ಕಾರಿಯಪ್ಪನಿಗೊಂದು ಪತ್ರ

3 years ago

ಗೆಳೆಯ ಕಾರಿಯಪ್ಪ
ಮೈಸೂರು ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಸುದ್ದಿ ಬಂದಿದೆ. ನಾನೂ ಸೇರಿದಂತೆ ಸಾಂಸ್ಕೃತಿಕ ವಲಯದ ಸಾವಿರಾರು ಜನರು ಇದನ್ನು ನಿರೀಕ್ಷಿಸಿದ್ದೆವು. ನಾನು ಹೀಗೆಂದರೆ ನಿನಗೆ ಸಿಟ್ಟು ಬರಬಹುದು, ತಂಗಿ ಅನಿತಾ ಬೇಸರ ಪಟ್ಟುಕೊಳ್ಳಬಹುದು. ಆದರೆ ಇಂದಿನ ಸಂದರ್ಭದಲ್ಲಿ ಅದು ನಿನಗೆ ಅನಿವಾರ್ಯ ನಡೆಯಾಗಿತ್ತು.

ಕಾರಿಯಪ್ಪ ನನಗೆ ನಿನ್ನ ಪರಿಚಯವಾದದ್ದು 1986 ರಲ್ಲಿ , ನೀನು ಅನಿತಾ ಇಬ್ಬರೂ ನೀನಾಸಂ ತಿರುಗಾಟದಲ್ಲಿದ್ದಿರಿ.
ಆಗಲೇ ನೀನು ಮಹತ್ವಾಕಾಂಕ್ಷಿ. ಕೆ.ವಿ, ಸುಬ್ಬಣ್ಣ ನವರೂ ಕಣ್ಬಿಟ್ಟು ನೋಡಬೇಕು ಅಂಥ ರೆಪರ್ಟರಿಯನ್ನು ನಾನು ಕಟ್ಟುತ್ತೇನೆ ! ಎನ್ನುತ್ತಿದ್ದೆ. ಅದು ಅನೇಕರಿಗೆ ಅಹಂಕಾರವಾಗಿಯೂ, ಹುಂಬತನವಾಗಿಯೂ ಕಾಣುತ್ತಿತ್ತು. ಆದರೆ ನಿನ್ನೊಳಗೊಬ್ಬ ಛಲಗಾರನಿದ್ದ ಅಥವಾ ಹಠಮಾರಿಯಿದ್ದ.

ನಂತರ ಹುಟ್ಟಿದ್ದು ಕೊಡಗಿನಲ್ಲಿ ನಿನ್ನ ಮನೆಯಂಗಳದಲ್ಲಿ ಸೃಷ್ಟಿ ಕೊಡವ ರಂಗ. ಆಗ ನಿನ್ನ ಜೊತೆಗಿದ್ದ ಗೆಳೆಯರು ಇದೇ ಮಂಡ್ಯ ರಮೇಶ್ ಮತ್ತು ಈಗಲೂ ರಂಗಾಯಣದಲ್ಲಿರುವ ಕೃಷ್ಣಕುಮಾರ್ ನಾರ್ಣಕಜೆ.

ಅದು ಕಾಫಿನಾಡಿನಲ್ಲಿ ಹುಟ್ಟಿದ ಮೊದಲ ರೆಪರ್ಟರಿ, ಕೇವಲ ಮೂರು ವರ್ಷಗಳ ಕಾಲ ಅದು ಇತ್ತು. ಆದರೆ ಎಂತೆಂತವರು ಅದರ ಜೊತೆಗಿದ್ದರು. ಸಿ.ಜಿ.ಕೆ. ಪ್ರಸನ್ನ, ಮೋಹನ ಚಂದ್ರ, ಸುರೇಶ್ ಆನಗಳ್ಳಿ, ಕೃಷ್ಣಕುಮಾರ್ ನಾರ್ಣಕಜೆ, ಮಂಡ್ಯ ರಮೇಶ ಮುಂತಾದವರು ಆಡಿದ ನಾಟಕಗಳು ? ದಂಗೆಯ ಮುಂಚಿನ ದಿನಗಳು, ಸಂಕ್ರಾಂತಿ, ಕವಿ ಹರದಾಸ ಅಪ್ಪಚ್ಚ, ಬೂರ್ಜ್ವಾ ಜಂಟಲ್ ಮನ್,ರಾಬಿನ್ ಗುಡ್ ಫೆಲೊ, ನೀಲಿಕುದುರೆ ದಿವಾನ್ ಬೋಪಣ್ಣ, ಕಾವೇರಿ ಕತೆ, ಗುಲ್ಪಟ್ಟಿ ಮುನ್ಪುಟ್ಟಿ, ಹೀಗೇ ಸಾಲು ಸಾಲು…
ಇದರಲ್ಲಿ ಹಲವು ನಾಟಕಗಳು ನಮ್ಮೂರಿನಲ್ಲೂ ಪ್ರದರ್ಶನವಾದವು.

ಚಿತ್ರನಟ ದರ್ಶನ್ ಗೆ (ಮಕ್ಕಳ ನಾಟಕ ರಾಬಿನ್ ಗುಡ್ ಫೆಲೋ ದಲ್ಲಿ) ಬಣ್ಣ ಬಳಿದದ್ದು ಮಂಡ್ಯ ರಮೇಶ್ ಎಂದು ದರ್ಶನ್ ಕೂಡಾ ಪದೇ ಪದೇ ಹೇಳುತ್ತಾರೆ. ಅದು ಕೂಡಾ ಸೃಷ್ಟಿ ಕೊಡವ ರಂಗದಲ್ಲಿ , ನಿನ್ನ ಮನೆಯಂಗಳದಲ್ಲಿ, ಅದಕ್ಕೆ ನಾನೂ ಒಬ್ಬ ಸಾಕ್ಷಿದಾರ..

ರೆಪರ್ಟರಿ ಕಟ್ಟುವುದೇ ಕಷ್ಟದ ಕೆಲಸ ಆದರೆ ಒಂದು ಸಣ್ಣ ರೆಪರ್ಟರಿ ಒಂದು ಸೀಸನ್ ಕಾಲ ಕೊಡಗಿನಂತಹ ಪುಟ್ಟ ಜಿಲ್ಲೆಯೊಳಗೇ ಸಂಚಾರ ಮಾಡುತ್ತ ಬದುಕಲು ಸಾಧ್ಯ ಎಂದು ತೋರಿಸಿಕೊಟ್ಟೆಯಲ್ಲ ಅದು ನಿನ್ನ ಸಾಧನೆಯಾಗಿತ್ತು. ಅದು ನಮ್ಮ ಅನೇಕ ರಂಗ ಕರ್ಮಿಗಳಿಗೆ ಮಾದರಿಯೂ ಆಗಿತ್ತು. ಆದರೆ ಅಂತಹ ಒಂದು ಸಾಹಸ ಮತ್ತೆ ಕನ್ನಡದ ನೆಲದಲ್ಲಿ ಎಲ್ಲಿ ನಡೆದದ್ದೂ ಕಾಣೆ.

ನಿನ್ನೊಳಗೊಬ್ಬ ರಾಜಕಾರಣಿ ಇದ್ದಾನೆ, ತಪ್ಪಲ್ಲ.
ಪ್ರತಿಯೊಬ್ಬ ಸಂಘಟಕ ಹಾಗೂ ಮಹತ್ವಾಕಾಂಕ್ಷಿಯ ಒಳಗೂ ಒಬ್ಬ ಸೂಕ್ಷ್ಮ ರಾಜಕಾರಣಿ ಇರಬೇಕು, ಇಲ್ಲವಾದಲ್ಲಿ ಆತ ಏನನ್ನೂ ಸಾಧಿಸಲಾರ, ಬದಲಿಗೆ ಆತ ವೈಫಲ್ಯಗಳ ಮೂಟೆ ಹೊತ್ತು ನಿರಂತರ ಟೀಕಾಕಾರನಾಗಿ ಬದಲಾಗಬಲ್ಲ.
ಆದರೆ ರಾಜಕಾರಣದಲ್ಲಿ ಎಲ್ಲ ಜೀವಪರ ಸೂಕ್ಷತೆಗಳನ್ನು ಕಳೆದುಕೊಂಡರೆ ಆತ ಒಬ್ಬ ಅವಕಾಶವಾದಿ ದೂರ್ತನಾಗುತ್ತಾನೆ ಅಷ್ಟೇ.

ನೀನು ಒಂದು ಕಾಲದಲ್ಲಿ ಗಿರೀಶ್ ಕಾರ್ನಾಡರ ನಾಟಕಗಳನ್ನು ಮೆಚ್ಚಿಕೊಂಡವನಾಗಿದ್ದೆ. ಮಡಿಕೇರಿಯ ಪುರಭವನದಲ್ಲಿ ಒಂದು ಗಿರೀಶ್ ಕಾರ್ನಾಡರ ನಾಟಕಗಳ ವಿಚಾರ ಸಂಕಿರಣವನ್ನು ನೀನೇ ಸಂಘಟಿಸಿದ್ದೆ. ಇಂದು ಮಡಿಕೇರಿಯಲ್ಲಿ ಹಿರಿಯ ವಕೀಲರಾಗಿರುವ ಬಾಲ ಸುಬ್ರಹ್ಮಣ್ಯ ಕಂಜರ್ಪಣೆ ಅದರಅಧ್ಯಕ್ಷರು, ಅಂದು ನಾನು ಗಿರೀಶರ ನಾಟಕಗಳ ಮಿತಿಗಳ ಬಗ್ಗೆ ಹೆಚ್ಚು ಕಟುವಾಗಿ ಮಾತನಾಡಿದ್ದೆ, ರಂಗಕರ್ಮಿ ಐ.ಕೆ.ಬೊಳುವಾರು ನನ್ನ ಜೊತೆಗಿದ್ದರು, ನೀನಂದು ಕಾರ್ನಾಡರ ಪ್ರಖರ ಅಭಿಮಾನಿಯಂತೆ ಮಾತನಾಡಿದ್ದೆ.
ಅದೆಲ್ಲ ಹಳೆಯ ಕತೆ.

ನಂತರ ನೀನು ನೇರ ರಾಜಕಾರಣಕ್ಕಿಳಿದೆ, ಜೆಡಿಎಸ್ ನಿಂದ ತಾಲ್ಲೂಕು ಪಂಚಾಯತ್ ಸದಸ್ಯನೂ ಆದೆ. ನಂತರ ಎಲ್ಲೆಲ್ಲೋ ಹೋದೆ. ಬಿಜೆಪಿ ವಕ್ತಾರನಾದೆ. ಆಯ್ಕೆ ನಿನ್ನದು.
ನೀನು ರಂಗಾಯಣದ ನಿರ್ದೇಶಕನಾದಾಗ ಹಲವಾರು ಟೀಕೆಗಳು ಬಂದವು. ಹೌದು ಅವೆಲ್ಲ ಅಂದು ರಾಜಕೀಯ ಪ್ರೇರಿತವಾಗಿಯೇ ಇದ್ದವು. ಅದು ಸಹಜ ಕೂಡಾ.
ಆದರೆ ನಾನು ನಿನ್ನನ್ನು ಬೆಂಬಲಿಸಿದೆ. ಯಾಕೆಂದರೆ ನಾನು ನಿನ್ನನ್ನು ಹತ್ತಿರದಿಂದ ಕಂಡ ಗೆಳೆಯನಾಗಿದ್ದೆ ಎನ್ನುವುದು ಒಂದು ಕಾರಣವಾದರೆ. ನನ್ನ ಹಿರಿಯರ ನಾಡು ಕೊಡಗು. ನಾನು ಹುಟ್ಟಿದ್ದು ಕೂಡಾ ಅಲ್ಲಿಯೇ, ಹಾಸನ ಜಿಲ್ಲೆ ನನ್ನನ್ನು ಸಲಹಿ ಅನ್ನ ಕೊಟ್ಟನೆಲ.
ಮನುಷ್ಯ ಪ್ರಾಣಿಗೆ ಎಷ್ಟೆಂದರೂ ತಾಯ್ನೆಲದ ಮೋಹ ಉಳಿದಿರುತ್ತದೆ. ಕೊಡಗಿನವನೊಬ್ಬನಿಗೆ ಸಿಕ್ಕಿದ ರಂಗಾಯಣದ ನೇತೃತ್ವ ನನಗೇ ಸಿಕ್ಕಿದಷ್ಟು ಸಂತಸವಾಗಿತ್ತು.

ನಿನ್ನ ನಿರ್ದೇಶಕತ್ವ ಪ್ರಾರಂಭದ ದಿನಗಳಲ್ಲಿ ನಾನು ತುಸು ಹೆಚ್ಚೇ ಎನ್ನುವಷ್ಟು ನಿನ್ನನ್ನು ಬೆಂಬಲಿಸಿದೆ. ಹಲವರಿಂದ ಟೀಕೆಯನ್ನೂ ಎದುರಿಸಿದೆ. ಅದಕ್ಕೆ ಕಾರಣ ನೀನು ರಂಗಾಯಣದ ನಿರ್ದೇಶಕನಾಗಿ ಏನನ್ನಾದರೂ ಸಾಧಿಸಬೇಕು, ಹಾಗೂ ಕೊಡಗಿನ ವಿಶಿಷ್ಟ ಸಂಸ್ಕೃತಿ ರಂಗಾಯಣದಲ್ಲಿ ಪ್ರಕಾಶಿಸಬೇಕು ಎಂದು. ಕೊಡಗು ಮಾತ್ರವಲ್ಲ ಇಡೀ ಕಾಫಿ ನಾಡಿನ ಬೇರೊಬ್ಬ ವ್ಯಕ್ತಿಗೆ ರಂಗಾಯಣದ ನಿರ್ದೇಶಕ ಸ್ಥಾನ ಸಿಗುವ ಸಾದ್ಯತೆ ಸದ್ಯದಲ್ಲಂತೂ ಖಂಡಿತ ಬರಲಾರದು. ಇದು ನಿನಗೆ ಮಾತ್ರವಲ್ಲ ಇಡೀ ಕಾಫಿ ನಾಡಿಗೆ ಸಿಕ್ಕಿದ ಅಪೂರ್ವ ಅವಕಾಶವಾಗಿತ್ತು.

ಮೈಸೂರು ರಂಗಾಯಣದಲ್ಲಿ ಇದ್ದ ಹಿರಿಯ ನಟರುಗಳೆಲ್ಲ ನಿನ್ನ ನೀನಾಸಂ ಕಾಲದ ಗೆಳೆಯರೇ ಆಗಿದ್ದರು. ಅವರೆಲ್ಲರ ಬೆಂಬಲದಿಂದ ಅದ್ಭುತವನ್ನು ಸಾಧಿಸಬಹುದಿತ್ತು.
ಭಿನ್ನಾಭಿಪ್ರಾಯಗಳು ಮಾತ್ರವಲ್ಲ ರಾಜಕೀಯ ಭಿನ್ನಾಭಿಪ್ರಾಯಗಳು ರಂಗಾಯಣದಲ್ಲಿ ಹಿಂದೆಯೂ ಇದ್ದವು, ಬಲಪಂಥೀಯ ರಾಜಕಾರಣದ ಒಲವುಳ್ಳವರು ಹಿಂದೆಯೂ ನಿರ್ದೇಶಕರಾಗಿದ್ದರು. ನಟರುಗಳಲ್ಲೂ ಇದ್ದರು.
ಆದರೆ ಅವರು ಯಾರೂ ರಂಗಾಯಣವನ್ನು ರಾಜಕೀಯ ಪಕ್ಷದ ಕಛೇರಿಯನ್ನಾಗಿ ಮಾಡಲಿಲ್ಲ. ಅಲ್ಲಿ ಲಿಂಗದೇವರು ಹಳೆಮನೆಯವರೂ ಇದ್ದರು, ರಾಜಾರಾಮ್ ಅವರೂ ಇದ್ದರು.

ಪದೇ ಪದೇ ಬಿ.ವಿ ಕಾರಂತರ ಬಗ್ಗೆ ಮಾತನಾಡುವ, ಅವರ ಶಿಷ್ಯ ಎಂದು ಕೊಳ್ಳುವ ನಿನಗೆ ಕಾರಂತರ ಭಾರತ ಭವನವನ್ನು ನಾಶ ಮಾಡಿದ್ದು ಯಾರು ಎಂದು ಅರಿವಿಲ್ಲವೇ?, ಕಾರಂತರನ್ನು ಜೈಲಿಗಟ್ಟಲು ಕಾರಣರಾದದ್ದು ಯಾರು ಎನ್ನುವುದೂ ತಿಳಿದಿಲ್ಲವೇ ?
ಒಂದು ಕಾಲದ ಕಾರ್ನಾಡರ ಅಭಿಮಾನಿಯಾದವ ಅಭಿಪ್ರಾಯ ಬದಲಿಸಿಕೊಳ್ಳಬಾರದು ಎಂದೇನಿಲ್ಲ. ಆದರೆ ವೈಯಕ್ತಿಕ ನಿಂದನೆಯ ಮಟ್ಟಕ್ಕೆ ಇಳಿದರೆ ? ಅದು ಅಗ್ಗದ ರಾಜಕಾರಣವಷ್ಟೇ,

ರಂಗಾಯಣಕ್ಕೆ ಬಂದ ಪ್ರಾರಂಭದಲ್ಲಿ ನೀನು ಏನೇನೋ ಸಾಧಿಸ ಬಯಸಿದ್ದೆ ಏನೇನೋ ಕನಸುಗಳನ್ನು ಹೇಳುತ್ತಿದ್ದೆ, ಹಿರಿಯ ನಟರೂ ನಿನ್ನ ಜೊತೆಗೇ ಇದ್ದರು. ಅನೇಕ ಕೆಲಸಗಳನ್ನು ಅತ್ಯುತ್ಸಾಹದಿಂದ ಎಂಬಂತೆ ಮಾಡತೊಡಗಿದ್ದೆ. ಅದರ ಫಲವೇ ಆರಂಭದ ಭೈರಪ್ಪನವರ “ಪರ್ವ” ನಾಟಕ. ಅದರ ನಿರ್ದೇಶಕರು ಪ್ರಕಾಶ್ ಬೆಳವಾಡಿ,
ಆದರೆ ಪರ್ವ ನಾಟಕ ತುಂಬ ಚೆನ್ನಾಗಿ ಬಂದಿತ್ತು. ಬೈರಪ್ಪನವರ ಕಡುವಿರೋಧಿಗಳೂ ಒಪ್ಪಿಕೊಳ್ಳುವ ಕೃತಿಗಳಲ್ಲಿ ಪರ್ವ ಕೂಡಾ ಒಂದು. ರಂಗಾಯಣದದಲ್ಲಿ ಅದು ಸ್ತ್ರೀ ಸಂವೇದನೆಗಳ ಉತ್ತಮ ರಂಗ ಪ್ರಯೋಗವಾಗಿ ಮೂಡಿತ್ತು. ಅದರ ಬಗ್ಗೆ ನಾನು ಬರೆದೆ ಕೂಡಾ ಬಹುಷಃ ಅವಧಿ ಬ್ಲಾಗ್ ನಲ್ಲಿ ಅದು ಈಗಲೂ ಇದೆ.

ಆಗಲೂ ನಿನ್ನೊಂದಿಗೆ ಮೂರು ವರ್ಷಗಳ ಕಾಲ ಎಲ್ಲ ರಾಜಕಾರಣ ಬದಿಗಿಟ್ಟು ಒಳ್ಳೆಯ ಕೃತಿಗಳನ್ನು ಕೊಡು. ಕೊಡಗಿನ ಹರದಾಸ ಅಪ್ಪಚ್ಚ ಅಂಥವರನ್ನು ಹೊರ ಜಗತ್ತಿಗೆ ಪರಿಚಯಿಸು ಎಂದೆ… ಇರಲಿ ನಾನು ಹೇಳಿದ ಮಾತ್ರಕ್ಕೆ ಅದನ್ನೆಲ್ಲ ಮಾಡಬೇಕೆಂದೇನೂ ಇಲ್ಲ..
ಆದರೆ ದಿನಗಳೆದಂತೆ ನಿನ್ನ ದಾರಿಯೇ ಬೇರೆಯಾಯಿತು, ಅಥವಾ ಮೊದಲೇ ನಿರ್ಧರಿಸಿಕೊಂಡಿದ್ದೆಯೋ ಏನೋ… ನಾನೇ ತಪ್ಪಿರಬಹುದು.

ರಂಗಾಯಣ ಬಿಜೆಪಿ ಕಾರ್ಯಾಲಯವಾಯಿತು, ಹಿಂದುತ್ವ ಅಮಲೇರಿಸಿಕೊಂಡವನಂತೆ ವರ್ತಿಸತೊಗಿದೆ. ಅದು ಬಿ.ವಿ ಕಾರಂತರಂಥವರು ಕುಳಿತಿದ್ದ ಕುರ್ಚಿ ಎನ್ನುವುದೂ ಮರೆತುಹೋಯಿತು.
ಎಗ್ಗಿಲ್ಲದ ನಡವಳಿಕೆಗಳನ್ನು ಪ್ರಾರಂಭಿಸಿದೆ.

ಯಾವುದೇ ಸರ್ಕಾರ ಇರಲಿ ಅದು ಸಂಘ ಸಂಸ್ಥೆಗಳಿಗೆ ಮುಖ್ಯಸ್ಥರನ್ನು ಆಯ್ಕೆ ಮಾಡುವಾಗ ತನ್ನ ಸಿದ್ಧಾಂತಗಳಿಗೆ ಹತ್ತಿರವಿರುವವರನ್ನು ಆಯ್ಕೆ ಮಾಡುತ್ತದೆ, ಈಗ ಇರುವ ಉಳಿದ ರಂಗಾಯಣಗಳವರೂ ಅದೇ ರೀತಿಯವರೇ ಆದರೆ ಅವರು ಯಾರೂ ಸಾಂಸ್ಕೃತಿಕ ಶಿಸ್ತನ್ನು ತೀರಾ ಮೀರಿ ವರ್ತಿಸಲಿಲ್ಲ.

ನೀನು ನಿನ್ನ ಉದ್ದೇಶಗಳನ್ನು ಮುಚ್ಚಿಡಲಿಲ್ಲ. ನಿನ್ನ ರಾಜಕೀಯ ಆಕಾಂಕ್ಷೆಗಳಿಗೆ ರಂಗಾಯಣವನ್ನು ವೇದಿಕೆಯಾಗಿ ಬಳಸಿದೆ. ಅದು ಅತಿ ಆತ್ಮವಿಶ್ವಾಸದ ಫಲವೇ, ಹುಂಬತನವೇ ನೀನೇ ಹೇಳಬೇಕು. ಆದರೆ ಅದು ಅಧಃಪತನ….
ನಿನಗೆ ಸಿಕ್ಕಿದ್ದ ಅತ್ಯುತ್ತಮ ಅವಕಾಶವನ್ನು ಕೈಯಾರೆ ಮಣ್ಣುಪಾಲುಮಾಡಿದೆ. ಅದು ನಿನ್ನ ಸೋಲು.

ಆದರೆ ಗೆಳೆಯ ನಿನ್ನ ನೇರ ನಡವಳಿಕೆಯ ಬಗ್ಗೆ ನನಗೆ ಮೆಚ್ಚುಗೆ ಇದೆ. ನೀನು ಎಲ್ಲವನ್ನೂ ಮಾತಾಡಿದೆ… ಮಾಡಲು ಹೊರಟೆ,
ನಮ್ಮ ಸಾಂಸ್ಕೃತಿಕ ವಲಯದಲ್ಲಿ ನೂರಾರು ನಸುಗುನ್ನಿಗಳಿದ್ದಾರೆ, ಅವರು ನಿನ್ನೊಂದಿಗೂ ತಾಳ ಹಾಕುತ್ತ ನಕ್ಕವರು, ನಾಳೆ ಭೂಮಿಗೀತದಲ್ಲಿ ಮೊದಲ ಧೀಂಗಣ ಹಾಕಬಲ್ಲವರು….
ಅವರೆಲ್ಲರಿಗಿಂತ ನಾನು ನಿನ್ನನ್ನು ನಂಬುತ್ತೇನೆ..

ಪರ್ವ ನಾಟಕದ ನಂತರ ನಾನು ರಂಗಾಯಣಕ್ಕೆ ಬರಲೇ ಇಲ್ಲ. ಟಿಪ್ಪು ನಾಟಕಕ್ಕೆ ನೀನೇ ಕರೆದೆ ಬರಬೇಕು ಅನ್ನಿಸಲಿಲ್ಲ .
ದ್ವೇಷದಿಂದ ಹುಟ್ಟಿದ್ದು ಕಲೆಯಾಗಲಾರದು ಅನ್ನಿಸಿತು..

ನೀನು ಮಹತ್ವಾಕಾಂಕ್ಷಿ…. ರಂಗಭೂಮಿಗಿಂತ ರಾಜಕಾರಣದಲ್ಲಿ ಮಹತ್ವಾಕಾಂಕ್ಷಿ…
ಆದರೆ ದಿನಕಳೆದಂತೆ …ನಾದಿರ್ ಷಾ….ನಂತಾದೆ..
ಹಕೀಮ್ ಅಲಾವಿ ಖಾನ್ ನಿನಗೆ ದೊರಕಲಿ….
ಕಣ್ಣು ಮುಚ್ಚಿ ಯೋಚಿಸಿವುದೊಂದೇ
ಕಣ್ಣುಗಳನ್ನು ಪಡೆಯುವ ಮಾರ್ಗ ಎಂಬ ಅರಿವು ನಿನಗೆ ಬರಲಿ,
ನೋಯಿಸಿದ್ದಕ್ಕೆ ಕ್ಷಮಿಸು..
– ಪ್ರಸಾದ್ ರಕ್ಷಿದಿ

Leave a Reply