ಬೆಂಗಳೂರು: ಆನ್‌ಲೈನ್ ಸುರಕ್ಷತೆ ಮತ್ತು ಡಿಜಿಟಲ್ ಪೌರತ್ವ ಕುರಿತು ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಜಾಗೃತಿ ಮೂಡಿಸುವ ಎರಡು ಉಪಕ್ರಮಗಳನ್ನು ಪ್ರಾರಂಭಿಸಲು ಕರ್ನಾಟಕ ಸರ್ಕಾರ ಟೆಕ್ ಸಂಸ್ಥೆ ಮೆಟಾದೊಂದಿಗೆ ಒಪ್ಪಂದದ ಪತ್ರಕ್ಕೆ ಸಹಿ ಹಾಕಿದೆ.
ಮೆಟಾ ಜೊತೆಗಿನ ಈ ಪಾಲುದಾರಿಕೆಯ ಮೂಲಕ, ಕರ್ನಾಟಕ ಸರ್ಕಾರ 2025ರ ವೇಳೆಗೆ 1 ಲಕ್ಷ ಶಿಕ್ಷಕರು ಮತ್ತು 10 ಲಕ್ಷ ವಿದ್ಯಾರ್ಥಿಗಳಿಗೆ ಡಿಜಿಟಲ್ ಸುರಕ್ಷತೆ ಮತ್ತು AR/VR ಕೌಶಲ್ಯಗಳಲ್ಲಿ ತರಬೇತಿ ನೀಡಲು ಯೋಜಿಸಿದೆ.
ಆನ್‌ಲೈನ್ ಸುರಕ್ಷತಾ ಉಪಕ್ರಮದ ಅಡಿಯಲ್ಲಿ, ರಾಜ್ಯದಾದ್ಯಂತ 100 ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಯುವಕರು (18-24 ವರ್ಷಗಳು) ಡಿಜಿಟಲ್ ಜಾಗೃತಿ ತರಬೇತಿಯನ್ನು ಪಡೆಯಲಿದ್ದಾರೆ. ಡಿಜಿಟಲ್ ಸುರಕ್ಷತೆಯಲ್ಲಿನ ಹೊಸ ಟ್ರೆಂಡ್‌ಗಳ ಬಗ್ಗೆ ಹೆಚ್ಚು ಗಮನ ಹರಿಸುವುದು ಕಾರ್ಯಕ್ರಮದ ಉದ್ದೇಶ. ಮೆಟಾ ಕಾಲೇಜುಗಳಾದ್ಯಂತ ಮಾಸ್ಟರ್ ಟ್ರೈನರ್‌ಗಳಿಗೆ ತರಬೇತಿ ನೀಡಲು ತರಬೇತುದಾರರನ್ನು ನಿಯೋಜಿಸಲಿದೆ.
ಡಿಜಿಟಲ್ ಪೌರತ್ವ ಉಪಕ್ರಮ, ಐಟಿಬಿಟಿ ಸಚಿವಾಲಯ ಮತ್ತು ಮೆಟಾ ನಡುವಿನ ಜಂಟಿ ಕಾರ್ಯಕ್ರಮವಾಗಿದ್ದು, ವಿವಿಧ ಸರ್ಕಾರಿ ಇಲಾಖೆಗಳಾದ್ಯಂತ ಮಾಹಿತಿ ಸೇವೆಗಳನ್ನು ತಲುಪಿಸಲು ವಾಟ್ಸ್‌ಅಪ್ ಚಾಟ್‌ಬಾಟ್ ಅನ್ನು ಅಭಿವೃದ್ಧಿಪಡಿಸಲಿದೆ. ಈ ಮೂಲಕ ನಾಗರಿಕ ಸಂವಹನಗಳನ್ನು ಸುವ್ಯವಸ್ಥಿತಗೊಳಿಸುವುದು ಮತ್ತು ನಾಗರಿಕ ಜಾಗೃತಿಗಾಗಿ ಡಿಜಿಟಲ್ ಸುರಕ್ಷತಾ ಚಾಟ್‌ಬಾಟ್ ರಚಿಸುವುದು ಕಾರ್ಯಕ್ರಮದ ಮೂಲ ಉದ್ದೇಶ.
ಈ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮೆಟಾ ಸಂಸ್ಥೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ತರಬೇತಿ ನೀಡುವಲ್ಲಿ ಮುಂದಾಳತ್ವ ವಹಿಸುವುದು ಹಾಗೂ ಸುರಕ್ಷಿತ ಆನ್‌ಲೈನ್ ಬಳಕೆ ಬಗ್ಗೆ ಜನರಿಗೆ ತರಬೇತಿ ನೀಡುವುದು ಅತಿ ಅವಶ್ಯಕ ಎಂದರು.
ಇಂದಿನ ಯುಗದಲ್ಲಿ ಆನ್‌ಲೈನ್ ಸುರಕ್ಷತೆ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ವಿಷಯದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರಬೇಕಿದ್ದು, ಗೇಮಿಂಗ್ ಮತ್ತು AI ಗಾಗಿ ಮೆಟಾದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸರ್ಕಾರವು ಯೋಜಿಸಿದೆ, ಈ ಮೂಲಕ ಡೀಪ್‌ಫೇಕ್‌ಗಳ ತಪ್ಪು ಮಾಹಿತಿಯನ್ನು ತಡೆಯಲು ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಎಆರ್/ವಿಆರ್ ಮತ್ತು ಅವುಗಳ ಅಪ್ಲಿಕೇಶನ್‌ಗಳಿಂದಾಗಿ ಭವಿಷ್ಯದಲ್ಲಿ ತಂತ್ರಜ್ಞಾನಗಳು, ಉದ್ಯೋಗ ಅವಕಾಶಗಳು, ಹೊಸ ವ್ಯವಹಾರ ಪ್ರಾರಂಭಿಸಲು, ಉದ್ಯಮಶೀಲತೆಗಾಗಿ ಅವಕಾಶಗಳನ್ನು ತೆರೆಯಲಿದೆ ಎಂದು ಹೇಳಿದರು.
ಡಿಜಿಟಲ್ ಕೌಶಲ್ಯಗಳೊಂದಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಮತ್ತು ಉದ್ಯೋಗ ಮಾರುಕಟ್ಟೆಯಲ್ಲಿ ಅವರ ಉದ್ಯೋಗವನ್ನು ಹೆಚ್ಚಿಸಲು ಸರ್ಕಾರ ಸಮಗ್ರ ಯೋಜನೆಯನ್ನು ಹೊಂದಿದೆ ಎಂದರು.
ಫೇಸ್‌ಬುಕ್‌ನ ಗ್ಲೋಬಲ್ ಪಬ್ಲಿಕ್ ಪಾಲಿಸಿಯ ಉಪಾಧ್ಯಕ್ಷ ಜೋಯಲ್ ಕಪ್ಲಾನ್ ಮಾತನಾಡಿ, ಡಿಜಿಟಲ್ ಸುರಕ್ಷತೆಯ ಕುರಿತು ಕರ್ನಾಟಕ ಸರ್ಕಾರದೊಂದಿಗೆ ಸಹಕರಿಸಲು ಸಂತಸವೆನಿಸುತ್ತಿದೆ, ಇದು ಡಿಜಿಟಲ್‌ನ ಉತ್ತಮ ಅಭ್ಯಾಸಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಲು ಯುವ ಬಳಕೆದಾರರನ್ನು ತೊಡಗಿಸಿಕೊಳ್ಳುವುದನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಈ ತರಬೇತಿ ಕಾರ್ಯಕ್ರಮಗಳಲ್ಲಿ ಸಾಮರ್ಥ್ಯ ನಿರ್ಮಾಣದ ಕಾರ್ಯಾಗಾರಗಳು, ಆನ್‌ಲೈನ್ ಮತ್ತು ಹೈಬ್ರಿಡ್ ಮೋಡ್ ಕಾರ್ಯಾಗಾರಗಳು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ನಡೆಸಲ್ಪಡುತ್ತವೆ. ಡಿಜಿಟಲ್ ಸುರಕ್ಷಿತ ಜಗತ್ತನ್ನು ಸೃಷ್ಟಿಸುವ ಬದ್ಧತೆಯಂತೆ, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಡಿಜಿಟಲ್ ನಾಗರಿಕ ಪ್ರತಿಜ್ಞೆ ತೆಗೆದುಕೊಳ್ಳಲಿದ್ದಾರೆ.




