ನಟ ರವಿರಾಜ್ ಗೆ ಗುಂಡು ತಗುಲಿ ಆಸ್ಪತ್ರೆಗೆ ದಾಖಲು

3 years ago

ಬೆಂಗಳೂರು: ಕನಸಿನ ರಾಣಿ ಮಾಲಾಶ್ರೀ ನಾಯಕಿಯಾಗಿ ನಟಿಸಿರುವ ‘ರಾಜಾ ಕೆಂಪು ರೋಜ’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದ ರವಿರಾಜ್ ಗೆ ಗುಂಡು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮನೆಯಲ್ಲಿದ್ದ ಪಿಸ್ತೂಲ್ ಅನ್ನು ನವೀಕರಣಕ್ಕಾಗಿ ಸ್ವಚ್ಚಗೊಳಿಸುತ್ತಿದ್ದಾಗ ಆಕಸ್ಮಿಕವಾಗಿ ಸಿಡಿದ ಗುಂಡಿನಿಂದ ರವಿರಾಜ್ ಅವರ ತಲೆಗೆ ಗಾಯವಾಗಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ದಾವಣಗೆರೆ ಮೂಲದ ರವಿರಾಜ್ ಚಿನ್ನದ ವ್ಯಾಪಾರಿ ಆಗಿದ್ದು ಸ್ವಯಂ ರಕ್ಷಣೆಗೆ ಪರವಾನಿಗೆ ಪಡೆದ ಪಿಸ್ತೂಲ್ ಹೊಂದಿದ್ದಾರೆ. ಎಂಸಿಸಿ ಬಿ ಬ್ಲಾಕ್ ನಿವಾಸಿ ಆಗಿರುವ ಅವರು ನಿನ್ನೆ ಸಂಜೆ ಪಿಸ್ತೂಲಿನ ಲೈಸೆನ್ಸ್ ನವೀಕರಣಕ್ಕೆ ಹೋಗಬೇಕಿತ್ತು. ಹಾಗಾಗಿ ಅದನ್ನು ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಟ್ರಿಗರ್ ಒತ್ತಿದ ಪರಿಣಾಮ ಗುಂಡು ಸಿಡಿದಿದೆ. ಹಣೆಯ ಭಾಗಕ್ಕೆ ಗುಂಡು ಹೊಕ್ಕಿದೆ. ಕೂಡಲೇ ಅವರನ್ನು ಸಿಟಿ ಸೆಂಟ್ರಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಎಲ್. ಸುಬ್ಬರಾವ್ ನೇತೃತ್ವದ ತಂಡ ತುರ್ತು ಚಿಕಿತ್ಸೆ ನಡೆಸಿ, ಯಶಸ್ಸಿಯಾಗಿ ಗುಂಡು ಹೊರತಗೆದಿದೆ. ತಲೆಬುರುಡೆಯ ಮೂಳೆಯಲ್ಲಿ ಗುಂಡು ಹೊಕ್ಕಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ರವಿರಾಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಿನಿಮಾ ರಂಗದಲ್ಲಿ ರವಿರಾಜ್ ಎಂದೇ ಗುರುತಿಸಿಕೊಂಡಿದ್ದ ಅವರು ದಾವಣಗೆರೆ ಜನತೆಗೆ ಮಂಜುನಾಥ ರೇವಣ್ಕರ್ ಎಂದು ಪರಿಚಿತರು.

ಸಿನಿಮಾ ರಂಗದಲ್ಲಿ ನಟರಾಗಿ, ನಾಯಕ ನಟರಾಗಿ ನಂತರ ಒಂದು ಸಿನಿಮಾವನ್ನೂ ನಿರ್ಮಾಣ ಮಾಡಿದ್ದಾರೆ. ಆನಂತರ ಸಿನಿಮಾ ರಂಗದಿಂದ ದೂರವಾಗಿ ತಮ್ಮ ವೃತ್ತಿಯಲ್ಲೇ ಮುಂದುವರೆದಿದ್ದರು.

ಸಿನಿಮಾ ರಂಗದಿಂದ ದೂರವಾಗಿದ್ದರೂ, ಸಿನಿಮಾಗಳಿಂದ ಅವರು ದೂರವಾಗಿರಲಿಲ್ಲ. ಆಗಾಗ್ಗೆ ಸಿನಿಮಾ ಸಂಬಂಧಿ ಕಾರ್ಯಕ್ರಮಗಳಲ್ಲೂ ಭಾಗಿಯಾಗುತ್ತಿದ್ದರು.

Leave a Reply