ಆಳಂದ ಮತಗಳ್ಳತನ: ಬಿಜೆಪಿ ನಾಯಕರಿಗೆ ತೀವ್ರ ಮುಖಭಂಗ

7 months ago

ಬೆಂಗಳೂರು: ಮತಗಳ್ಳತನದ ಬಗ್ಗೆ ಸಮರ ಸಾರಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕರ್ನಾಟಕದ ಆಳಂದ ವಿಧಾನಸಭೆ ಕ್ಷೇತ್ರಗಳಲ್ಲಿ ನಾಪತ್ತೆಯಾಗಿರುವ ಮತಗಳ ಕುರಿತಂತೆ ನೀಡಿರುವ ಮಾಹಿತಿಯನ್ನು ಚುನಾವಣಾ ಆಯೋಗ ಒಪ್ಪಿಕೊಂಡಿದೆ. 

ಆದರೆ,ರಾಹುಲ್‌ಗಾಂಧಿ ಮಾಡಿರುವ ಆರೋಪಕ್ಕೆ ಚುನಾವಣಾ ಆಯೋಗದಿಂದ ಸಮರ್ಪಕ ಸ್ಪಷ್ಟನೆ ಸಿಕ್ಕಿಲ್ಲ ಎಂದು ಕಾಂಗ್ರೆಸ್‌‍ ಆಕ್ಷೇಪಿಸಿದ್ದು, ಸಿಐಡಿ ತನಿಖೆಗೆ ಅಗತ್ಯವಾದ ಮಾಹಿತಿ ನೀಡದೆ ಸುಳ್ಳು ಹೇಳಲಾಗುತ್ತಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

ರಾಹುಲ್ ಗಾಂಧಿ ಮಾಡಿರುವ ಆರೋಪದ ಬಗ್ಗೆ ಕರ್ನಾಟಕದ ಕೇಂದ್ರ ಮುಖ್ಯ ಚುನಾವಣಾ ಆಯುಕ್ತರು ವಿವರಣೆ ನೀಡಿದ್ದು, ಅದನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ರಾಹುಲ್ ಗಾಂಧಿ ಮಾಡಿರುವ ಆರೋಪದ ಬಗ್ಗೆ ಒಟ್ಟು ಆರು ಅಂಶಗಳ ಕುರಿತಂತೆ ವಿವರಣೆ ನೀಡಿದೆ. ಆದರೆ ಇದರಲ್ಲಿ ಆಯೋಗ ಯಾವ ಕ್ರಮ ಕೈಗೊಂಡಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

1) ಕರ್ನಾಟಕದ 46-ಆಳಂದ ಎಲ್‌ಎಸಿಯಲ್ಲಿ, ಮತದಾರರ ಹೆಸರುಗಳನ್ನು ಅಳಿಸಲು, ಆನ್‌ಲೈನ್‌ನಲ್ಲಿ ಫಾರ್ಮ್ 7 ರಲ್ಲಿ 6,018 ಅರ್ಜಿಗಳನ್ನು EROಗೆ ಸಲ್ಲಿಸಲಾಗಿತ್ತು. ಡಿಸೆಂಬರ್ 2022 ರಲ್ಲಿ, NVSP, VHA, GARUDA ಅಪ್ಲಿಕೇಶನ್‌ಗಳಂತಹ ವಿವಿಧ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಮತಗಳ ಡಿಲೀಟ್ ಮಾಡಲು ಅರ್ಜಿ ಸಲ್ಲಿಕೆ ಆಗಿತ್ತು. ಇಷ್ಟು ದೊಡ್ಡ ಸಂಖ್ಯೆಯ ಅರ್ಜಿಗಳ ನೈಜತೆಯನ್ನು ಅನುಮಾನಿಸಿ, ಪ್ರತಿ ಅರ್ಜಿಯ ಪರಿಶೀಲನೆಯನ್ನು, ಚುನಾವಣಾ ರಿಜಿಸ್ಟ್ರೇಷನ್ ಅಧಿಕಾರಿಗಳು ಹಾಗೂ ಹೆಚ್ಚುವರಿ ಮತಪಟ್ಟಿ ಅಧಿಕಾರಿ ಹಾಗೂ ಬೂತ್‌ ಮಟ್ಟದ ಚುನಾವಣಾಧಿಕಾರಿಗಳು ( ERO/AERO/BLOS) ನಡೆಸಿದರು.

2) ತನಿಖೆ ವೇಳೆ ಕಂಡು ಬಂದ ಅಂಶದ ಆಧಾರದ ಮೇಲೆ 24 ಅಪ್ಲಿಕೇಶನ್ ಮಾತ್ರ ನೈಜತೆಯಿಂದ ಕೂಡಿದ್ದವು. ಉಳಿದಂತೆ 5994 ಅಪ್ಲಿಕೇಶನ್ ಸರಿ ಇರಲಿಲ್ಲ. 24 ಅಪ್ಲೀಕೇಷನ್ ಗಳನ್ನು ಮಾನ್ಯ ಮಾಡಲಾಯಿತು. ಉಳಿದಂತೆ 5994 ಅಪ್ಲೀಕೇಷನ್ ಗಳನ್ನು ವಜಾ ಮಾಡಲಾಗಿದೆ. ಆದರೆ ಡಿಲೀಟ್ ಮಾಡಿಲ್ಲ.

3) ತನಿಖೆಯ ಅಂಶಗಳೊಂದಿಗೆ, ಬೂತ್ ಮಟ್ಟದ ಅಧಿಕಾರಿಗಳು ಹಾಗೂ ಎಲೆಕ್ಷನ್ ರಿಜಿಸ್ಟಾರ್ ಅಧಿಕಾರಿಗಳು, ಕಲಬುರಗಿ ಜಿಲ್ಲೆಯ ಅಳಂದ ಪೊಲೀಸ್ ಸ್ಟೇಷನ್ ನಲ್ಲಿ 21-02-2023 ರಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.

4) ಭಾರತೀಯ ಚುನಾವಣಾ ಆಯೋಗ ನೀಡಿದ ಸೂಚನೆಗಳ ಆಧಾರದ ಮೇಲೆ, ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ 06.09.2023 ರಂದು ತನಿಖೆಯನ್ನು ಪೂರ್ಣಗೊಳಿಸಲು, ಭಾರತಿಯ ಚುನಾವಣಾ ಆಯೋಗದಲ್ಲಿ ಲಭ್ಯವಿರುವ ಎಲ್ಲಾ ಮಾಹಿತಿಯನ್ನು ಕಲಬುರಗಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗೆ ಹಸ್ತಾಂತರಿಸಲಾಗಿದೆ.

ಹಂಚಿಕೆಯ ಮಾಹಿತಿಯು ಫಾರ್ಮ್ ಉಲ್ಲೇಖ ಸಂಖ್ಯೆ, ಆಕ್ಷೇಪಣೆ ಸಲ್ಲಿಸಿದವರ ಹೆಸರು, ಅವರ ಇಪಿಐಸಿ ಸಂಖ್ಯೆ ಮತ್ತು ಲಾಗಿನ್ ಮಾಡಲು ಬಳಸಿದ ಮೊಬೈಲ್ ಸಂಖ್ಯೆ ಮತ್ತು ಪ್ರಕ್ರಿಯೆಗಾಗಿ ಆಕ್ಷೇಪಣೆದಾರರು ಒದಗಿಸಿದ ಮೊಬೈಲ್ ಸಂಖ್ಯೆ, ಸಾಫ್ಟ್‌ವೇರ್ ಅಪ್ಲಿಕೇಶನ್ ಮಾಧ್ಯಮ, ಐಪಿ ವಿಳಾಸ, ಅರ್ಜಿದಾರರ ಸ್ಥಳ, ನಮೂನೆ ಸಲ್ಲಿಕೆ ದಿನಾಂಕ ಮತ್ತು ಸಮಯ ಮತ್ತು ಬಳಕೆದಾರ ರಚನೆ ದಿನಾಂಕ ಸೇರಿದಂತೆ ಆಕ್ಷೇಪಣೆದಾರರ ವಿವರಗಳನ್ನು ಒಳಗೊಂಡಿತ್ತು.

5) ವಿನಂತಿಸಿದ ಮಾಹಿತಿಯನ್ನು ಒದಗಿಸಿದ ನಂತರ, ತನಿಖೆಯ ಪ್ರಗತಿಯನ್ನು ಪರಿಶೀಲಿಸಲು ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ತನಿಖಾಧಿಕಾರಿ ಮತ್ತು ಪೊಲೀಸರ ಸೈಬರ್ ಭದ್ರತಾ ತಜ್ಞರೊಂದಿಗೆ ಸಭೆಗಳನ್ನು ನಡೆಸಲಾಗಿದೆ.

6) ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ, ಈಗಾಗಲೇ ತನಿಖಾ ಸಂಸ್ಥೆಗೆ ಇತರ ಸಹಾಯ/ಮಾಹಿತಿ/ದಾಖಲೆಗಳನ್ನು ಒದಗಿಸಲಾಗುತ್ತಿದೆ.

ಆಯೋಗ ನೀಡಿದ ಈ ಉತ್ತರಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌‍ ಕಚೇರಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ಖರ್ಗೆ, ಅಳಂದ ಕ್ಷೇತ್ರದ ಶಾಸಕ ಬಿ.ಆರ್‌.ಪಾಟೀಲ್‌ ಜಂಟಿ ಸುದ್ದಿಗೋಷ್ಠಿಯಲ್ಲಿ ರಾಹುಲ್‌ಗಾಂಧಿ ಆರೋಪಕ್ಕೆ ಪೂರಕ ದಾಖಲೆಗಳನ್ನು ಬಿಡುಗಡೆ ಮಾಡಿದರು.

ಆರಂಭದಲ್ಲಿ ಮಾತನಾಡಿದ ಬಿ.ಆರ್‌. ಪಾಟೀಲ್‌ ಅವರು, 2023ರ ವಿಧಾನಸಭೆ ಚುನಾವಣೆಗೂ ಮುನ್ನ ತಮ್ಮ ಪಕ್ಷದ ಕಾರ್ಯಕರ್ತ ವಿಜಯ್‌ಕುಮಾರ್‌ ಕರೆ ಮಾಡಿ, ನನ್ನ ಹೆಸರನ್ನು ಮತದಾರರ ಪಟ್ಟಿಯಲ್ಲಿ ಡಿಲೀಟ್‌ ಮಾಡಲಾಗಿದೆ ಎಂದು ಬಿಎಲ್‌ಓ ಹೇಳಿರುವುದಾಗಿ ತಿಳಿಸಿದರು. ಆತಂಕಗೊಂಡ ತಾವು ಪರಿಶೀಲಿಸಿದಾಗ 6018 ಹೆಸರುಗಳ ಡಿಲಿಟ್‌ಗೆ ಅರ್ಜಿ ಬಂದಿರುವುದು ಪತ್ತೆಯಾಯಿತು. ಈ ಬಗ್ಗೆ ಕಲಬುರಗಿ ಜಿಲ್ಲಾಧಿಕಾರಿ, ಆಳಂದ ತಹಶೀಲ್ದಾರ್‌, ರಾಜ್ಯ ಮುಖ್ಯಚುನಾವಣಾಧಿಕಾರಿ, ಕೇಂದ್ರ ಮುಖ್ಯ ಚುನಾವಣಾಧಿಕಾರಿಗಳಿಗೆ ಹಂತಹಂತವಾಗಿ ದೂರು ನೀಡಲಾಯಿತು. ಆಗ ಹೆಸರು ಡಿಲಿಟ್‌ ಮಾಡುವ ಪ್ರಕ್ರಿಯೆ ನಿಲ್ಲಿಸಿದ್ದರು. ಇಲ್ಲದೇ ಹೋದರೆ ಹೆಸರುಗಳು ಡಿಲೀಟ್‌ ಆಗಿ ನಾನು ಸೋಲುತ್ತಿದ್ದೆ ಎಂದರು.

ಮತದಾರರ ಹೆಸರುಗಳನ್ನು ಡಿಲೀಟ್‌ ಮಾಡಲು 6118 ಸಲ್ಲಿಕೆಯಾಗಿದ್ದವು. ಅದರ ತನಿಖೆಗೆ ಆಯೋಗ ಸಹಕರಿಸಿಲ್ಲ. ತಾಂತ್ರಿಕ ಮಾಹಿತಿ ಆಧರಿಸಿ ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸಿದಾಗ ಫಾರಂ ನಂ-7 ಜೊತೆಯಲ್ಲಿ ನೀಡಲಾಗಿರುವ ಮೊಬೈಲ್‌ ನಂಬರ್‌ಗಳು ಗುಜರಾತ್‌, ಮಧ್ಯಪ್ರದೇಶ, ಉತ್ತರಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಿಗೆ ಸೇರಿದ್ದಾಗಿವೆ ಎಂದರು.

ಇನ್ನು ಆಯೋಗದ ಮಾಹಿತಿ ಬಿಜೆಪಿ ಮತ್ತು ಅದರ ನಾಯಕರನ್ನು ತೀವ್ರ ಮುಜುಗರಕ್ಕೆ ಸಿಲುಕಿಸಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವದಲ್ಲಿ ಇದ್ದವು. ಆದರೆ ಇದನ್ನು ಹಿನ್ನೆಲೆಗೆ ಸರಿಸಿದ್ದ ಬಿಜೆಪಿ ನಾಯಕರು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸುದ್ದಿ ಗೋಷ್ಠಿಯಲ್ಲಿ ಪ್ರತ್ಯಾರೋಪದಲ್ಲಿ ನಿರತರಾಗಿದ್ದರು. ಇದೀಗ ಆಯೋಗದ ಹೇಳಿಕೆ ಅವರಿಗೆ ತಿರುಗು ಬಾಣವಾಗಿ ನಾಟಿದಂತಾಗಿದೆ.

Leave a Reply