲಿ ಡ್ರಗ್ ಇಟ್ಟು ಬಂಧನ ಮಾಡಿಸುವೆ ಎಂದು ಚಂದ್ರಶೇಖರ್ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಸ್ನೇಹಿತ ಲಕ್ಷ್ಮೀಶ್ ಪ್ರಭುಗೆ ಥಳಿಸಿದ್ದಲ್ಲದೆ ಚಾಕುವಿನಿಂದ ತನ್ನ ಮೇಲೆ ಕೂಡ ಹಲ್ಲೆ ನಡೆಸಿದ್ದಾರೆ ಪತ್ನಿ ದೂರು ನೀಡಿದ್ದಾರೆ, ಪರಸ್ಪರರ ದೂರು ದಾಖಲಿಸಿರುವ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




