15 ಸಾವಿರ ಕೋಟಿ ರೂಪಾಯಿ ಮೊತ್ತದ 2270 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಒಪ್ಪಂದ
ಬೆಂಗಳೂರು: ರಾಜ್ಯದ ವಿದ್ಯುತ್ ಕ್ಷಾಮಕ್ಕೆ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ರಾಜ್ಯ ಸರ್ಕಾರ ಜಲ ವಿದ್ಯುತ್, ಸೋಲಾರ್ ಸೇರಿದಂತೆ 15 ಸಾವಿರ ಕೋಟಿ ರೂಪಾಯಿ ಮೊತ್ತದ 2270 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡಿದೆ.
ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ಸಮ್ಮುಖದಲ್ಲಿ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಹಾಗೂ ತೆಹ್ರಿ ಹೈಡ್ರೊ ಡೆವಲಪ್ಮೆಂಟ್ ಕಾರ್ಪೊರೇಶನ್ ನತಾಂತ್ರಿಕ ನಿರ್ದೇಶಕ ಭೂಪೇಂದ್ರ ಗುಪ್ತ ಅವರು ಪರಸ್ಪರ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿದರು.
ಇದಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕೆ.ಜೆ.ಜಾರ್ಜ್, ರಾಜ್ಯ ವಿದ್ಯುತ್ ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಅನೇಕ ಕ್ರಮಗಳಿಗೆ ಮುಂದಾಗಿದೆ. ನಮ್ಮಲ್ಲಿ ಲಭ್ಯವಿರುವ ಮೂಲಗಳಿಂದ ವಿದ್ಯುತ್ ಉತ್ಪಾದಿಸಿ ಕೊರತೆ ನೀಗಿಸಲು ಪ್ರಯತ್ನ ನಡೆಸಲಾಗಿದೆ ಎಂದರು.
ಈ ಕುರಿತು ಕೇಂದ್ರ ಇಂಧನ ಸಚಿವ ಆರ್.ಕೆ.ಸಿಂಗ್ ಹಾಗೂ ಟಿಎಚ್ಡಿಸಿಎಲ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಆರ್.ಕೆ.ಬಿಷ್ಣೋಯ್ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಚರ್ಚೆ ನಡೆಸಲಾಗಿತ್ತು. ಒಪ್ಪಂದದಂತೆ ಕದ್ರಾ ಜಲಾಶಯದಲ್ಲಿ 100 ಮೆಗಾವಾಟ್ ಸಾಮರ್ಥ್ಯದ ‘ಫ್ಲೋಟಿಂಗ್ ಸೋಲಾರ್, 170 ಮೆಗಾವ್ಯಾಟ್ ಸಾಮರ್ಥ್ಯದ ನೆಲದಡಿಯ ವಿದ್ಯುತ್ ಯೋಜನೆ, ಕೆಪಿಸಿಎಲ್ ಆವರಣದಲ್ಲಿ ಮೇಲ್ಛಾವಣಿ ಸೌರ ಸ್ಥಾವರ, ವಾರಾಹಿಯಲ್ಲಿ 1,500 ಮೆಗಾವಾಟ್ ಸಾಮರ್ಥ್ಯದ ‘ಪಂಪ್ಡ್ ಸ್ಟೋರೇಜ್’ಘಟಕ ಸ್ಥಾಪನೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಬೀದರ್ನಲ್ಲಿ 500 ಮೆಗಾವಾಟ್ ಸಾಮರ್ಥ್ಯದ ಸೋಲಾರ್ ಪಾರ್ಕ್ ಸ್ಥಾಪಿಸಲು ಕ್ರೆಡಲ್ ಸಂಸ್ಥೆ ಹಾಗೂ ಟಿಎಚ್ಡಿಸಿಎಲ್ ಮಧ್ಯೆ ಪ್ರತ್ಯೇಕ ಒಪ್ಪಂದ ಮಾಡಿಕೊಳ್ಳಲಾಯಿತು ಎಂದರು.
ಕೇಂದ್ರ ಸರ್ಕಾರದ ಟಿಎಚ್ಡಿಸಿಎಲ್ ಜತೆ ಮಾಡಿಕೊಂಡಿರುವ ಈ ಒಪ್ಪಂದ ರಾಜ್ಯದಲ್ಲಿ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು, ಕೊರತೆ ನೀಗಿಸಲು ಸಹಕಾರಿಯಾಗಲಿದೆ. ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ, ಯೋಜನೆಯ ತ್ವರಿತ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಹೇಳಿದರು.




