ದೆಹಲಿ/ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ರಾಹುಲ್ ಗಾಂಧಿ ನೇತೃತ್ವದ ಭಾರತ ಐಕ್ಯತಾ ಯಾತ್ರೆಯಲ್ಲಿ ಭಾರೀ ಜನ ಸೇರಿದ್ದಾರೆ ಎಂದು ಸಾರಲು ನೈಜೀರಿಯಾದಲ್ಲಿ ಭಾರೀ ಪ್ರಮಾಣದಲ್ಲಿ ಜನ ಸೇರಿದ್ದ ಚಿತ್ರವೊಂದನ್ನು ಮಧ್ಯಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಜಿತೇಂದ್ರ ಪಟ್ವಾರಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಕೆಲವು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಈ ಕುರಿತು ಟ್ವಿಟರ್ ನಲ್ಲಿ ವ್ಯಾಪಕವಾದ ಟೀಕೆ ಕೂಡ ವ್ಯಕ್ತವಾಗಿದ್ದು, @FabulasGuy ಲಾಲಾ ಎಂಬುವವರು ಈ ಚಿತ್ರ ಸ್ಟಾಕ್ ಫೋಟೋ ಮತ್ತು ಇದನ್ನು ಮೂಲತಃ ನೈಜೀರಿಯಾದಲ್ಲಿ ಚಿತ್ರೀಕರಿಸಲಾಗಿದೆ ಮತ್ತು ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಅಲ್ಲ ಎಂದಿದ್ದಾರೆ.
ಚಿತ್ರದ ರಿವರ್ಸ್-ಸರ್ಚ್ ನಲ್ಲಿ ಕೂಡ ಸದರಿ ಚಿತ್ರ ಭಾರತ್ ಜೋಡೋ ಯಾತ್ರೆಯ ಫೋಟೋ ಅಲ್ಲ ಎಂಬುದು ವ್ಯಕ್ತವಾಗಿದ್ದು, ಇದನ್ನು ನೈಜೀರಿಯಾದಲ್ಲಿ ಅಜುಸಾ ಸ್ಟ್ರೀಟ್ ರಿವೈವಲ್ ಕ್ರುಸೇಡ್ ಸಮಯದಲ್ಲಿ ಸೆರೆಹಿಡಿದಿರುವುದು ಖಾತ್ರಿಯಾಗಿದೆ. ಮೂಲ ಚಿತ್ರದಲ್ಲಿದ್ದ ಫ್ಲಡ್ ಲೈಟ್‌ಗಳನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ತೆಗೆಯಲಾಗಿದೆ.




