ಬೆಂಗಳೂರು : ಕುಡಿಯುವ ನೀರಿನ ಬೆಲೆ ಹೆಚ್ಚಳದ ಬಗ್ಗೆ ವರದಿ ನೀಡಲು ಸೂಚನೆ ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ನಗರದ ಕಾವೇರಿ ಭವನದಲ್ಲಿ ಬಿಬಿಎಂಪಿ, ಬಿಡಿಎ, ಬಿಡಬ್ಲ್ಯೂಎಸ್ಎಸ್ ಬಿ, ಬಿಎಂ ಆರ್ ಡಿ ಎ ಅಧಿಕಾರಿಗಳ ಜತೆ ಮಂಗಳವಾರ ಸಭೆ ನಡೆಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿ.ಕೆ. ಶಿವಕುಮಾರ್ ಅವರು, ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.
ವರದಿ ನೀಡಿದ ತಕ್ಷಣ ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ನೀರಿನ ಅಕ್ರಮ ಸಂಪರ್ಕಗಳ ಸಕ್ರಮೀಕರಣ, ನೀರಿನ ಸಂಪರ್ಕ ಹಾಗೂ ಬಳಕೆಯ ನಿಖರವಾದ ಲೆಕ್ಕವನ್ನು ಪಡೆಯಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
2014 ರಿಂದ ಇಲ್ಲಿಯ ತನಕ ಅಂದರೆ 11 ವರ್ಷಗಳಿಂದ ನಗರದಲ್ಲಿ ನೀರಿನ ಬಿಲ್ ಅನ್ನು ಹೆಚ್ಚಳ ಮಾಡಿಲ್ಲ. ಈ ಕಾರಣಕ್ಕೆ ಬಿಡ್ಬ್ಯೂಎಸ್ಎಸ್ ಬಿಗೆ ವರ್ಷಕ್ಕೆ 1 ಸಾವಿರ ಕೋಟಿ ನಷ್ಟವಾಗುತ್ತಿದೆ. ವಿದ್ಯುತ್ ಬಿಲ್ ಈ ಹಿಂದೆ 35 ಕೋಟಿಯಾಗುತ್ತಿತ್ತು. ಈ ಬಾರಿ 75 ಕೋಟಿಯಾಗಿದೆ. ಇತರೇ ಸೇವೆಗಳು, ಮಾನವ ಸಂಪನ್ಮೂಲ ವೆಚ್ಚ ಸೇರಿದಂತೆ ತಿಂಗಳಿಗೆ 85 ಕೋಟಿ ಹಣ ನಷ್ಟವಾಗುತ್ತಿದೆ ಎಂದರು.
ನೀರಿನ ಬಿಲ್ ಹೆಚ್ಚಳ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಕಾರಣಕ್ಕೆ ನಗರದ ಎಲ್ಲಾ ಶಾಸಕರ ಬಳಿ ಹೋಗಿ ಮಂಡಳಿಯವರು ಚರ್ಚೆ ನಡೆಸಿದ್ದಾರೆ. ಅಲ್ಲದೇ ನೀರಿನ ಜಾಲ ವಿಸ್ತರಣೆ ಮಾಡುವ ಸಲುವಾಗಿ ಅನೇಕ ಬ್ಯಾಂಕ್ ಗಳ ಬಳಿ ಸಾಲ ಕೇಳಲೂ ಆಗುತ್ತಿಲ್ಲ. ಬ್ಯಾಂಕ್ ಅವರು ಮಂಡಳಿ ನಷ್ಟದಲ್ಲಿದೆ ನಾವು ಸಹಾಯ ಮಾಡಲು ಆಗುವುದಿಲ್ಲ ಎನ್ನುತ್ತಿದ್ದಾರೆ. ನಮಗೆ ಹಣ ನೀಡುತ್ತಿರುವ ಜೈಕಾ ಸಂಸ್ಥೆ ಸೇರಿದಂತೆ ಹಲವಾರು ಸಂಸ್ಥೆಗಳು ನೆರವು ಬೇಕು ಎಂದಾದರೆ ಹಣ ವಾಪಸಾತಿಯ ಬಗ್ಗೆ ಭರವಸೆ ನೀಡಿ ಎಂದು ತಿಳಿಸುತ್ತಿದ್ದಾರೆ ಎಂದರು.
ಈ ಹಿಂದೆ ಕೊಳೆಗೇರಿ ಹಾಗೂ ಬಡವರ ಉಪಯೋಗಕ್ಕೆ ಸರ್ಕಾರ ರೂ.20 ಕೋಟಿ ಹಣ ಮೀಸಲಿಟ್ಟಿತ್ತು. ಹಿಂದಿನ ಬಿಜೆಪಿ ಸರ್ಕಾರ ಈ ಸಹಾಯಧನವನ್ನು ನಿಲ್ಲಿಸಿತ್ತು. ಇದನ್ನು ಮುಂದುವರೆಸಲಾಗುವುದು. ಬಡವರಿಗೆ ನೀರು ನೀಡಿದರೂ ಸಹ ಅದು ಕೂಡ ಲೆಕ್ಕಕ್ಕೆ ಸಿಗಬೇಕು. 1 ಪೈಸೆ ಹಣ ನೀಡಿಯಾದರೂ ಸಂಪರ್ಕ ನೀಡಬೇಕು. ಯಾರು ಎಷ್ಟು ನೀರು ಪಡೆಯುತ್ತಿದ್ದಾರೆ ಎನ್ನುವ ಲೆಕ್ಕ ಸರ್ಕಾರಕ್ಕೆ ಸಿಗಬೇಕು. ಅನೇಕ ಕಡೆ ಕೊಳೆಗೇರಿ ಹೆಸರಿನಲ್ಲಿ ಉಳ್ಳವರು ನೀರು ಪಡೆಯುತ್ತಿದ್ದಾರೆ ಎಂದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲರನ್ನು ಒಳಗೊಂಡಿರುವ ತೆರಿಗೆ ಪಾವತಿಗೆ ವ್ಯವಸ್ಥೆ ರೂಪಿಸಿರುವ ಮಾದರಿಯಲ್ಲಿ ನೀರಿನ ಸಂಪರ್ಕ, ಬಳಕೆಯಾಗುವ ನೀರಿನ ಬಗ್ಗೆ ನಿಖರ ಮಾಹಿತಿ ಸಿಗಬೇಕು ಎಂದು ಯೋಜನೆ ರೂಪಿಸಲಾಗಿದೆ. ಬಡವರು, ಶ್ರೀಮಂತರು, ವಸತಿ ಸಮುಚ್ಚಯಗಳು ಹೀಗೆ ಪ್ರತಿಯೊಂದು ಲೆಕ್ಕವೂ ಸಿಗಬೇಕು. ಸಾರ್ವಜನಿಕರು ಕೊಂಚವಾದರೂ ಹಣ ಪಾವತಿ ಮಾಡಿ ನೀರಿನ ಸಂಪರ್ಕ ಪಡೆಯಬೇಕು. ಅಕ್ರಮ ಸಂಪರ್ಕ ಪಡೆದಿರುವವರು ಸಕ್ರಮ ಮಾಡಿಕೊಳ್ಳಬೇಕು. ಬಿಡ್ಬ್ಯೂ ಎಸ್ ಎಸ್ ಬಿ ಉಳಿವಿಗೆ ಮತ್ತು ಎಲ್ಲರಿಗೂ ನೀರನ್ನು ಒದಗಿಸಿಕೊಡಲು ನಾವು ತೀರ್ಮಾನ ಮಾಡಬೇಕಿದೆ ಎಂದರು.
ಮುಂಬರುವ ಬೇಸಿಗೆ ವೇಳೆಗೆ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗಬಾರದು ಎನ್ನುವ ಸೂಚನೆ ನೀಡಲಾಗಿದೆ. ಜೊತೆಗೆ ಅಂತರ್ಜಲ ಹೆಚ್ಚಳಕ್ಕೆ ಯಾವುದಾದರೂ ಕೆರೆ ತುಂಬಿಸಬೇಕಿದ್ದರೆ ಈ ಕುರಿತು ಶೀಘ್ರ ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಕಾವೇರಿ 5 ನೇ ಹಂತದ ಕುಡಿಯುವ ನೀರಿನ ಯೋಜನೆಯಡಿ ಇದುವರೆಗೂ ಸುಮಾರು 15 ಸಾವಿರ ಹೊಸ ಸಂಪರ್ಕಗಳನ್ನು ನೀಡಲಾಗಿದೆ. ಇನ್ನೂ 20 ಸಾವಿರದಷ್ಟು ನೀರಿನ ಸಂಪರ್ಕಗಳನ್ನು ನೀಡಬೇಕಾಗಿದೆ. ಅಲ್ಲದೇ ಸಾಕಷ್ಟು ವಸತಿ ಸಮುಚ್ಚಯಗಳು ನೀರಿನ ಸಂಪರ್ಕಗಳನ್ನು ತೆಗೆದುಕೊಳ್ಳುತ್ತಿಲ್ಲ. ಅವರೆಲ್ಲಾ ಕಡ್ಡಾಯವಾಗಿ ಸಂಪರ್ಕ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.
ಸಾರ್ವಜನಿಕರ ಉಪಯೋಗಕ್ಕೆ ಎಂದು ಸರ್ಕಾರ ಹಣ ಖರ್ಚು ಮಾಡಿದೆ. ಅನೇಕ ಕಡೆ ಸೇವಾ ಶುಲ್ಕ, ಠೇವಣಿ ಶುಲ್ಕ ಸೇರಿದಂತೆ ಇತರೇ ಶುಲ್ಕಗಳನ್ನು ಕಟ್ಟಬೇಕು ಎಂದು ಅಕ್ರಮವಾಗಿ ಸಂಪರ್ಕ ಪಡೆದಿದ್ದಾರೆ. ಇದನ್ನು ತಡೆಯಲು ಸರ್ಕಾರ ಈಗಾಗಲೇ ಕಠಿಣ ಕ್ರಮ ತೆಗೆದುಕೊಂಡಿದೆ. ಪ್ರತಿಯೊಂದು ಮನೆ, ವಸತಿ ಸಮುಚ್ಚಯಕ್ಕೆ ಹೋಗಿ ಜನರಿಗೆ ತಿಳುವಳಿಕೆ ಮೂಡಿಸಿ ನೀರಿನ ಸಂಪರ್ಕ ಪಡೆದುಕೊಳ್ಳುವಂತೆ ಮನವಿ ಮಾಡಲು ಸೂಚನೆ ನೀಡಿದ್ದೇನೆ ಎಂದರು.
ಮಂಡಳಿಗೆ 1 ಸಾವಿರ ಕೋಟಿ ನಷ್ಟವಾಗುತ್ತಿದೆ. ಚರ್ಚೆಯ ನಂತರ ಬೆಲೆ ಏರಿಕೆ ಬಗ್ಗೆ ತಿಳಿಸಲಾಗುವುದು. ಇದರ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಬಡವರು ಹೆಚ್ಚು ಹಣ ನೀಡಲು ಆಗದಿದ್ದರೆ ಒಂದು ಲೀಟರ್ ಗೆ ಒಂದು ಪೈಸೆಯಾದರೂ ನೀಡಲಿ ಎಂಬುದು ನಮ್ಮ ಅಭಿಲಾಷೆ. ಇದರಿಂದ ನೀರಿನ ಬಳಕೆಯ ಲೆಕ್ಕ ದೊರೆಯಲಿ ಎನ್ನುವುದು ಇದರ ಉದ್ದೇಶ ಎಂದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿದ್ಯುತ್ ದರವನ್ನು ಕಡಿಮೆ ಮಾಡಿದೆ. ಬೆಲೆ ಏರಿಕೆಗೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಿಂದ ಇದೆಲ್ಲ ಆಗುತ್ತಿದೆ. ನೌಕರರಿಗೆ ಶೇ. 10 ರಷ್ಟು ಸಂಬಳ ಏರಿಕೆ, ಡಿಎ ಏರಿಕೆ ಮಾಡಲಾಗುತ್ತಿದೆಯಲ್ಲವೇ? ಏನೂ ಇಲ್ಲದೇ ಇನ್ನೆಷ್ಟು ದಿನ ಕಡಿಮೆ ಬೆಲೆಗೆ ನೀಡಲು ಆಗುತ್ತದೆ. ಮಂಡಳಿಯಲ್ಲಿ ನೌಕರರು ಸಂಬಳ ನೀಡಿಲ್ಲ ಎಂದು ಜಗಳ ಮಾಡುತ್ತಿದ್ದಾರೆ ಎಂದರು.
ಬಿಡ್ಬ್ಯೂಎಸ್ಎಸ್ ಬಿಯಲ್ಲಿಯೂ ಓಟಿಎಸ್ ವ್ಯವಸ್ಥೆ ಬಗ್ಗೆ ಆಲೋಚನೆ ಮಾಡಲಾಗುತ್ತಿದೆ. ನೀರಿನ ಬಿಲ್ ಬಾಕಿ ಇಟ್ಟುಕೊಂಡಿರುವವರಿಗೆ ಈ ವ್ಯವಸ್ಥೆ ತರಲು ಅಧಿಕಾರಿಗಳಿಗೆ ವರದಿ ನೀಡಿ ಎಂದು ಸೂಚಿಸಿದ್ದೇನೆ ಎಂದರು.
ಸುರಂಗ ರಸ್ತೆ ನಿರ್ಮಾಣಕ್ಕಾಗಿ ರೂ. 17,780 ಕೋಟಿ ಮೊತ್ತದ ಟೆಂಡರ್ ಅನ್ನು ಫೆಬ್ರವರಿ ಅತ್ಯಂದ ವೇಳೆಗೆ ಕರೆಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಜೊತೆಗೆ ಮೂರುವರೆ ವರ್ಷಗಳ ಒಳಗಾಗಿ ಮುಗಿಯಬೇಕು ಎಂದು ತಿಳಿಸಿದ್ದೇನೆ. ಎರಡು ಹಂತದಲ್ಲಿ ಯೋಜನೆ ಪೂರ್ಣಗೊಳಿಸಲಾಗುವುದು. ಬಿಬಿಎಂಪಿಯಿಂದಲೂ ಹಣ ನೀಡಲಾಗುವುದು. ಸರ್ಕಾರದಿಂದಲೂ ಅನುದಾನ ನೀಡಲಾಗುವುದು. ಪವರ್ ಫೈನಾನ್ಸ್ ಕಾರ್ಪೋರೇಷನ್, ಹುಡ್ಕೋ ಸೇರಿದಂತೆ ಒಂದಷ್ಟು ಬ್ಯಾಂಕ್ ಗಳು ಸಾಲ ನೀಡಲು ಮುಂದೆ ಬಂದಿವೆ. ಇದಕ್ಕೂ ಹರಾಜು ಪ್ರಕ್ರಿಯೆ ಕರೆಯಲಾಗಿದೆ. ಯಾರು ಕಡಿಮೆ ಬಡ್ಡಿದರಕ್ಕೆ ಹಣ ನೀಡುತ್ತಾರೋ ಅವರಿಗೆ ಅವಕಾಶ ನೀಡಲಾಗುವುದು ಎಂದರು.




