ಅಮೆಜಾನ್ 30ನೇ ವರ್ಷದ ಕೊಡುಗೆ ಕೊಡುತ್ತಿರುವುದು ನಿಜವೇ?

5 years ago

ವಾಟ್ಸಪ್ ನಲ್ಲಿ ಅಮೆಜಾನ್ 30ನೇ ಆಫರ್ ಕೊಡುಗೆ ಕೊಡುತ್ತಿದೆ ಎಂದು ಸಂದೇಶ ಒಂದು ಹರಿದಾಡುತ್ತಿದೆ.  ಆದರೆ ಇದು ನಕಲಿ. ಇದನ್ನು ಅನವಶ್ಯಕವಾಗಿ ಹಂಚಿಕೊಳ್ಳುವ ಮೂಲಕ ಯಾರೂ ಸಮಯ ಹಾಳುಮಾಡಿಕೊಳ್ಳದೆ ನಿಮ್ಮ ಸಂಪರ್ಕದಲ್ಲಿರುವವರ ಸಮಯವನ್ನೂ ಹಾಳುಮಾಡದೇ ಇದ್ದರೆ ಒಳಿತು.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸತ್ಯಕ್ಕಿಂತ ಸುಳ್ಳೇ ಹೆಚ್ಚಾಗಿ ಸತ್ಯದ ಪೋಷಾಕು ಧರಿಸಿ ಸಂಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ತಮ್ಮ ಜಾಲತಾಣಗಳಿಗೆ ಬಂದ ಸಂದೇಶಗಳನ್ನು ಯಾಂತ್ರಿಕವಾಗಿ ಫಾರ್ವರ್ಡ್ ಮಾಡುವ ಮುನ್ನ ಆಲೋಚಿಸಬೇಕಿದೆ.

ವಿಶೇಷವೆಂದರೆ Amazon ಆನ್ ಲೈನ್ ಶಾಪಿಂಗ್ ಆಪ್ ಹೆಸರನ್ನು ಬಳಸಿ 30 ವರ್ಷದ ವಾರ್ಷಿಕೋತ್ಸವ ಕೊಡುಗೆಗಳನ್ನು ನೀಡಲಾಗುತ್ತಿದೆ ಎಂದು ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗಿದೆ. ಈ ಸಂದೇಶವನ್ನು ವಾಟ್ಸಪ್ ಗಳಲ್ಲಿ ವ್ಯಾಪಕವಾಗಿ ಹಂಚಿಕೆ ಮಾಡಲಾಗಿದೆ.

ಹಂಚಿಕೆಯಾಗಿರುವ ಲಿಂಕನ್ನು ಕ್ಲಿಕ್ ಮಾಡಿದಾಗ ಹೊಸದಾದ ವೆಬ್ ತಾಣವೊಂದು ತೆರೆದುಕೊಳ್ಳುತ್ತದೆ. ಇದರಲ್ಲಿ ಸಮೀಕ್ಷೆಯೊಂದನ್ನು ಮಾಡಲಾಗುತ್ತದೆ. ಇದರಲ್ಲಿ ಅಮೆಜಾನ್ ಲೋಗೋವನ್ನೇ ಬಳಸಲಾಗಿದೆ. ಈ ಮೂಲಕ ಅಕ್ಷರಸ್ಥರು ಕೂಡ ಮೂರ್ಖರಾಗುತ್ತಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ನಂತರ  1-9ರ ವರೆಗಿನ ಬಾಕ್ಸ್ ಅನ್ನು ಆಯ್ಕೆ ಮಾಡಲು ಅವಕಾಶ ಇದೆ. ಅದರಲ್ಲಿ ಬಹುಮಾನ ಗೆದ್ದ ಸಂದೇಶವನ್ನು ತೋರಿಸಲಾಗುತ್ತದೆ. ಬಹುಮಾನವನ್ನು ಪಡೆಯಲು 5 ವಾಟ್ಸಪ್ ಗುಂಪು ಅಥವಾ 20 ಸ್ನೇಹಿರಿಗೆ ಲಿಂಕ್ ಅನ್ನು ಹಂಚಿಕೊಳ್ಳಿ ಎಂಬ ಸಂದೇಶ ಬರುತ್ತದೆ.

ಆದರೆ, ಇದು ನಕಲಿಯಾಗಿದ್ದು ಅಂತಹ ಯಾವುದೇ ಕೊಡುಗೆ, ಬಹುಮಾನವನ್ನು ಅಮೆಜಾನ್ ನೀಡುತ್ತಿಲ್ಲ  ಮತ್ತು ಇದುವರೆಗೆ ಯಾರಿಗೂ ಯಾವುದೇ ಬಹುಮಾನಗಳು ಬಂದಿಲ್ಲ. ಆದರೂ ಜಾಲತಾಣಿಗರು ಇಂತಹ ಬಹುಮಾನಗಳ ಆಸೆಗೆ ಬಿದ್ದು ಎಲ್ಲ ಸಮೀಕ್ಷೆಗಳಲ್ಲಿ ಭಾಗವಹಿಸಿ ಮೋಸಹೋಗುತ್ತಾರೆ. ಆದರೆ ಅಷ್ಟಕ್ಕೆ ಸುಮ್ಮನಾಗದೆ ತಾವು ಮೋಸಹೋದಂತೆ ಉಳಿದವರೂ ಯಾಮಾರಲಿ ಎಂದು ಅದೇ ಸಂದೇಶವನ್ನು ಫಾರ್ವರ್ಡ್ ಮಾಡುತ್ತಾರೆ.

ಆದರೆ, ಮಾಡಬೇಕಾದ ಕೆಲಸವೆಂದರೆ, ತಮಗೆ ಆದ ಮೋಸವನ್ನು ತಮಗೆ ಸಂದೇಶ ಕಳುಹಿಸಿದವರಿಗೆ ಕಳಿಸಬೇಕು. ಜೊತೆಗೆ ಇಂತಹ ಸುಳ್ಳುಗಳನ್ನು ಹರಡಲಾಗುತ್ತಿದೆ ಎಂದು ಇದೇ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಕು. ಸಾಧ್ಯವಾದರೆ ಈ ಕುರಿತು ಸೈಬರ್ ಕೇಂದ್ರದಲ್ಲಿ ಮತ್ತು ಸಂಬಂಧಿಸಿದ ಕಂಪನಿಗಳಿಗೆ ದೂರು ನೀಡಬೇಕು. ಹೀಗಾದಲ್ಲಿ ಸುಳ್ಳುಗಳ ಹರಡುವಿಕೆಯನ್ನು ತಡೆಯಬಹುದು.

Leave a Reply